ಹರಿಕೃಷ್ಣ ಬಂಟ್ವಾಳ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿಗೆ ಸೇರ್ಪಡೆ

12:40 PM, Friday, November 10th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

harikrishna bantwalಮಂಗಳೂರು:ನಗರದ ನೆಹರೂ ಮೈದಾನದಲ್ಲಿ  ಪರಿವರ್ತನಾ ಯಾತ್ರೆಯಲ್ಲಿ ಅಧಿಕೃತವಾಗಿ ನ. 11ರಂದು ಬಿಜೆಪಿಗೆ ಸೇರಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.

ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಪತ್ನಿಯ ಮೂಲ ಹೆಸರನ್ನು (ಧನಭಾಗ್ಯ ರೈ) ಮರೆಮಾಚಿ ಶೈಲಾ ಬಿ. ರೈ ಎಂಬ ಹೆಸರಿನಲ್ಲಿ ಮಾಣಿಯಲ್ಲಿ ಜಮೀನು ಖರೀದಿಸಿರುವ ಬಗ್ಗೆ ಹೇಳಿಕೆ ನೀಡಿದ್ದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಈವರೆಗೆ ಮಾಧ್ಯಮದ ಮುಂದೆ ಬಂದು ಹೇಳಿಕೆ ನೀಡಿಲ್ಲ. ಹೀಗಾಗಿ ಇದು ಕೇವಲ ಆರೋಪವಲ್ಲ ಎಂಬುದು ಸಾಬೀತಾಗಿದೆ. ತನ್ನೆಲ್ಲ ಹೇಳಿಕೆಗೂ ಸರ್ಕಾರಿ ಕಚೇರಿಯಿಂದಲೇ ಸರ್ಟಿಫೈ ಮಾಡಿದ ದಾಖಲೆಗಳಿವೆ ಎಂದರು.

ಶೈಲಾ ಬಿ. ರೈ ಹೆಸರಿನಲ್ಲಿ ಆಧಾರ್ ಕಾರ್ಡ್‌, ಪಡಿತರ ಚೀಟಿ, ಆದಾಯ ತೆರಿಗೆ ಪತ್ರ, ಬ್ಯಾಂಕ್ ಪಾಸ್ ಪುಸ್ತಕ ಅಥವಾ ತಮ್ಮದೇ ಶಾಲೆಯ ಟ್ರಸ್ಟಿನಲ್ಲಿ ಯಾವುದಾದರೂ ದಾಖಲೆಯಿದೆಯೇ? ಸಚಿವರ ಪತ್ನಿಯೊಬ್ಬರು ತನ್ನ ದಿನದ ಆದಾಯ 500ರೂ. ಎಂದು ಹೇಳಿ ಸರ್ಕಾರಿ ಜಾಗವನ್ನು ಗುಳುಂ ಮಾಡಿರುವುದು ವಂಚನೆಯಲ್ಲವೇ? ಇದಕ್ಕೆ ಸಚಿವರೇ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಜಾಗಕ್ಕೆ ಅರ್ಜಿ ಸಲ್ಲಿಸುವಾಗ ಎಸ್.ಎಂ.ಕೃಷ್ಣ ಅವರೂ ಮುಖ್ಯಮಂತ್ರಿಯಾಗಿದ್ದರು. ಆಗಲೂ ರಮಾನಾಥ್‌‌ ರೈ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ನಮ್ಮೂರಿನ ಕೂಲಿ ಕಾರ್ಮಿಕ ಕೂಡಾ ದಿನಕ್ಕೆ 500ರೂ.ಗೂ ಹೆಚ್ಚು ಆದಾಯ ಪಡೆಯುತ್ತಾನೆ. ಆಂಥದ್ದರಲ್ಲಿ ಸಚಿವರ ಪತ್ನಿ ಇಷ್ಟು ಕಡಿಮೆ ಆದಾಯ ತೋರಿಸಿ ಜನ ಹಾಗೂ ಸರ್ಕಾರವನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು.

ಅಷ್ಟು ಮಾತ್ರವಲ್ಲ ಮಾಣಿಯಲ್ಲಿಯೇ ಒಂದು ಎಕರೆ ಭೂಮಿಯನ್ನು ಯಾವುದೇ ಅರ್ಜಿ ಸಲ್ಲಿಸದೆ ಇದೇ ಸಚಿವರು ತನ್ನದಾಗಿಸಿಕೊಂಡಿದ್ದಾರೆ. ಕಳ್ಳಿಗೆಯಲ್ಲಿ ಸರ್ಕಾರಿ ಜಾಗದಲ್ಲೇ ಮೂರು ಸಾವಿರ ರಬ್ಬರ್ ಗಿಡಗಳನ್ನು ನೆಟ್ಟು ಜನರನ್ನು ವಂಚಿಸುತ್ತಿರುವ ಸಚಿವರು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ ಇದೆಲ್ಲಾ ಯಾರದ್ದು ಎಂಬುದನ್ನು ಮೊದಲು ಜನರಿಗೆ ತಿಳಿಸಲಿ. ಒಂದು ಪಂಪ್ ಅಳವಡಿಸಬೇಕಾದರೆ ಪಹಣಿ ಪತ್ರ ಬೇಕು. ಆದರೆ ಅದ್ಯಾವುದೂ ಇಲ್ಲದೆ ಸಚಿವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿ ಪಂಪ್ ಅಳವಡಿಸಿ, ರಬ್ಬರ್ ತೋಟ ಮಾಡಿದ್ದಾರೆ. ಇದನ್ನೆಲ್ಲಾ ಸಚಿವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದರು.

ಸಿಎಂ ಸಿದ್ಧರಾಮಯ್ಯ ಅವರೇ ಇದೀಗ ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಸೂಚಿಸಿದ್ದಾರೆ. ಹಾಗಾದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅರ್ಹರಿಗೆ ಸಿಗಬೇಕಾದ ಸರಕಾರಿ ಜಾಗವನ್ನು ಮಂತ್ರಿಯವರಿಂದ ತೆರವು ಮಾಡಿಸುತ್ತಾರೆಯೇ ಎಂದು ಕೇಳಿದ್ದಾರೆ. ನಿರಾಶ್ರಿತರು ಐದು ಸೆಂಟ್ಸ್ ಜಾಗದಲ್ಲಿ ಟೆಂಟ್ ಹಾಕಿ ಕೂತರೆ ಪೊಲೀಸರು ಅವರನ್ನು ಎಬ್ಬಿಸುತ್ತಾರೆ. ಸರ್ಕಾರದ ಇಷ್ಟು ದೊಡ್ಡ ಜಾಗವನ್ನು ಗುಳುಂ ಮಾಡಿರುವ ಸಚಿವರ ಮೇಲೆ ಯಾವುದೇ ಕ್ರಮವಿಲ್ಲವೇ ಎಂದು ಪ್ರಶ್ನಿಸಿದರು.

ಅಲ್ಲದೆ ತಮಗೀಗಾಗಲೇ ಬೆದರಿಕೆ ಕರೆಗಳು ಬರಲಾರಂಭವಾಗಿದೆ. ಜೀವಮಾನದಲ್ಲಿ ತಾನು ಯಾರಿಗೂ ಹೆದರಲ್ಲ. ಸಚಿವರಿಗೂ ಹೆದರಲ್ಲ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English