ಮನುಷ್ಯರಾಗಿ ಬದುಕೋಣ: ಪ್ರಕಾಶ್‌ ರೈ ಕರೆ

1:26 PM, Wednesday, December 13th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

prakash-saidಮಂಗಳೂರು: ಈ ಜಗತ್ತಲ್ಲಿ ಹುಲ್ಲುಕಡ್ಡಿಯನ್ನೂ ಸೃಷ್ಟಿಸುವ ಶಕ್ತಿ ಹಾಗೂ ಅರ್ಹತೆಯಿಲ್ಲದ ನಮಗೆ ಯಾರನ್ನೂ ಕೊಲ್ಲುವ ಅರ್ಹತೆಯೂ ಇಲ್ಲ. ಹೀಗಾಗಿ ಮನುಷ್ಯರಾಗಿ ಬದುಕಬೇಕೇ ಹೊರತು, ದ್ವೇಷದಿಂದ ಬದುಕುವುದು ಸಲ್ಲದು ಎಂದು ಬಹುಭಾಷಾ ನಟ ಪ್ರಕಾಶ್‌ ರೈ ಕರೆ ನೀಡಿದರು.

ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಫರಂಗಿಪೇಟೆಯಿಂದ ಮಾಣಿವರೆಗೆ ಮಂಗಳವಾರ ನಡೆದ, ಸಾಮರಸ್ಯಕ್ಕಾಗಿ ಸೌಹಾರ್ದ ನಡಿಗೆ ಸಮಾ ರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ಸಾಮರಸ್ಯ ನಡಿಗೆಯಲ್ಲಿ ನಾನೊಬ್ಬ ನಟ ಹಾಗೂ ದೇಶದ ಪ್ರಜೆಯಾಗಿ ಭಾಗವಹಿಸಿದ್ದೇನೆ. ಕಲಾವಿದ ಪ್ರತಿಭೆ ಯಿಂದ ಮಾತ್ರವಲ್ಲದೇ ಸಮಾಜದ ಪ್ರೀತಿಯಿಂದ ಬೆಳೆಯುತ್ತಾನೆ.

ಸಾಮ ರಸ್ಯ ಕದಡುವ ಕೆಲಸವಾದಾಗ ಸಮಾಜದ ಜತೆಗೆ ನಿಲ್ಲುವುದು ನನ್ನ ಜವಾಬ್ದಾರಿ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಯಾವುದೇ ಧರ್ಮ ಕೊಲ್ಲು ಎಂದು ಹೇಳುವುದಿಲ್ಲ. ಅಂಥದ್ದು ಧರ್ಮವೇ ಅಲ್ಲ. ಆದ್ದರಿಂದ ನಾವೆಲ್ಲರೂ ಒಂದಾಗಿ ಬಾಳಬೇಕು’ ಎಂದವರು ಹೇಳಿದರು.

“ಯಾರಿಗೆ ಓಟು ಹಾಕಬೇಕು ಎಂದು ಹೇಳಲು ನಾನು ಬಂದಿಲ್ಲ. ನಮ್ಮ ನಡುವಿನ ಸಾಮರಸ್ಯ ಹದಗೆಡಿಸುವವರು ಯಾರು ಎಂದು ಬುದ್ಧಿವಂತರಾಗಿ ಆಲೋಚಿಸಬೇಕಿದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕನಿಗೂ ರಾಜಕೀಯ ಪ್ರಜ್ಞೆ ಬೇಕಾಗಿದೆ. ನಾವು ಆರಿಸುವ ನಾಯಕನ ನಿರ್ಧಾರವೇ ನಮ್ಮ ಜೀವನದಲ್ಲಿ ಪ್ರತಿಬಿಂಬಿತವಾಗಲಿದೆ. ಹೀಗಾಗಿ ನಾವು ಎಚ್ಚರಿಕೆ ವಹಿಸಬೇಕಾಗಿದೆ’ ಎಂದವರು ಹೇಳಿದರು.
ಜಿಲ್ಲೆಯ ರಾಜಕೀಯ ಪಕ್ಷದವರು ಚುನಾವಣೆ ಸಮಯ ರಾಜಕೀಯ ಮಾಡೋಣ. ಆದರೆ, ಸಾಮರಸ್ಯಕ್ಕೆ ಧಕ್ಕೆ ಎದುರಾದಾಗ ನಾವೆಲ್ಲ ರಾಜಕೀಯ ಬಿಟ್ಟು ಒಂದಾಗಿ ನಿಲ್ಲಬೇಕಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಸಚಿವ ಯು.ಟಿ.ಖಾದರ್‌, ಶಾಸಕ ಅಭಯಚಂದ್ರ ಜೈನ್‌, ಪ್ರಮುಖ ಮುಖಂಡರಾದ ಶ್ರೀರಾಮ್‌ ರೆಡ್ಡಿ, ಡಾ| ಸಿದ್ದನಗೌಡ ಪಾಟೀಲ್‌, ಎಂ. ದೇವದಾಸ್‌, ಬಾಲಕೃಷ್ಣ ಶೆಟ್ಟಿ, ಹರೀಶ್‌ ಕುಮಾರ್‌, ವಿ.ಕುಕ್ಯಾನ್‌, ರವಿಕಿರಣ್‌ ಪುಣಚ, ರಘು, ಚಂದು ಎಲ್‌., ಕಣಚೂರು ಮೋನು, ಮಹಮ್ಮದ್‌, ಎ.ಸಿ.ಜಯರಾಜ್‌, ಯಾದವ ಶೆಟ್ಟಿ, ಬಿ.ಎಚ್‌.ಖಾದರ್‌, ಎ.ಸಿ.ಭಂಡಾರಿ, ಪಿಯೂಸ್‌ ಎಲ್‌. ರೋಡ್ರಿಗಸ್‌, ಶಾಹುಲ್‌ ಹಮೀದ್‌, ಸ್ಟಾನ್ಲಿ ಲೋಬೋ, ಮಿಥುನ್‌ ರೈ, ಯೋಗೀಶ್‌ ಶೆಟ್ಟಿ ಜಪ್ಪು, ಸುನಿಲ್‌ ಕುಮಾರ್‌ ಬಜಾಲ್‌, ಮಂಜುಳಾ ಮಾಧವ ಮಾವೆ, ಮಮತಾ ಡಿ.ಎಸ್‌.ಗಟ್ಟಿ, ಚಂದ್ರಶೇಖರ ಕರ್ಕೇರ, ಎಂ.ಎಸ್‌.ಮಹಮ್ಮದ್‌ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಕಾಶ್‌ ರೈ ಮಾತನಾಡಿ, ರಾಜಸ್ಥಾನದಲ್ಲಾಗಲಿ, ಹೊನ್ನಾವರದಲ್ಲಾಗಲಿ ಯಾವುದೇ ಮತ, ಪಕ್ಷ ಅಭಿಪ್ರಾಯವಿದ್ದ ಮನುಷ್ಯನನ್ನು ಕೊಲ್ಲುವುದು ಖಂಡನೀಯ. ಅಂತಹ ಖಂಡನೀಯ ಅಪರಾಧವೊಂದನ್ನು ರಾಜಕೀಯ ಮಾಡುವವರು ಇನ್ನೂ ದೊಡ್ಡ ರಾಕ್ಷಸರು. ಈ ಪರಿಸ್ಥಿತಿ ಇಟ್ಟುಕೊಂಡು ಸಮಾಜದಲ್ಲಿ ಯುವಕರಲ್ಲಿ ದ್ವೇಷದ ಬೀಜ ಬಿತ್ತುವ ಅವರನ್ನು ಪ್ರಚೋದಿಸುವ ಮತ್ತು ಕೊಲೆಗೆ ಕೊಲೆ ಎಂದು ಮಾಡುವವರ ವಿರುದ್ಧವೇ ಈ ಸಾಮರಸ್ಯ ನಡಿಗೆ ಇದೆ ಎಂದರು.

ಸಚಿವ ರಮಾನಾಥ ರೈ ಅವರು ಫರಂಗಿಪೇಟೆಯಿಂದ ಕಲ್ಲಡ್ಕದವರೆಗೆ ನಡೆದೇ ಬಂದುದು ವಿಶೇಷವಾಗಿತ್ತು ! ಉರಿಬಿಸಿಲಿನಲ್ಲಿ ಪಕ್ಷದ ಇತರ ಕೆಲವು ನಾಯಕರು ಸ್ವಲ್ಪ ದಣಿದಂತೆ ಕಂಡುಬಂದರೂ ರೈಗಳು ಮಾತ್ರ ಸುಸ್ತಾಗದೆ ಕಲ್ಲಡ್ಕವರೆಗೂ ನಡೆದರು. ಶಾಂತಿ ಸಂದೇಶ ಸಾರುವ ಬಿಳಿ ಟೋಪಿ ಧರಿಸಿದ್ದ ಸಚಿವ ರೈ ಉತ್ಸಾಹದಿಂದ ಭಾಗಿಯಾಗಿದ್ದರು.

ನಡಿಗೆಗೆ ಚಾಲನೆ ನೀಡಿದ ಬಳಿಕ ಪ್ರಕಾಶ್‌ ರೈ ನಡಿಗೆಯ ಮುಂಚೂಣಿಯಲ್ಲಿದ್ದರು. ಪ್ರಕಾಶ್‌ ರೈ ಅವರಿಗೆ ಅಭಿಮಾನಿಗಳು ಮುತ್ತಿದ್ದು, ಹಲವರು ಮಾತನಾಡಲು ಯತ್ನಿಸಿದರು. ಇನ್ನು ಕೆಲವರು ಸೆಲ್ಫಿಗೆ ಮುಗಿಬಿದ್ದರು. ಕೊನೆಗೆ ಮಾರಿಪಳ್ಳದಿಂದ ಪ್ರಕಾಶ್‌ ರೈ ಕಾರನ್ನೇರಿದರು. ಬಳಿಕ ಅವರು ಸಂಜೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾಲ್ನಡಿಗೆ ಜಾಥಾದಲ್ಲಿ ಯಾವುದೇ ರೀತಿ ಘೋಷಣೆ, ಪಕ್ಷ-ಸಂಘಟನೆಗಳ ಧ್ವಜ ಪ್ರದರ್ಶಿಸುವುದಕ್ಕೂ ಅವಕಾಶವಿರಲಿಲ್ಲ. ಸಾಮರಸ್ಯ ಸಾರುವ ಫ‌ಲಕಗಳು ಮಾತ್ರ ಕಂಡುಬಂದವು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಂದಿ ಬಿಳಿ ವಸ್ತ್ರ ಹಾಗೂ ಕ್ಯಾಪ್‌ ಧರಿಸಿದ್ದು ವಿಶೇಷವಾಗಿತ್ತು.

ರಾ.ಹೆ. 75ರ ಒಂದು ಪಥದ ರಸ್ತೆಯ ಎಡಭಾಗದಲ್ಲಿ ಮಾತ್ರ ಪಾದಯಾತ್ರೆ ಸಾಗಬೇಕು ಎಂದು ಸಚಿವ ರೈ ಅವರು ಮನವಿ ಮಾಡಿದರೂ ಇಡೀ ರಸ್ತೆಯಲ್ಲಿ ನಡಿಗೆ ಸಾಗಿತು. ಇದರಿಂದ ವಾಹನ ಸವಾರರಿಗೆ ತೊಂದರೆಯಾಯಿತು. ಕೊನೆಗೆ ಇನ್ನೊಂದು ಪಥದ ರಸ್ತೆಯ ಎರಡೂ ಬದಿಯ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಯಿತು. ವಾಹನಗಳ ದಟ್ಟಣೆ ತಡೆಯಲು ಎಲ್ಲ ಸರಕು ವಾಹನಗಳನ್ನು ರಸ್ತೆ ಬದಿಯಲ್ಲಿಯೇ ತಡೆದು ನಿಲ್ಲಿಸಲಾಗಿತ್ತು. ಇದರಿಂದ ಸುಮಾರು 1ಕಿ.ಮೀ.ನಷ್ಟು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಿ.ಸಿ.ರೋಡ್‌, ಕೈಕಂಬದಲ್ಲೂ ಟ್ರಾಫಿಕ್‌ ಜಾಮ್‌ ಆಗಿತ್ತು.

ನಡಿಗೆಯಲ್ಲಿ ಭಾಗವಹಿಸಿದವರಿಗೆ ಹಾದಿಯುದ್ದಕ್ಕೂ ಅಲ್ಲಲ್ಲಿ ಕುಡಿಯಲು ನೀರು, ತಂಪಾದ ಪಾನೀಯ, ಉಪಾಹಾರದ ವ್ಯವಸ್ಥೆಗಳನ್ನು ಸ್ಥಳೀಯರು ಮಾಡಿದ್ದರು. ಮೆಲ್ಕಾರ್‌ನಲ್ಲಿ ಗಂಜಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಪ ವಿರಾಮದ ಬಳಿಕ ನಡಿಗೆ ಮಾಣಿಗೆ ಸಾಗಿತು.

ನಡಿಗೆ ಸಮಯದಲ್ಲಿ ಪಾದಯಾತ್ರೆ ಸಾಗುತ್ತಿದ್ದ ರಸ್ತೆಯ ಇಕ್ಕೆಡೆ ತಂಪು ಪಾನೀಯ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲು ಜೋರಾಗಿದ್ದರಿಂದ ಬಸವಳಿದವರೂ ಆಗಾಗ್ಗೆ ಪಾನೀಯ ಸೇವನೆ ಮಾಡುತ್ತಿದ್ದರು.

ಅವರು ಎಸೆದ ಪಾನೀಯ ಲಕೋಟೆ, ನೀರಿನ ಬಾಟಲಿ, ಆಹಾರದ ಪ್ಲಾಸ್ಟಿಕ್‌ ಕವರ್‌ಗಳು ಇತ್ಯಾದಿಗಳು ರಸ್ತೆಯಲ್ಲೇ ಬಿದ್ದಿದ್ದು ಕಸವನ್ನು ಸ್ವತ್ಛ ಮಾಡುವುದಕ್ಕಾಗಿಯೇ ಸ್ವಯಂ ಸೇವಕರ ಒಂದು ತಂಡವನ್ನು ನಡಿಗೆಯುದ್ದಕ್ಕೂ ನಿಯೋಜಿಸಲಾಗಿತ್ತು. ಈ ತಂಡ ಪಾದಯಾತ್ರೆಯುದ್ದಕ್ಕೂ ಕಸವನ್ನು ತೆಗೆದು ಸ್ವತ್ಛತೆಯ ಕಡೆಗೆ ಗಮನಹರಿಸಿದ ದೃಶ್ಯ ಕಂಡುಬಂತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English