ಪಾರ್ಕಿಂಗ್ ಅವ್ಯವಸ್ಥೆ… ಮಂಗಳೂರಲ್ಲೂ ಸಂಚಾರ ದುಸ್ತರ

12:08 PM, Monday, December 11th, 2017
Share
1 Star2 Stars3 Stars4 Stars5 Stars
(No Ratings Yet)
Loading...

parking-problemಮಂಗಳೂರು: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಸೇರ್ಪಡೆಗೊಂಡ ನಗರ. ಆದರೆ ನಗರದಲ್ಲಿ ವಾಹನ ದಟ್ಟಣೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ನಗರಕ್ಕೆ ಒಂದು ಸುವ್ಯವಸ್ಥಿತ ರೂಪ ಕೊಡುವಲ್ಲಿ ಮಂಗಳೂರು ಮಹಾನಗರ ಪಾಲಿಕೆ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವಾಗ ಸೆಟ್‌ಬ್ಯಾಕ್‌ಗಾಗಿ ಇಂತಿಷ್ಟು ಜಾಗವನ್ನು ಬಿಡಬೇಕು ಮತ್ತು ಅದಕ್ಕೆ ಅಗತ್ಯ ಬೀಳುವ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡಾ ಕಲ್ಪಿಸಬೇಕು ಎಂಬ ನಿಯಮಗಳಿವೆ. ಆದರೆ ಇಲ್ಲಿರುವ ಹೆಚ್ಚಿನ ವಾಣಿಜ್ಯ ಸಂಕೀರ್ಣಗಳಲ್ಲಿ ಪಾರ್ಕಿಂಗ್‌ಗೆ ಮೀಸಲಿಡಬೇಕಾದ ಜಾಗದಲ್ಲಿ ಅಂಗಡಿ ಕೋಣೆಗಳನ್ನು ನಿರ್ಮಿಸಿ ಮಾರಾಟ ಮಾಡಲಾಗಿದೆ.

ಅಲ್ಲದೆ ವಾಣಿಜ್ಯ ಸಂಕೀರ್ಣಗಳ ಎದುರುಗಡೆ ಇರುವ ಮ.ನ.ಪಾಕ್ಕೆ ಸಂಬಂಧಪಟ್ಟ ಸಾರ್ವಜನಿಕರ ಜಾಗವನ್ನು ಕಬಳಿಸಿ ಅಲ್ಲಿ ತಾವೇ ‘ನೋ-ಪಾರ್ಕಿಂಗ್’ ಬೋರ್ಡ್‌ಗಳನ್ನು ಅಳವಡಿಸಿ, ವಾಚ್‌ಮನ್‌‌ಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ ಮೀಸಲಾಗಿರುವ ಪಾರ್ಕಿಂಗ್ ಜಾಗಗಳಲ್ಲಿ ಸಾರ್ವಜನಿಕರ ವಾಹನ ನಿಲುಗಡೆಗೆ ಅವಕಾಶ ಕೊಡುವುದಿಲ್ಲ. ಇನ್ನು ಸಿಟಿಸೆಂಟರ್ ಮಾಲ್‌‌ನಲ್ಲಿ ಅಲ್ಲಿನ ಗ್ರಾಹಕರ ವಾಹನಗಳು ಪಾರ್ಕಿಂಗ್ ಮಾಡಿದರೆ ಗಂಟೆಗೆ ಇಂತಿಷ್ಟು ಎಂದು ಅಕ್ರಮವಾಗಿ ಪಾರ್ಕಿಂಗ್ ಸುಂಕ ವಸೂಲಿ ಮಾಡಲಾಗುತ್ತಿದೆ ಎನ್ನಲಾಗಿದೆ.

ನಿಯಮಗಳ ಪ್ರಕಾರ ನೋ-ಪಾರ್ಕಿಂಗ್ ಬೋರ್ಡ್‌ಗಳನ್ನು ಮಹಾನಗರ ಪಾಲಿಕೆಯವರು ಹಾಕಬೇಕು. ಖಾಸಗಿ ಸಂಸ್ಥೆಯವರು ಹಾಕುವಂತಿಲ್ಲ. ಆದರೆ ಮಂಗಳೂರು ನಗರದಾದ್ಯಂತ ಅಂಗಡಿ ಮಾಲೀಕರೇ ತಮ್ಮ ತಮ್ಮ ಅಂಗಡಿಗಳ ಮುಂದೆ ನೋ-ಪಾರ್ಕಿಂಗ್ ಬೋರ್ಡ್‌ಗಳನ್ನು ಅಳವಡಿಸಿ ಪಾಲಿಕೆ ಜಾಗವನ್ನು ಅತಿಕ್ರಮಿಸಿದ್ದಾರೆ. ಶೇ. 80ರಷ್ಟು ಕಟ್ಟಡಗಳಿಗೆ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ.

ಹಿಂದೊಮ್ಮೆ ಮೇಯರ್ ಕವಿತಾ ಸನಿಲ್ ಅವರು ಪಾಲಿಕೆ ಜಾಗದಲ್ಲಿ ಖಾಸಗಿ ಕಟ್ಟಡ ಮಾಲೀಕರು ಹಾಕಿದ ಬೋರ್ಡ್‌, ಚೈನ್‌‌ಗಳನ್ನು ತೆಗೆಯಿಸಿ ಶ್ಲಾಘನೆಗೆ ಪಾತ್ರವಾಗಿದ್ದರು. ಇದೀಗ ಮತ್ತೆ ಭೂಮಿಯ ಅತಿಕ್ರಮಣ ಕಂಡು ಬರುತ್ತಿದೆ. ಮುಂಬರುವ ಸಮಸ್ಯೆಯನ್ನು ಪರಿಗಣಿಸಿ ಈಗಲೇ ಕಾರ್ಯಪ್ರವೃತ್ತವಾಗದಿದ್ದರೆ ಪಾರ್ಕಿಂಗ್ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿ ನಗರವನ್ನು ಕಾಡಲಿದೆ ಎಂದರು.

ಇಂತಹ ದುರವಸ್ಥೆಯ ಬಗ್ಗೆ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಪ್ರಮುಖ ವಾಣಿಜ್ಯ ಕಟ್ಟಡ, ವಸತಿ ಸಮುಚ್ಚಯಗಳು ಸೇರಿದಂತೆ 55 ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಮೀಸಲಾಗಿದ್ದ ಜಾಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಪತ್ತೆಮಾಡಿರುವ ನಗರ ಸಂಚಾರ ವಿಭಾಗದ ಪೊಲೀಸರು, ಈ ಕಟ್ಟಡಗಳ ಪಟ್ಟಿಯನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆಗೆ ಕಳುಹಿಸಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ಅತಿಯಾದ ಸಂಚಾರ ದಟ್ಟಣೆ ಉಂಟಾಗುತ್ತಿರುವ ಕುರಿತು ಪೊಲೀಸರು ಇತ್ತೀಚೆಗೆ ತಪಾಸಣೆ ನಡೆಸಿದ್ದರು. ಬಹುಮಹಡಿ ಕಟ್ಟಡಗಳು ಸೇರಿದಂತೆ ಹಲವು ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ಮೀಸಲಾದ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದು, ಅಲ್ಲಿನ ವಾಹನಗಳನ್ನು ರಸ್ತೆಗಳ ಮೇಲೆ ನಿಲುಗಡೆ ಮಾಡುತ್ತಿರುವುದು ಸಂಚಾರ ದಟ್ಟಣೆ ಹೆಚ್ಚಲು ಪ್ರಮುಖ ಕಾರಣ ಎಂಬುದು ಈ ಸಂದರ್ಭದಲ್ಲಿ ಗೊತ್ತಾಗಿದೆ.

ಈ ವಿಚಾರವನ್ನು ಪಾಲಿಕೆಯ ಗಮನಕ್ಕೆ ತಂದಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಕರ್ನಾಟಕ ನಗರಾಡಳಿತ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸುವಂತೆ ಕೋರಿದ್ದರೂ ಪಾಲಿಕೆ ಆಡಳಿತ ಕಣ್ಮುಚ್ಚಿ ಕುಳಿತಿದೆ ಎನ್ನಲಾಗ್ತಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English