ಕೆಪಿಸಿಸಿಯ ಮಾಜಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಬಿಜೆಪಿ ಸೇರುವುದು ಖಚಿತ

12:59 PM, Wednesday, October 18th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

harikrishna bhantwalಮಂಗಳೂರು: ಕೆಪಿಸಿಸಿಯ ಮಾಜಿ ವಕ್ತಾರ, ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಶಿಷ್ಯ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ್ ಬಿಜೆಪಿ ಸೇರಲಿದ್ದಾರೆ ಎಂದು ಬಲ್ಲ ಮೂಲಗಳು ಹೇಳಿವೆ. ನ. 11ರಂದು ಮಂಗಳೂರಿನಲ್ಲಿ ನಡೆಯುವ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಧಾನ ಪರಿಷತ್ ಚುನಾವಣೆ ವೇಳೆ ತನಗೆ ಟಿಕೆಟ್ ನೀಡುವುದಾಗಿ ಕೊನೆ ಕ್ಷಣದಲ್ಲಿ ಕೈಕೊಟ್ಟ ಕಾಂಗ್ರೆಸ್ ಹಿರಿಯ ನಾಯಕರ ವರ್ತನೆಯಿಂದ ಅಸಮಾಧಾನಗೊಂಡಿದ್ದ ಹರಿಕೃಷ್ಣ ಬಂಟ್ವಾಳ್ ಪಕ್ಷದಿಂದ ದೂರ ಉಳಿದು, ವಿಧಾನ ಪರಿಷತ್ ಚುನಾವಣೆಯಲ್ಲಿ ಕೈ ಎದುರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಂಟ್ವಾಳ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಈ ಮಧ್ಯೆ ಪ್ರಮುಖ ಕಾಂಗ್ರೆಸ್ ನಾಯಕರು ಇವರ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಮರಳುವಂತೆ ಮನವಿ ಮಾಡಿಕೊಂಡಿದ್ದರೂ ಹರಿಕೃಷ್ಣ ಅವರ ನಿರ್ಧಾರ ಅಚಲವಾಗಿತ್ತು.

ಜನಸಂಘದಿಂದ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದ ಹರಿಕೃಷ್ಣ ಬಂಟ್ವಾಳ್ ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ ಕೂಡಾ ಅನುಭವಿಸಿದವರು. 1982-83ರಲ್ಲಿ ಆಗಿನ ಕೇಂದ್ರ ಸಚಿವರಾಗಿದ್ದ ಜನಾರ್ದನ ಪೂಜಾರಿಯವರ ಮೂಲಕ ಕಾಂಗ್ರೆಸ್‌ಗೆ ಅಡಿಯಿಟ್ಟ ಹರಿಕೃಷ್ಣರು ಒಬ್ಬ ಸಂಘಟಕನಾಗಿ, ವಾಗ್ಮಿಯಾಗಿ ಮಿಂಚಿದ್ದರು. ಜನಾರ್ದನ ಪೂಜಾರಿಯವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಹರಿಕೃಷ್ಣ ಬಂಟ್ವಾಳ್ ಅವರಿಗೆ ಆರಂಭದಲ್ಲಿ ಟಿಕೆಟ್ ನೀಡುವುದಾಗಿ ಪಕ್ಷದ ಪ್ರಮುಖರು ತಿಳಿಸಿದ್ದರಾದರೂ ಜನಾರ್ದನ ಪೂಜಾರಿಯವರ ಆಪ್ತರಾಗಿದ್ದರೆಂಬ ಕಾರಣಕ್ಕಾಗಿ ಟಿಕೆಟ್ ನಿರಾಕರಿಸಲಾಯಿತು. (ಪೂಜಾರಿಯವರಿಗೆ ಅವಮಾನ ಮಾಡುವ ಪಕ್ಷದಲ್ಲಿ ತಾನಿರುವುದಿಲ್ಲವೆಂದು ಹಿಂದೊಮ್ಮೆ ಹರಿಕೃಷ್ಣ ಬಂಟ್ವಾಳ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದರು.)

ಪಕ್ಷೇತರ ಅಭ್ಯರ್ಥಿಯಾಗಿ ಕಣದ್ದಲ್ಲಿದ್ದ ಹರಿಕೃಷ್ಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಇದಕ್ಕೆಲ್ಲಾ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್, ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣವೆಂದು ಅವರು ದೂಷಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English