ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಚತಾ ಅಭಿಯಾನದ ಅಂಗವಾದ ಸ್ವಚ್ಛತಾ ಅಭಿಯಾನದ ಪ್ರಥಮ ಶ್ರಮದಾನಕ್ಕೆ5 ನವೆಂಬರ್ ಬೆಳಿಗ್ಗೆ 7.30 ಕ್ಕೆ ರಾಮಕೃಷ್ಣ ಮಠದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಮಂಗಳೂರು ರಾಮಕೃಷ್ಣ ಮಠದ ಮುಖ್ಯಸ್ಥರಾದ ಸ್ವಾಮಿ ಜಿತಕಾಮಾನಂದಜಿ ನೇತೃತ್ವದಲ್ಲಿ ರಾಮಕೃಷ್ಣ ಮಠ ಮತ್ತು ಮಿಷನ್ನಿನ ವಿಶ್ವಸ್ತರಾದ ಸ್ವಾಮಿ ಮುಕ್ತಿದಾನಂದಜಿ ಹಾಗೂ ಎಮ್. ಆರ್. ಪಿ. ಎಲ್ ನ ಜನರಲ್ ಮ್ಯಾನೇಜರ್ ಆದ ಶ್ರೀ ಬಿ. ಹೆಚ್. ವಿ. ಪ್ರಸಾದ್ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಲಂಡನ್ ರಾಮಕೃಷ್ಣ ವೇದಾಂತ ಸೊಸೈಟಿಯ ಮುಖ್ಯಸ್ಥರಾದ ಸ್ವಾಮಿ ಸರ್ವಸ್ಥಾನಂದಜಿ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು. ಚಾಲನೆ ನೀಡಿದ ಬಳಿಕ ಸ್ವಾಮಿಜಿಗಳು ಹಾಗೂ ಗಣ್ಯರು ಸ್ವತ: ಪೊರಕೆ ಹಿಡಿದು ರಸ್ತೆಯ ಬದಿಗಳನ್ನು ಶುಚಿಗೊಳಿಸಿದರು. ತದನಂತರ ಸುಮಾರು 250 ಸ್ವಯಂ ಸೇವಕರ ತಂಡವನ್ನು ಹಲವು ಗುಂಪುಗಳಾಗಿ ವಿಂಗಡಿಸಿ ಸ್ವಚ್ಛತಾ ಕೈಂಕರ್ಯ ಕೈಗೊಳ್ಳಲಾಯಿತು.
ಅಭಿಯಾನದ ಪ್ರಧಾನ ಸಂಯೋಜಕ ಶ್ರೀ ದಿಲ್ ರಾಜ್ ಆಳ್ವ ಹಾಗೂ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಹಿರಿಯ ಸ್ವಯಂ ಸೇವಕರ ವಿಶೇಷ ಕಾಳಜಿಯಿಂದಾಗಿ ಪಾಳುಬಿದ್ದ ಸ್ಥಿತಿಯಲ್ಲಿದ್ದ ಶೌಚಾಲಯವನ್ನು ಅಸಿಡ್ ಹಾಕಿ ಶುಚಿಗೊಳಿಸಿ ಸುಣ್ಣ ಬಣ್ಣ ಬಳಿದು, ಅವಶ್ಯವಿದ್ದಲ್ಲಿ ಬೋರ್ಡಗಳನ್ನು ಅಳವಡಿಲಾಗಿದೆ. ಅಲ್ಲದೇ ಸಂಬಂಧಪಟ್ಟವರಿಗೆ ಸೂಕ್ತ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ವಿನಂತಿಸಲಾಗಿದೆ.
ಮಂಗಳಾದೇವಿ ದೇವಸ್ಥಾನದ ಎದುರು ರಸ್ತೆಯಲ್ಲಿ ಸಹ್ಯಾದ್ರಿ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ನಾಲ್ಕು ತಂಡಗಳನ್ನು ರಚಿಸಿಕೊಂಡು ಡಾ. ಸತೀಶ ರಾವ್, ಪ್ರಾಧ್ಯಾಪಕ ಶ್ರೀ ಶೇಷಪ್ಪ ಅಮೀನ್ ಹಾಗೂ ಶ್ರೀ ವಿಠಲದಾಸ್ ಪ್ರಭು ಇವರುಗಳ ಮಾರ್ಗದರ್ಶನದಲ್ಲಿ ರಸ್ತೆ, ಪುಟ್ ಪಾಥ್ ಹಾಗೂ ತೋಡುಗಳನ್ನು ಶುಚಿಗೊಳಿಸಿದರು. ಮಂಗಳಾದೇವಿ ದೇವಸ್ಥಾನದಿಂದ ಕಾಸ್ಸಿಯಾ ಶಾಲೆಯ ವೃತ್ತದ ವರೆಗಿನ ಮಾರ್ಗವನ್ನು ಸ್ವಚ್ಛ ಮಾಡಿದರು. ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನೇತೃತ್ವದಲ್ಲಿ ಶ್ರೀನಿವಾಸ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಂಗಳಾ ನಗರದಲ್ಲಿ ಶ್ರಮದಾನ ನಡೆಸಿದರು. ಮುಖ್ಯವಾಗಿ ಮಾರ್ಗಗಳನ್ನು ಗುಡಿಸಿ ಸ್ವಚ್ಛಗೊಳಿಸಿದ್ದಲ್ಲದೇ ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಪೇಪರ್‌ಗಳನ್ನು ತೆಗೆದು ಸ್ವಚ್ಛತೆ ನಡೆಸಿದರು. ವಿದ್ಯಾರ್ಥಿ ನಾಯಕ ಶ್ರೀ ಸಚಿನ ಶೆಟ್ಟಿ ನಲ್ಲೂರು ಸೇರಿದಂತೆ ಕಾಲೇಜಿನ ಸುಮಾರು 60 ವಿದ್ಯಾರ್ಥಿಗಳು ಸ್ವಯಂ ಸ್ಪೂರ್ತಿಯಿಂದ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಮಂಗಳಾದೇವಿ ರಸ್ತೆಯಿಂದ ಮಂಕಿಸ್ಟಾಂಡ್ ವರೆಗಿನ ಮಾರ್ಗದಲ್ಲಿ ಶ್ರೀ ಶಾರದಾ ಮಹಿಳಾ ವೃಂದದವರು ಶ್ರಮದಾನ ಕೈಗೊಂಡರು. ರಸ್ತೆಯ ಬದಿಯ ಸಾರ್ವಜನಿಕ ಜಾಗೆಗಳಲ್ಲಿ ತುಂಬಿದ್ದ ಕಸಕಡ್ದಿಗಳನ್ನು ತೆಗೆದು ಶುಚಿಗೊಳಿಸಿದರು. ಅಧ್ಯಕ್ಷರಾದ ಶ್ರೀiತಿ ಸತ್ಯವತಿ ಸೇರಿದಂತೆ ಸುಮಾರು ಮೂವತೈದು ಸದಸ್ಯರು ಭಾಗವಹಿಸಿದ್ದರು. ಮುಳಿಹಿತ್ಲುವಿಗೆ ಹೋಗುವ ಮಾರ್ಗ ಹಾಗೂ ಮಂಗಳಾದೇವಿ ದೇವಳದ ಹಿಂಭಾಗದ ರಸ್ತೆಯಲ್ಲಿ ನಿವೇದಿತ ಬಳಗದ ಸದಸ್ಯೆಯರು ಶ್ರೀಮತಿ ರತ್ನ ಆಳ್ವ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಮಾರ್ಗದರ್ಶನದಿಂದ ಸ್ವಚ್ಛತೆಗಾಗಿ ಶ್ರಮದಾನಗೈದರು. ಸುಮಾರು ಐವತ್ತು ಜನ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
ಬೆಳಿಗ್ಗೆ 7.30 ರಿಂದ 10 ಗಂಟೆಯ ತನಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ ಸ್ವಯಂಸೇವಕರಿಗೆ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಪೂರ್ವ ನಿರ್ದೇಶಕ ಶ್ರೀ ಎಮ್ ಆರ್ ವಾಸುದೇವ್, ಸ್ವಚ್ಛ ದಕ್ಷಿಣ ಕನ್ನಡ ಅಭಿಯಾನದ ಪ್ರಧಾನ ಸಂಯೋಜಕ ಶ್ರೀ ಉಮಾನಾಥ್ ಕೋಟೆಕಾರ್, ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕರಾದ ಅಂಕಿತ್ ಕುಮಾರ್, ನಿಶಾ,ಪ್ರಜ್ವಲ್, ಹಾಗೂ ನವಿನ್ ಪಿಲಾರ್ ಮತ್ತಿತರರು ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English