ಇದು ಸಾಮರಸ್ಯದ ನಡಿಗೆ ಅಲ್ಲ, ‘ಹಾಸ್ಯಾಸ್ಪದ ನಡಿಗೆ’ : ಹರಿಕೃಷ್ಣ ಬಂಟ್ವಾಳ್

6:20 PM, Tuesday, December 12th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

ramanath-rai
ಮಂಗಳೂರು: ಸುಮಾರು 25 ಸಂಘಟನೆಗಳ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯುತ್ತದೆ ಎನ್ನಲಾಗಿದ್ದ ಸಚಿವ ಬಿ.ರಮಾನಾಥ ರೈ ನೇತೃತ್ವದ ‘ಸಾಮರಸ್ಯದ ನಡಿಗೆ’ಯಲ್ಲಿ ಬರೀ 500ರಷ್ಟು ಜನರು ಮಾತ್ರ ಭಾಗವಹಿಸಿದ್ದಾರೆ. ಇದು ಸಾಮರಸ್ಯದ ನಡಿಗೆ ಅಲ್ಲ, ‘ಹಾಸ್ಯಾಸ್ಪದ ನಡಿಗೆ’. ಇದೊಂದು ‘ಫ್ಲಾಪ್ ಶೋ’ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ವ್ಯಂಗ್ಯವಾಡಿದ್ದಾರೆ.

Ramanath-rai-2ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಸೇರಿದಂತೆ ಇತರ ಇಲಾಖೆಗಳು ತಮ್ಮ ನಿಯಂತ್ರಣದಲ್ಲಿದ್ದರೂ ಕಳೆದ 4 ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ ಸಾಮರಸ್ಯ ಸಾಧಿಸಲು ಸಾಧ್ಯವಾಗದವರಿಗೆ ಈಗ ಸಾಮರಸ್ಯದ ನೆನಪಾಗಿರುವುದೇಕೆ? ಅವರು ಅಧಿಕಾರದ ಗದ್ದುಗೆಯಿಂದ ಇಳಿದರೆ ಮಾತ್ರ ಸಾಮರಸ್ಯ ನೆಲೆಸಲು ಸಾಧ್ಯ. ರಮಾನಾಥ ರೈ ಮಂತ್ರಿಯಾಗಿರುವವರೆಗೆ ಜಿಲ್ಲೆಯಲ್ಲಿ ಸಾಮರಸ್ಯ ನೆಲೆಸದು ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು.

ಕಲ್ಲಡ್ಕದಲ್ಲಿ ಗಲಾಟೆಗೆ ಯಾರು ಕಾರಣ ಎಂದು ಕೇಳಿದರೆ ಜನತೆ ಸಚಿವ ರಮಾನಾಥ ರೈಯವರತ್ತ ಬೊಟ್ಟು ಮಾಡುತ್ತಾರೆ. ಅಬ್ದುಲ್ ಜಲೀಲ್ ಕರೋಪಾಡಿ ಹತ್ಯೆ, ಶರತ್ ಮಡಿವಾಳ ಹತ್ಯೆ, ಬೆಂಜನಪದವಿನಲ್ಲಿ ನಡೆದ ರಿಕ್ಷಾ ಚಾಲಕ ಅಶ್ರಫ್ ಕಲಾಯಿಯವರ ಕೊಲೆ… ಇವೆಲ್ಲದರ ಹಿಂದೆ ರೈಯವರ ಪಾತ್ರದ ಬಗ್ಗೆ ಜನತೆ ಬೊಟ್ಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಹರಿಕೃಷ್ಣ ಬಂಟ್ವಾಳ್, ಜಿಲ್ಲೆಯಲ್ಲಿ ಮರಳು ದಂಧೆ, ಮರಗಳ ಕಳ್ಳ ಸಾಗಣೆ, ಗಾಂಜಾ ದಂಧೆ ಇತ್ಯಾದಿಗಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು, ‘ಸಾಮರಸ್ಯದ ನಡಿಗೆ’ ಹಮ್ಮಿಕೊಂಡಿರುವುದರಲ್ಲಿ ಅರ್ಥವಿಲ್ಲ ಎಂದು ಟೀಕಿಸಿದರು.

ramanath-rai-3ಸಾಮರಸ್ಯದ ನಡಿಗೆಗೆ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಬೆಂಬಲ ನೀಡಿದ್ದಾರೆ ಎನ್ನುವುದು ಸುಳ್ಳು. ವಿವಾಹ ಸಮಾರಂಭವೊಂದರಲ್ಲಿ ಪೂಜಾರಿಯವರ ಜತೆ ರಮಾನಾಥ ರೈಯವರು ಫೋಟೊ ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ನಡಿಗೆಗೆ ಜನಾರ್ದನ ಪೂಜಾರಿ ಬೆಂಬಲ ನೀಡಿದ್ದಾರೆ ಎಂದು ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳಲಾಗಿದೆ ಎಂದು ಹರಿಕೃಷ್ಣ ಬಂಟ್ವಾಳ್ ಆಪಾದಿಸಿದರು.

ಸಾಮರಸ್ಯ ನಡಿಗೆಗೆ ಸ್ವಾಮಿ ವಿವೇಕಾನಂದ, ನಾರಾಯಣಗುರು, ಅಬ್ದುಲ್ ಕಲಾಂ ಅವರ ಭಾವಚಿತ್ರಗಳನ್ನು ಬಳಸಿಕೊಳ್ಳುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ ಎಂದು ಅವರು ನುಡಿದರು.

ಒಟ್ಟಾರೆಯಾಗಿ ಹೇಳುವುದಾದರೆ ಇದು ಸಾಮರಸ್ಯದ ನಡಿಗೆಯಲ್ಲ, ಪಾಪಪ್ರಜ್ಞೆಯ ನಡಿಗೆ. ಜನರು ರಮಾನಾಥ ರೈಯವರನ್ನು ಶೀಘ್ರವೇ ತೀರ್ಥಯಾತ್ರೆಗೆ ಕಳುಹಿಸಲಿದ್ದಾರೆ. ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ, ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ರಾಜಕಾರಣಿಗಳನ್ನು ಮನೆಗೆ ಕಳುಹಿಸಲು ಜನತೆ ಮುಂದಾಗಬೇಕು ಎಂದು ಹರಿಕೃಷ್ಣ ಬಂಟ್ವಾಳ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English