ಮಂಗಳೂರು: ಕಳೆದ 3 ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರಮೋದಿ ನೇತೃತ್ವದ ಸರಕಾರವು ಹೆಜ್ಜೆ ಹೆಜ್ಜೆಗೂ ಜನ ವಿರೋಧಿಯಾಗಿ ವರ್ತಿಸುತ್ತಿದೆ. ಸರಕಾರದ ತಪ್ಪುಗಳನ್ನು ಎಳೆಎಳೆಯಾಗಿ ಬಿಡಿಸಿ ಜನರ ಮಧ್ಯೆ ಜಾಗೃತಿ ಮೂಡಿಸುವ ಕೆಲಸವನ್ನು ಸಿಪಿಐ(ಎಂ) ದೇಶಾದ್ಯಂತ ಜನಾಂದೋಲನದ ಮೂಲಕ ನಡೆಸುತ್ತಿದೆ. ಇದರಿಂದ ಕಂಗೆಟ್ಟ ಬಿಜೆಪಿ ಸಂಘ ಪರಿವಾರವು ದೇಶಾದ್ಯಂತ ಕಮ್ಯುನಿಸ್ಟರ ಮೇಲೆ ಧಾಳಿ, ಕೊಲೆ, ಅಪಪ್ರಚಾರಗಳು, ಕಚೇರಿಗಳ ಧ್ವಂಸ ಮುಂತಾದ ದುಷ್ಕೃತ್ಯಗಳನ್ನು ಮಾಡುತ್ತಿದ್ದು, ಇದು ಸಂಘ ಪರಿವಾರದ ಹತಾಶೆಯ ಸಂಕೇತವಾಗಿದೆ ಎಂದು ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್‌ರವರು ಹೇಳಿದರು.
ಅವರು ಸಿಪಿಐ(ಎಂ) ಬಜಾಲ್ ಜಲ್ಲಿಗುಡ್ಡೆ ಶಾಖೆಗಳ ಸಮ್ಮೇಳನದ ಅಂಗವಾಗಿ ಜಲ್ಲಿಗುಡ್ಡೆಯಲ್ಲಿ ಜರುಗಿದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ಮಾತುಗಳನ್ನು ಹೇಳಿದರು. ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ಸದಸ್ಯರಾದ ಜಯಂತಿ ಬಿ. ಶೆಟ್ಟಿಯವರು ಮಾತನಾಡುತ್ತಾ, ’ಮೋದಿ ಸರಕಾರವು ಒಂದು ಕಡೆ ಭೇಟಿ ಬಚಾವೋ, ಭೇಟಿ ಪಡಾವೋ ಎಂಬಂತಹ ಬಣ್ಣ ಬಣ್ಣದ ಯೋಜನೆಗಳ ಮುಖಾಂತರ ಮಹಿಳೆಯರನ್ನು ವಂಚಿಸುತ್ತಿದೆ. ಮತ್ತೊಂದು ಕಡೆ ದೇಶಾದ್ಯಂತ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆದ ದಾಳಿ ಇದಕ್ಕೆ ಜೀವಂತ ಸಾಕ್ಷಿ. ಒಟ್ಟಿನಲ್ಲಿ ಮಹಿಳೆಯರು ಸೇರಿದಂತೆ ದಲಿತರು-ಅಲ್ಪಸಂಖ್ಯಾತರು ದೇಶದಲ್ಲಿ ಜೀವ ಭಯದಿಂದ ಬದುಕುವಂತಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ನಡೆಸಿದ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಸಮಿತಿ ಸದಸ್ಯರಾದ ಪ್ರೇಮನಾಥ ಜಲ್ಲಿಗುಡ್ಡೆಯವರು ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರವೂ ಕೂಡ ಜನತೆಯ ಹಿತರಕ್ಷಣೆ ಮಾಡದೆ ಜನವಿರೋಧಿಯಾಗಿ ವರ್ತಿಸುತ್ತಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸಿಪಿಐ(ಎಂ) ಯುವ ನಾಯಕರಾದ ಸುರೇಶ್ ಬಜಾಲ್, ಮೋಹನ್ ಜಲ್ಲಿಗುಡ್ಡೆ, ಮಮತಾ ಜಲ್ಲಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು
Click this button or press Ctrl+G to toggle between Kannada and English