ಮಂಗಳೂರು: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥದ ನಿರ್ಮಾಣ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಉದ್ಯಮಿ ಹಾಗೂ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ತನ್ನ ಸ್ವಂತ ಖರ್ಚಿನಲ್ಲಿ ಕ್ಷೇತ್ರಕ್ಕೆ ಬ್ರಹ್ಮರಥ ನಿರ್ಮಿಸುವ ಪ್ರಸ್ತಾಪವನ್ನು ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಮುಂದಿಟ್ಟಿದ್ದಾರೆ. ಈ ವಿಚಾರವನ್ನು ವ್ಯವಸ್ಥಾಪನಾ ಮಂಡಳಿ ಇಂದು ದೇವಸ್ಥಾನದಲ್ಲಿ ನಡೆದ ದೇವಸ್ಥಾನದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಪ್ರಸ್ತುತ ಪಡಿಸಿದ್ದು, ಇದಕ್ಕೆ ಭಕ್ತರಿಂದ ವಿರೋಧ ವ್ಯಕ್ತವಾಗಿದೆ.
ಕೇವಲ ಒಬ್ಬ ಭಕ್ತ ಕೊಡುವ ಬ್ರಹ್ಮರಥದಲ್ಲಿ ಸುಬ್ರಮಣ್ಯ ಸ್ವಾಮಿ ಸಂತುಷ್ಚನಾಗಲಾರ. ಈ ಕಾರಣಕ್ಕಾಗಿ ಸ್ವಾಮಿಗೆ ಭಕ್ತರೆಲ್ಲಾ ನೀಡಿದ ಕಾಣಿಕೆಯ ಹಣವನ್ನು ಸೇರಿಸಿ ಬ್ರಹ್ಮರಥ ನಿರ್ಮಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ದೇವಸ್ಥಾನದ ಗರ್ಭಗುಡಿ ಹಾಗೂ ಬ್ರಹ್ಮರಥಕ್ಕೆ ಭಾರೀ ಪಾವಿತ್ರ್ಯತೆಯಿದ್ದು, ಇದನ್ನು ಕೇವಲ ಒಬ್ಬ ವ್ಯಕ್ತಿ ನಿರ್ಮಿಸುವ ಸಂಪ್ರದಾಯವಿಲ್ಲ. ಭಕ್ತಾದಿಗಳು ತಮ್ಮ ಕೈಲಾದಷ್ಟು ನೀಡಿದ ದೇಣಿಗೆಯಲ್ಲಿ ಈ ಎರಡನ್ನೂ ನಿರ್ಮಿಸಬೇಕಾಗುತ್ತದೆ. ಅಲ್ಲದೆ 1962 ರಿಂದಲೇ ದೇವಸ್ಥಾನದಲ್ಲಿ ಭಕ್ತರಿಂದ ಬ್ರಹ್ಮರಥ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಇತ್ತೀಚಿನವರೆಗೂ ಇದು ನಡೆದುಕೊಂಡು ಬಂದಿದೆ.
ಆದರೆ ಇದೀಗ ಏಕಾಏಕಿ ಉದ್ಯಮಿಯ ಸ್ವಂತ ಹಣವನ್ನು ಬಳಸಿ ಬ್ರಹ್ಮರಥ ನಿರ್ಮಾಣ ಮಾಡುವ ಔಚಿತ್ಯವನ್ನು ಭಕ್ತರು ಪ್ರಶ್ನಿಸಿದ್ದಾರೆ.
Click this button or press Ctrl+G to toggle between Kannada and English