ಮಂಗಳೂರು: ಮೇಯರ್ ಕವಿತಾ ಸನಿಲ್, ವಾಚ್‌ಮನ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದೇನೆ ಎಂಬುದು ಶುದ್ಧ ಸುಳ್ಳು. ಇದು ಬಿಜೆಪಿಯವರು ಮಾಡಿದ ಪಿತೂರಿ. ನಾನು ಮಾಡುವ ಅಭಿವೃದ್ಧಿ ಕೆಲಸವನ್ನು ಸಹಿಸಲಾಗದೆ ಇವರ ಮೂಲಕ ಸಂಚು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನವಿಡಿ ಫೋನ್ ಇನ್ ಕಾರ್ಯಕ್ರಮದಲ್ಲಿ ತೊಡಗಿದ್ದ ನನಗೆ ಮಧ್ಯಾಹ್ನದ ನಂತರವೇ ನನ್ನ ವಿರುದ್ಧ ಸುಳ್ಳು ವರದಿ ಬರುತ್ತಿರುವುದು ಬೇರೆಯವರ ಮೂಲಕ ಗೊತ್ತಾಗಿದೆ. ಅಲ್ಲಿಂದ ಮನೆಗೆ ಹೋಗಿ ಅಪಾರ್ಟ್‌ಮೆಂಟ್ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ, ಪಾಲಿಕೆಯಲ್ಲಿ ಪ್ರತಿಪಕ್ಷದ ಸದಸ್ಯರಾದ ರೂಪಾ ಬಂಗೇರಾ ಹಾಗೂ ಬಿಜೆಪಿ ಮಹಿಳಾ ಮೋರ್ಚಾದ ಪೂಜಾ ಪೈ ವಾಚ್‌ಮನ್ ದಂಪತಿಯನ್ನು ಭೇಟಿಯಾಗಿ 35 ನಿಮಿಷಗಳ ಕಾಲ ಮಾತುಕತೆಯಲ್ಲಿ ತೊಡಗಿರುವುದು ಗೊತ್ತಾಗಿದೆ.
ದೀಪಾವಳಿಯ ಸಂದರ್ಭ ನಾನು ಮನೆಯಲ್ಲಿರಲಿಲ್ಲ. ಮಕ್ಕಳು ಪಟಾಕಿ ಸಿಡಿಸುವ ವೇಳೆ ನಕ್ಷತ್ರ ಕಡ್ಡಿಗಳನ್ನು ಬದಿಯಲ್ಲಿಟ್ಟಿದ್ದರು. ಈ ಬಿಸಿ ನಕ್ಷತ್ರ ಕಡ್ಡಿಯನ್ನು ವಾಚ್‌ಮನ್ ಮಗ, ನನ್ನ ಮಗಳ ಕಾಲಿಗೆ ಎಸೆದಿದ್ದಾನೆ. ಅದಕ್ಕಾಗಿ ನನ್ನ ಮಗಳು ಅವನ ಶರ್ಟ್ ಎಳೆದು ತಳ್ಳಿದ್ದಾಳೆ. ಆದರೆ ವಾಚ್‌ಮನ್ ಪತ್ನಿ ಇದನ್ನು ಕಂಡು ನನ್ನ ಮಗಳನ್ನು ನಡು ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿರುವುದು ಸಿಸಿ ಟಿವಿಯಲ್ಲಿದೆ.
ಈ ವಿಚಾರವನ್ನು ಮಗಳು ನನ್ನಿಂದಲೂ ಮುಚ್ಚಿಟ್ಟಿದ್ದಳು. ಪಕ್ಕದ ಮನೆಯಿಂದ ವಿಚಾರ ತಿಳಿದು ವಾಚ್‌ಮನ್ ಮನೆಗೆ ಹೋಗಿ ನಿಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದ್ದೆ ವಿನಾ ದೈಹಿಕ ಹಲ್ಲೆ ನಡೆಸಿಲ್ಲ. ಒಂದು ವೇಳೆ ಹಲ್ಲೆ ನಡೆಸಿ, ಎಳೆದಾಡಿದ್ದರೆ ಅವರೆಲ್ಲ ನಾನು ಹೋದ ಕೆಲವೇ ನಿಮಿಷಗಳಲ್ಲಿ ಆರಾಮವಾಗಿರುವುದು ಕೂಡಾ ದೃಶ್ಯಾವಳಿಯಲ್ಲಿದೆ. ಇದೆಲ್ಲ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದೀಗ ನಾನು ಇದೆಲ್ಲದರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.
Click this button or press Ctrl+G to toggle between Kannada and English