ಮಂಗಳೂರು: ಕಾಂಗ್ರೆಸ್‌ನ ಮಾಜಿ ಹಿರಿಯ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌ಗೆ, ನಾನು ಭಾರತೀಯ ಬಿಲ್ಲವ. ಕಾಂಗ್ರೆಸ್‌ನ ಬಿಲ್ಲವ ಅಲ್ಲ. ಕಾಂಗ್ರೆಸ್‌ನ ದಾಸ ಬಿಲ್ಲವನೂ ಅಲ್ಲ. ಯಾವ ಪಕ್ಷ ಸೇರಬೇಕು ಎನ್ನುವ ಸ್ವಂತಿಕೆ, ನಿರ್ಧಾರ ನನಗೆ ಬಿಟ್ಟದ್ದು. ಆದರೆ ನೀವು ನನ್ನ ಸುದ್ದಿಗೆ ಬರಬೇಡಿ ಎಂದು ಟಾಂಗ್ ನೀಡಿದ್ದಾರೆ.
ಹರಿಕೃಷ್ಣ ಬಂಟ್ವಾಳ ಬಿಜೆಪಿ ಸೇರುವ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಹರೀಶ್ ಕುಮಾರ್ ಮಾಧ್ಯಮಗೋಷ್ಠಿ ನಡೆಸಿ ಟೀಕಿಸಿದ್ದರು. ಆದರೆ, ಇದೀಗ ಹರೀಶ್ ಕುಮಾರ್‌ಗೆ ತಿರುಗೇಟು ನೀಡಿರುವ ಬಂಟ್ವಾಳ್ ನಮ್ಮ ಸುದ್ದಿಗೆ ಬರಬೇಡಿ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹರಿಕೃಷ್ಣ ಬಂಟ್ವಾಳ್, ಯಾವ ಪಕ್ಷಕ್ಕೆ ಹೋಗಬೇಕು, ಯಾವ ನಿರ್ಧಾರ ಕೈಗೊಳ್ಳಬೇಕೆಂಬ ಸ್ವಂತಿಕೆ ನನ್ನಲ್ಲಿದೆ. ನಿಮ್ಮಂತೆ ರೈ ಹೇಳಿದ್ದನ್ನು, ಆಸ್ಕರ್ ಹೇಳಿದಂತೆ ಹೇಳುವ ಬಿಲ್ಲವ ನಾನಲ್ಲ. ನಾನ್ಯಾವತ್ತೂ ನಿಮ್ಮ ಕಾಂಗ್ರೆಸ್‌ಗೆ ಬರುವ ಪ್ರಶ್ನೆಯಿಲ್ಲ. ನಿಮ್ಮ ಕಾಂಗ್ರೆಸ್ ನನಗೆ ಬೇಡ. ಮುಂದಿನ ದಸರಾಕ್ಕೆ ನಾನು ಇದ್ದೇನೋ ಇಲ್ಲವೋ ಎಂದು ಜನಾರ್ದನ ಪೂಜಾರಿ ಹೇಳಿದ್ದಾಗ, ಪೂಜಾರಿಯವರ ಆರೋಗ್ಯ ಸುಧಾರಿಸಲು ಬಿಜೆಪಿ ಕೂಡಾ ಪ್ರಾರ್ಥನೆ ಸಲ್ಲಿಸಿತ್ತು. ಆದರೆ, ಕಾಂಗ್ರೆಸ್‌ನ ಯಾವುದೇ ಮುಖಂಡರು ಪ್ರಾರ್ಥನೆ ಸಲ್ಲಿಸಿಲ್ಲ. ವಿನಯಕುಮಾರ್ ಸೊರಕೆಗೆ ಸಚಿವ ಸ್ಥಾನ ಹೋದಾಗಲೂ ಏನೂ ಮಾತನಾಡದ ನೀವು, ತನಗೆ ಏನಾದರೂ ಸಿಗುತ್ತಂತ ಸುಮ್ಮನೆ ಕುಳಿತಿದ್ರಿ. ನಿಮ್ಮಷ್ಟು ಸ್ವಾರ್ಥಿ ಯಾರೂ ಇಲ್ಲ. ನೀವು ಹಲ್ಲಿಲ್ಲದ ಹಾವಾಗಿದ್ದರಿಂದಲೇ ಸಚಿವ ರಮಾನಾಥ ರೈ ನಿಮ್ಮನ್ನು ಆ ಸ್ಥಾನದಲ್ಲಿ ಕೂರಿಸಿದ್ದಾರೆ ಎಂದು ಟೀಕಿಸಿದರು.
ಇನ್ನು ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿಚಾರ ಸಂಬಂಧಿಸಿ ಮಾತನಾಡಿದ ಅವರು, ಕಾಂಗ್ರೆಸ್ ಜನರಿಗೆ ಒಳ್ಳೆಯದನ್ನು ಮಾಡಲಿ. ಸಮಾಜ ಶಿಶುನಾಳ ಶರೀಫ್, ಕೃಷ್ಣ, ಕಬೀರ, ಸಾಯಿಬಾಬ, ಅಬ್ದುಲ್ ಕಲಾಂರನ್ನೂ ಒಪ್ಪಿಕೊಂಡಿದೆ. ಅಂತವರ ಜಯಂತಿ ಮಾಡಬೇಕೇ ಹೊರತು ಟಿಪ್ಪು ಸುಲ್ತಾನ್‌ದಲ್ಲ. ಸ್ವಾತಂತ್ರ್ಯ ಹೋರಾಟ 1857ರಲ್ಲಿ ಪ್ರಾರಂಭವಾದದ್ದು. ಆದರೆ, ಟಿಪ್ಪು ಸುಲ್ತಾನ್ ಮರಣ ಹೊಂದಿದ್ದು 1799ರಲ್ಲಿ. ಟಿಪ್ಪು ಹೋರಾಟ ಮಾಡಿದ್ದು ರಾಜ್ಯಕ್ಕೋಸ್ಕರ ಹೊರತು ದೇಶಕ್ಕೋಸ್ಕರವಲ್ಲ. ಇತಿಹಾಸ ಓದಿದವರಿಗೆ ಈ ಬಗ್ಗೆ ತಿಳಿದಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರು ಸಾಮರಸ್ಯದಲ್ಲಿ ಬದುಕುವಾಗ ಯಾಕೆ ವಿಭಜನೆ ಮಾಡಬೇಕು? ಕಾಂಗ್ರೆಸ್ ಅನ್ನೋದೆ ಒಂದು ಕತ್ತರಿ ಇದ್ದಂತೆ ಎಂದು ಹರಿಕೃಷ್ಣ ಬಂಟ್ವಾಳ ವಾಗ್ದಾಳಿ ನಡೆಸಿದರು.
Click this button or press Ctrl+G to toggle between Kannada and English