ಕೃಷಿ ಪ್ರೀತಿ, ಕೃಷ್ಣಪ್ಪಗೌಡರಿಗೆ ಒಲಿದ ಆರ್ಯಭಟ ಪ್ರಶಸ್ತಿ

5:09 PM, Monday, October 16th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Krushnappa gowda  ಮಂಗಳೂರು: ಮಂಗಳೂರಿನ ಈ ಸಾಮಾನ್ಯ ಟೆರೇಸ್ ಮನೆ ಮಹಡಿ ಮೇಲೆ ಹೋಗಿ ನೋಡಿದರೆ ಹಚ್ಚ ಹಸುರಿನ ಸುಂದರ ತೋಟ ಕಾಣಿಸುತ್ತದೆ. ಈ ತೋಟದಲ್ಲಿ ತರಹೇವಾರಿ ಹೂ ಗಿಡಗಳಿಂದ ಹಿಡಿದು ಹಣ್ಣು ತರಕಾರಿ, ಭತ್ತದ ತನಕ ಪುಟ್ಟದೊಂದು ಸಸ್ಯಕಾಶಿಯ ದರ್ಶನವಾಗುತ್ತದೆ.

ಹೌದು, ಮಂಗಳೂರು ನಗರದಲ್ಲಿ ಈಗ ಎಲ್ಲಿ ನೋಡಿದರೂ ಬರೀ ಕಾಂಕ್ರೀಟ್ ರಸ್ತೆಗಳು ಬಾನೆತ್ತರದ ಕಟ್ಟಡಗಳೆ ಕಾಣಿಸುತ್ತದೆ. ಆದರೆ ಇಲ್ಲೊಬ್ಬರು ತಮ್ಮ ಮನೆಯ ಟೆರೇಸ್ ಅನ್ನೆ ಒಂದು ಸುಂದರ ತೋಟವನ್ನಾಗಿ ಮಾರ್ಪಾಡಿಸಿದ್ದಾರೆ. ಮಾತ್ರವಲ್ಲ ವರ್ಷಕ್ಕೆ ಸುಮಾರು 50 ಕೆ ಜಿ ಭತ್ತವನ್ನು ಬೆಳೆಯುತ್ತಾರೆ. ಇಂತಹ ಅಪರೂಪದ ತೋಟವೊಂದನ್ನು ತಮ್ಮ ಮನೆ ಛಾವಣಿ ಮೇಲೆಯೇ ಪೋಷಣೆ ಮಾಡುತ್ತಿದ್ದಾರೆ ಕೃಷ್ಣಪ್ಪಗೌಡ ಪಡ್ಡಂಬೈಲ್.

ನಗರದಿಂದ ಸುಮಾರು ನಾಲ್ಕು ಕಿ.ಮೀ. ದೂರದ ಮರೋಳಿ ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆಯಲ್ಲಿರುವ ತಮ್ಮ ಮನೆಯನ್ನೇ ಕೃಷಿ ಚಟುವಟಿಕೆಗೆ ತಾಣವಾಗಿಸಿಕೊಂಡಿದ್ದಾರೆ. ಕಳೆದ 16 ವರ್ಷಗಳಿಂದ ಈ ತಾರಸಿ ತೋಟವನ್ನು ನಿರ್ವಹಿಸುತ್ತಿದ್ದಾರೆ. ಇವರದು ಸರ್ಕಾರಿ ಉದ್ಯೋಗದೊಂದಿಗೆ ಹಾಸು ಹೊಕ್ಕಾಗಿರುವ ಕೃಷಿ ಬದುಕು. ಜಿಲ್ಲಾ ಪಂಚಾಯತ್‌ನಲ್ಲಿ ಸೇವೆ ಸಲ್ಲಿಸಿದ ಬಳಿಕ ಹಂಪನಕಟ್ಟೆ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉದ್ಯೋಗಿಯಾಗಿದ್ದಾರೆ. ಮೂಲತಃ ಸುಳ್ಯದವರು. ಉದ್ಯೋಗ ನಿಮಿತ್ತ ನಗರಕ್ಕೆ ಬಂದರೂ ತಮ್ಮ ಮೂಲ ಕೃಷಿ ಬಗೆಗಿನ ಗೀಳು ಬಿಟ್ಟಿರಲಿಲ್ಲ.

Krushnappa gowda  ಗೌಡರು ತಮ್ಮ ಮನೆಯ ತಾರಸಿ ಮೇಲೆ ಮೂಲಂಗಿ, ಬೀಟ್ರೋಟ್, ಶ್ರೀಲಂಕ ತಿಮರೆ, ಬೂದುಗುಂಬಳ, ಪಡುವಲಕಾಯಿ, ಕರಿಮೆಣಸು, ನೇರಳೆ, ಹಾಗಲಕಾಯಿ ಹೀಗೆ ಹಲವಾರು ತರಕಾರಿಗಳನ್ನು ಬೆಳೆದಿದ್ದಾರೆ. ವೀಳ್ಯ, ನೆಲ ನೆಲ್ಲಿ, ಗಡಿ ಸೊಪ್ಪಿ, ಅಮೃತಬಳ್ಳಿ, ಶಂಕರ ಪುಷ್ಪದಂತಹ ಔಷಧೀಯ ಸಸ್ಯಗಳು, ಮಲ್ಲಿಗೆ, ಗುಲಾಬಿ, ದಾಸವಾಳದಂತಹ ಹೂವಿನ ಗಿಡ, ಚೆರ್ರಿಹಣ್ಣು, ಫೈನಾಫಲ್, ಜೋಳ, ವಿವಿಧ ತಳಿಯ ಬಾಳೆಹಣ್ಣು , ದಾಳಿಂಬೆ, ಸೇಬು ಮುಂತಾದ ತರಕಾರಿ ಹಣ್ಣುಗಳನ್ನು ಇವರು ಬೆಳೆದಿದ್ದಾರೆ.

ತಾರಸಿ ಗಾರ್ಡನಿಂಗ್‌ನಲ್ಲಿ ಕ್ಯೂಬಾ ದೇಶ ಪ್ರಥಮ ಸ್ಥಾನದಲ್ಲಿದ್ದರೆ, ಭಾರತದಲ್ಲಿ ಕೇರಳ ಮುಂದಿದೆ. ಮಂಗಳೂರಿನಲ್ಲಿ ಈ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಿದ್ದಾರೆ ಕೃಷ್ಣಪ್ಪ ಗೌಡರು. ತಮ್ಮ ಮನೆಯಲ್ಲಿ ಬಳಸಿದ ಹೂವು ಸಸ್ಯಗಳ ತ್ಯಾಜ್ಯಗಳನ್ನು ದೊಡ್ಡ ಬಕೆಟ್‌ವೊಂದರಲ್ಲಿ ಹಾಕಿ , ಅದರೊಂದಿಗೆ ಸೆಗಣಿ ಮಿಶ್ರಣ ಮಾಡಿ ಮನೆಯಲ್ಲೇ ಗೊಬ್ಬರ ತಯಾರಿಸುತ್ತಾರೆ. ಇದೇ ಗೊಬ್ಬರವನ್ನು ತಾವು ಬೆಳೆಸಿದ ಗಿಡಗಳಿಗೆ ಹಾಕುತ್ತಾರೆ. ಇದರಿಂದ ಗಿಡಗಳು ಹುಲುಸಾಗಿ ಬೆಳೆದಿವೆ.

ಕೃಷಿ ಇಲಾಖೆಯ ಪ್ರಶಸ್ತಿ ಸಹಿತ ವಿವಿಧ ಪುರಸ್ಕಾರಗಳನ್ನು ಪಡೆದಿರುವ ಕೃಷ್ಣಪ್ಪ ಗೌಡರು, ರಾಜ್ಯಾದ್ಯಾಂತ ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳಿಗೆ ತೆರಳಿ ಉಚಿತವಾಗಿಯೇ ತಾರಸಿ ಕೃಷಿಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇವರ ಚಟುವಟಿಕೆಗೆ ಈಗ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಕೂಡ ಲಭಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English