ಮಂಗಳೂರು: ಜಿಎಸ್‌ಟಿ ಬಿಸಿ ಇದ್ದರೂ ಮನೆ, ಮನ ಬೆಳಗುವ ಹಬ್ಬಕ್ಕೆ ಅಗತ್ಯ ಸಾಮಗ್ರಿ ಖರೀದಿಯಲ್ಲಿ ಜನರು ತೊಡಗಿದ್ದಾರೆ. ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ವಿವಿಧ ವಿನ್ಯಾಸಗಳ ಗೂಡು ದೀಪ, ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಹಿಂದೆ ಮನೆಗಳಲ್ಲಿಯೇ ಗೂಡು ದೀಪಗಳು ತಯಾರಾಗುತ್ತಿದ್ದವು. ಆದರೆ ಇಂದು ನಿರಾಸಕ್ತಿಯ ಜೊತೆಗೆ ಮೈತುಂಬ ಕೆಲಸಗಳ ಮಧ್ಯೆ ಇಂತಹ ಕುಸುರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮಾರುಕಟ್ಟೆಗಳಲ್ಲಿ ಅತ್ಯಾಕರ್ಷಕ ಗೂಡು ದೀಪಗಳಿಗೆ ಬೇಡಿಕೆ ಹೆಚ್ಚಿದೆ.
ಇನ್ನು ಉದ್ಯೋಗ ನಿಮಿತ್ತ ಉತ್ತರ ಕರ್ನಾಟಕದಿಂದ ಮಂಗಳೂರಿನಲ್ಲಿ ನೆಲೆಸಿರುವ ಮಂದಿಯದ್ದು ಹಬ್ಬಗಳಿಗೆ ತಕ್ಕನಾದ ವಸ್ತುಗಳ ಮಾರಾಟ. ಸಾಮಾನ್ಯವಾಗಿ ತರಕಾರಿ ಮಾರಿ ಜೀವನ ಮಾಡುವ ಇವರು ಗಣೇಶ ಚತುರ್ಥಿ, ನವರಾತ್ರಿ ಬಂದರೆ ಹೂವು, ಲಿಂಬೆಹಣ್ಣಿನ ವ್ಯಾಪಾರ, ರಂಜಾನ್ ಬಂದರೆ ಶುಂಠಿ, ಹಸಿಮೆಣಸಿನಕಾಯಿ ವ್ಯಾಪಾರ, ಇದೀಗ ದೀಪಾವಳಿಗೆ ಹಣತೆಗಳ ವ್ಯಾಪಾರದಲ್ಲಿ ನಿರತರಾಗಿದ್ದಾರೆ.
ಜೇಡಿಮಣ್ಣು, ಹಂಚುಗಳಿಂದ ಮಾಡಿದ ಹಣತೆಗಳನ್ನು ಚೆನ್ನೈಯಿಂದ ತರಿಸಿಕೊಂಡರೆ ಮಾರಾಟವೇನೋ ಚೆನ್ನಾಗಿಯೇ ನಡೆಯುತ್ತದೆ. ಆದರೆ, ಒಂದು ಸಾವಿರ ಹಣತೆಯಲ್ಲಿ ಸುಮಾರು 200ರಷ್ಟು ಒಡೆದು ಹಾಳಾಗುವುದರಿಂದ ಲಾಭದಲ್ಲಿ ಕೊಂಚ ಇಳಿಮುಖವಾಗುತ್ತದೆ ಅನ್ನುತ್ತಾರೆ ವ್ಯಾಪಾರಿಗಳು.
ದೀಪಾವಳಿ ಅಂದರೆ ಕೇವಲ ಬೆಳಕಲ್ಲ. ಪಟಾಕಿಗಳ ಸದ್ದು ಕೂಡಾ ಇರುತ್ತದೆ. ಹೀಗಾಗಿಯೇ ಪಟಾಕಿಗಳ ಖರೀದಿಯೂ ಜೋರಾಗಿದೆ. ಹಿಂದೂ ಸಂಘಟನೆಗಳು ಚೀನಾ ಪಟಾಕಿ ಖರೀದಿ ಮಾಡಬಾರದೆಂದು ಕೊಟ್ಟ ಕರೆಯ ಪರಿಣಾಮವಾಗಿ ಸೆಂಟ್ರಲ್ ಮಾರುಕಟ್ಟೆಗಳಲ್ಲಿ ಭಾರತೀಯ ಹೆಸರುಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
Click this button or press Ctrl+G to toggle between Kannada and English