ಪಂಪ್‌ ವೆಲ್‌ನ ಫ್ಲೈಓವರ್‌ ಕಾಮಗಾರಿಯಲ್ಲಿ ಮತ್ತೊಂದು ಎಡವಟ್ಟು

5:43 PM, Monday, October 23rd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

pumpwell fly over ಮಂಗಳೂರು: ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿರುವ ರಾ.ಹೆ. 66 ಹಾಗೂ 75ರ ಸಂಗಮ ಸ್ಥಳವಾದ ಪಂಪ್‌ ವೆಲ್‌ನ ಫ್ಲೈಓವರ್‌ ಕಾಮಗಾರಿಯಲ್ಲಿ ಈಗ ಮತ್ತೊಂದು ಎಡವಟ್ಟಾಗಿದೆ. ಮಾರ್ಚ್‌ ಅಂತ್ಯದ ವೇಳೆಗೆ ಪೂರ್ಣಗೊಳ್ಳಬೇಕಿದ್ದ ಫ್ಲೈ ಓವರ್‌ ಕಾಮಗಾರಿ ಇನ್ನಷ್ಟು ವಿಳಂಬವಾಗುವ ಲಕ್ಷಣ ಸ್ಪಷ್ಟವಾಗುತ್ತಿದೆ. ಕಾಮಗಾರಿಯಲ್ಲಿ ಲೋಪ ಎದುರಾದ ಹಿನ್ನೆಲೆಯಲ್ಲಿ ಫ್ಲೈ ಓವರ್‌ನ ಒಂದು ಭಾಗದಲ್ಲಿ ಅಳವಡಿಸಿದ ‘ಗರ್ಡರ್‌’ (ಕಾಂಕ್ರೀಟ್‌ನ ಉದ್ದದ ಸ್ತಂಭಗಳು) ಒಂದನ್ನು ಹಿಟಾಚಿ ಯಂತ್ರದ ಮೂಲಕ ಕತ್ತರಿಸಲಾಗುತ್ತಿದೆ.

ಫ್ಲೈ ಓವರ್‌ ಜೋಡಿಸುವ ‘ಗರ್ಡರ್‌’ ಅಳವಡಿಕೆ ಇಲ್ಲಿ ನಡೆಯುತ್ತಿದೆ. ಐದಾರು ಗರ್ಡರ್‌ಗಳನ್ನು ಜೋಡಿಸಲಾಗಿದೆ. ಗರ್ಡರ್‌ಗಳನ್ನು ಕಾಮಗಾರಿ ಕೈಗೊಂಡ ಗುತ್ತಿಗೆದಾರರು ನಿಗದಿತ ಸ್ಥಳದಲ್ಲಿ ನಿರ್ಮಿಸಿ, ಬೃಹತ್‌ ಗಾತ್ರದ ಲಾರಿಯ ಮೂಲಕ ಕಾಮಗಾರಿ ನಡೆಸುವಲ್ಲಿಗೆ ತಂದು ಅದನ್ನು ಅತ್ಯಂತ ಜಾಗ್ರತೆಯಿಂದ ಜೋಡಿಸುತ್ತಾರೆ. ಆದರೆ, ಪಂಪ್‌ವೆಲ್‌ನಲ್ಲಿ ಜೋಡಿಸಿದ ಒಂದು ಗರ್ಡರ್‌ನಲ್ಲಿ ಸ್ವಲ್ಪ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ಬದಲಿಸಲು ನಿರ್ಧರಿಸಿ, ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದಾಗ, ಒಂದು ಗರ್ಡರ್‌ನಲ್ಲಿ ಬಿರುಕು ಇರುವುದನ್ನು ಪತ್ತೆ ಹಚ್ಚಿದ್ದಾರೆ. ಗರ್ಡರ್‌ ಜೋಡಿಸುವಾಗ ಆದ ಎಡವಟ್ಟಿನಿಂದಾಗಿ ಇದರಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿತ್ತು. ಅಧಿಕಾರಿಗಳ ಸೂಚನೆ ಮೇರೆಗೆ ಗರ್ಡರ್‌ ತೆರವು ನಡೆಯುತ್ತಿದೆ. ಹೊಸ ಗರ್ಡರ್‌ ಅಳವಡಿಕೆ ಕಾರ್ಯವನ್ನು ಗುತ್ತಿಗೆದಾರ ಕಂಪೆನಿಯೇ ನಿರ್ವಹಿಸಬೇಕಿದೆ.

ಪಂಪ್‌ವೆಲ್‌ ಫ್ಲೈ ಓವರ್‌ ಕಾಮಗಾರಿ ಕುಂಟುತ್ತಾ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕವೂ ಸಾರ್ವಜನಿಕರು ಇದನ್ನು ಅಪಹಾಸ್ಯ ಮಾಡಿದ ಪರಿಣಾಮ ಸುದ್ದಿಯಲ್ಲಿತ್ತು. ಸಂಸದ ನಳಿನ್‌ ಕುಮಾರ್‌ ಕಟೀಲು ಇತ್ತೀಚೆಗೆ ಮಂಗಳೂರಿನಲ್ಲಿ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ತುರ್ತಾಗಿ ಫ್ಲೈ ಓವರ್‌ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದ್ದರು. ಮಾರ್ಚ್‌ ವೇಳೆಗೆ ಈ ಫ್ಲೈ ಓವರ್‌ ಅನ್ನು ಸಾರ್ವಜನಿಕರಿಗೆ ಬಿಟ್ಟುಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಐದು ವರ್ಷಗಳ ಸುದೀರ್ಘ‌ ಅವಧಿಯಿಂದ ಶೇ. 30ರಷ್ಟು ಮಾತ್ರ ಮುಗಿದಿರುವ ಕಾಮಗಾರಿ ಇನ್ನು 5 ತಿಂಗಳ ಒಳಗೆ ಪೂರ್ಣಗೊಳ್ಳುವುದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.

ಪ್ರತಿಷ್ಠಿತ ಪಂಪ್‌ವೆಲ್‌ ಫ್ಲೈ ಓವರ್‌ ಕಾಮಗಾರಿ ಅತ್ಯಂತ ಕ್ಷಿಪ್ರಗತಿಯಲ್ಲಿ ನಡೆಯ ಬೇಕಿತ್ತು. ಹೆದ್ದಾರಿ ಕೆಲಸ ಆಗಿ ಫ್ಲೈಓವರ್‌ಗಾಗಿ ಇಷ್ಟು ವರ್ಷ ತಗಲುತ್ತದೆ ಎಂದರೆ ಅಚ್ಚರಿಯೇ. ಬಹುತೇಕ ಸಂದರ್ಭದಲ್ಲಿ ಒಂದಿಬ್ಬರು ಮಾತ್ರ ಇದರ ಕಾಮಗಾರಿ ನಡೆಸುತ್ತಿರುತ್ತಾರೆ. ಹೀಗಾದರೆ, ಈ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತದೆ. ಮನೆ ಕಟ್ಟುವ ಕೆಲಸಕ್ಕೂ ಹತ್ತಾರು ಜನ ಬೇಕಾಗುತ್ತಾರೆ. ಸಮರೋಪಾದಿಯಲ್ಲಿ ನಡೆಯಬೇಕಾದ ಈ ಕಾಮಗಾರಿಯನ್ನು ಒಂದಿಬ್ಬರು ಮಾಡಿ ದರೆ, ಮಾರ್ಚ್‌ ವೇಳೆಗೆ ಮುಗಿಯುವುದು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರದ್ದು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English