ಉಡುಪಿ: ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಸಾವು, ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ

11:44 AM, Tuesday, October 31st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

vinitha bhatಉಡುಪಿ: ಟೀಸ್ಟಾಲ್ ನಡೆಸುವ ತಂದೆಗೆ ಅವಳೇ ಭವಿಷ್ಯದ ಆಶಾಕಿರಣ. ಆ ದಂಪತಿಗೆ ಒಬ್ಬಳೇ ಮುದ್ದಾದ ಮಗಳು. ಯುವತಿ ಹೆಸರು ವಿನಿತಾ ಭಟ್. ಕ್ರೀಡೆಯಲ್ಲಿ ಚೂಟಿ, ಕಲಿಕೆಯಲ್ಲೂ ನಂಬರ್ ಒನ್. ಬೆಂಗಳೂರಿನಲ್ಲಿ ನೆಲೆಸಿರುವ ವಾಸುದೇವ ಭಟ್ ಮತ್ತು ಮಾಲಿನಿ ದಂಪತಿಗೆ ಇವಳೊಬ್ಬಳೇ ಮಗಳು. ಎಂ. ಕಾಂ ಓದಿಕೊಂಡಿದ್ದ ವಿನಿತಾ ಬದುಕಿದ್ದರೆ ಸದ್ಯ ಪ್ರತಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿ ಪೋಷಕರಿಗೆ ಆಧಾರವಾಗುತ್ತಿದ್ದಳು.  ಆದರೆ ಅವರ ಬದುಕಿನ ಆಶಾಕಿರಣವಾಗಿದ್ದ ಮಗಳು ಬಾರದ ಲೋಕಕ್ಕೆ ತೆರಳಿದ್ದಾಳೆ. ಹಾಗಾದ್ರೆ ಈ ಮನಕಲಕುವ ಕಥೆ ಯಾರದ್ದು, ನಡೆದಿದ್ದಾದರೂ ಹೇಗೆ ಎನ್ನುವುದರ ಡಿಟೈಲ್ಸ್‌‌ ಇಲ್ಲಿದೆ.

ಹೌದು, ಮಂಡಿ ಆಪರೇಷನ್‌ಗೆ ಅಂತ ಉಡುಪಿಯ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಾಗಿದ್ದ ಮಗಳು ಶವವಾಗಿ ಹೊರಬಂದಿದ್ದಳು. ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ ಮಾಡಿರುವ ಯುವತಿಯ ಪೋಷಕರು ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಮೂರುವರೆ ತಿಂಗಳ ನಂತರ ಹೋರಾಟ ಆರಂಭಿಸಿದ್ದಾರೆ.

ಕ್ರೀಡಾಪಟುವಾಗಿದ್ದ ಈಕೆ 2016 ರಲ್ಲಿ ಕಾಲೇಜು ಓದುತ್ತಿದ್ದಾಗ ಆಟವಾಡುವ ವೇಳೆ ಕಾಲಿನ ಮಂಡಿಯಲ್ಲಿ ನೋವು ಕಾಣಿಸಿಕೊಂಡಿತ್ತು. ಬೆಂಗಳೂರಿನ ವೈದ್ಯರು ಯಾವುದೇ ಅಪಾಯವಿಲ್ಲ, ಭವಿಷ್ಯದಲ್ಲಿ ಆಪರೇಷನ್ ಮಾಡಿಸಿ ಎಂದು ಧೈರ್ಯ ತುಂಬಿದ್ರು. ಆದರೆ ತಮ್ಮೂರು ಉಡುಪಿಗೆ ಬಂದಾಗ ಇಲ್ಲಿನ ಪ್ರಸಿದ್ಧ ವೈದ್ಯ ಡಾ. ಭಾಸ್ಕರಾನಂದ ಕುಮಾರ್ ಅವರಲ್ಲಿ ಪರೀಕ್ಷೆ ಮಾಡಿಸಿದ್ದರು. ಅವರು ತಕ್ಷಣವೇ ಆಪರೇಷನ್ ಮಾಡಿಸಬೇಕು ಎಂದು ಹೇಳಿದ್ದರಂತೆ. ಖ್ಯಾತ ವೈದ್ಯ ಡಾ. ಸುದರ್ಶನ ಭಂಡಾರಿಯನ್ನು ಅವರೇ ಗೊತ್ತು ಮಾಡಿದ್ದರು ಎನ್ನಲಾಗಿದೆ.

ಶಸ್ತ್ರಚಿಕಿತ್ಸೆ ಯಶಸ್ವಿಯಾದ್ರೂ, ಕೆಲವೇ ಗಂಟೆಗಳಲ್ಲಿ ವಿನಿತಾ ಕೊನೆಯುಸಿರು ಎಳೆದಿದ್ದಾಳೆ. ಅವಳ ಸಾವಿಗೆ ವೈದ್ಯರು ನೀಡಿರುವ ಓವರ್ ಡೋಸ್ ಅನೆಸ್ತೀಸಿಯಾ ಕಾರಣ ಎನ್ನುವುದು ಹೆತ್ತವರ ಆರೋಪವಾಗಿದೆ. ಹೈಟೆಕ್ ಆಸ್ಪತ್ರೆಯಲ್ಲಿ ಅನಸ್ತೇಶಿಯಾ ಕೊಟ್ಟಾಗ ಅಲರ್ಜಿ ಕಾಣಿಸಿಕೊಂಡಿತ್ತು. ಯಾವುದೋ ಇಂಜೆಕ್ಷನ್ ಹೈಡೋಸ್ ಆಗಿದೆ ಎಂದು ದಾದಿಯರು ಮಾತಾಡಿಕೊಂಡದ್ದನ್ನು ವಿನಿತಾ ಪೋಷಕರು ಕೇಳಿಸಿಕೊಂಡಿದ್ದರಂತೆ.

ವೈದ್ಯರು ಹೇಳುವಂತೆ ಶಸ್ತ್ರ ಚಿಕಿತ್ಸೆ ಮುಗಿದ ಬಳಿಕ ವಿನಿತಾ ಪೋಷಕರೊಂದಿಗೆ ಮಾತನಾಡಿ, ಗಂಜಿ ಕುಡಿದು, ಹಾಲು ಸೇವಿಸಿ ಆರಾಮ ಆಗಿದ್ದವಳು ಏಕಾಏಕಿ ಹೇಗೆ ಮೃತಪಟ್ಟಳು ಅನ್ನೋದೇ ಅಚ್ಚರಿಯಾಗಿದೆ. ಶಸ್ತ್ರ ಚಿಕಿತ್ಸೆಯ ನಂತರ ಆಕೆಗೆ ಯಾವುದೋ ಪ್ರಸಾದ ತಿನ್ನಿಸಲಾಗಿತ್ತು. ಕೆಲವೇ ನಿಮಿಷಗಳಲ್ಲಿ ವಾಂತಿಯಾಗಿ ಹೃದಯಾಘಾತವಾಗಿದೆ. ಶಸ್ತ್ರಚಿಕಿತ್ಸೆಯಲ್ಲಿ ಯಾವುದೇ ದೋಷವಾಗಿಲ್ಲ. ಆದರೆ ಶವದ ಮರಣೋತ್ತರ ಪರೀಕ್ಷೆಯ ವರದಿ ಬಂದಿಲ್ಲ ಎಂದು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಯಾವುದೇ ಸೌಕರ್ಯ ಇಲ್ಲ. ವೈದ್ಯರ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣ ಅನ್ನೋದು ಪೋಷಕರ ಆರೋಪವಾಗಿದೆ. ಅಲ್ಲದೆ, ಮೂರುವರೆ ತಿಂಗಳ ನಂತರ ಅವರು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ಯುವತಿಯ ಸಾವಿಗೆ ನಿಜವಾದ ಕಾರಣ ಏನು ಎಂಬುದು ಪೋಸ್ಟ್ ಮಾರ್ಟಮ್‌ ರಿಪೋರ್ಟ್ ಬಂದ ಬಳಿಕವಷ್ಟೇ ತಿಳಿದುಬರಬೇಕಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English