ಮರೆಯಾದ ಮಣ್ಣಿನ ಕಟ್ಟವೆಂಬ ರೈತರ ಪಾಲಿನ ಸಂಜೀವಿನಿ…!

3:15 PM, Thursday, December 14th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

sanjiviniಮಂಗಳೂರು: ಹಿಂದೆ ಜಿಲ್ಲೆಯಲ್ಲಿ ಏನೇ ಬೆಳೆಯಲಿ, ಎಲ್ಲರ ಗದ್ದೆಯಲ್ಲೂ ಭತ್ತ ಬೆಳೆ ಮಾತ್ರ ಕಾಣುತ್ತಿತ್ತು. ಅನ್ನಕ್ಕಾಗಿ ಯಾರ ಮುಂದೆಯೂ ಕೈಚಾಚುವ ಮಾತೇ ಇರಲಿಲ್ಲ. ವರ್ಷಕ್ಕೆರೆಡು ಬೆಳೆ ತೆಗೆಯುವುದು ಕರಗತವಾಗಿತ್ತು. ಹೀಗೆ ಸುಗ್ಗಿಯಲ್ಲಿ ಬೆಳೆಯುವ ಭತ್ತಕ್ಕೆ ನೀರಿನ ಆಸರೆಯಾಗಿದ್ದು, ರೈತರು ತಾವೇ ನಿರ್ಮಿಸಿದ ಮಣ್ಣಿನ ಕಟ್ಟಗಳು.

ಹೌದು, ಮಳೆಯನ್ನೇ ನಂಬಿ ಭತ್ತ ಬೆಳೆಯುವ ರೈತರು ಸುಗ್ಗಿ ಕಾಲದಲ್ಲಿ ಅಂದರೆ ಡಿಸೆಂಬರ್‌ ತಿಂಗಳಲ್ಲಿ ಬೆಳೆಯುವ ಭತ್ತಕ್ಕೆ ಗದ್ದೆಯ ಬದಿಗಳಲ್ಲಿ ಹಾದುಹೋಗುವ ತೋಡು (ಚರಂಡಿ)ಗಳಿಗೆ ಮಣ್ಣಿನ ಕಟ್ಟಗಳನ್ನು ಕಟ್ಟುತ್ತಿದ್ದರು. ಆ ಮೂಲಕವೇ ನೀರಿನ ಶೇಖರಣೆಯಾಗುತ್ತಿತ್ತು.

ಆಗೆಲ್ಲಾ ಪ್ರತಿಯೊಬ್ಬರ ಗದ್ದೆ ಬದಿಯಲ್ಲಿರುವ ತೋಡುಗಳಿಗೆ 10ರಿಂದ 15 ಮಣ್ಣಿನ ಕಟ್ಟಗಳಿದ್ದವು. ಪ್ರತೀ ಮನೆಯವರೂ ಕಟ್ಟಗಳನ್ನು ಕಟ್ಟಿಕೊಡಲು ಸಹಕರಿಸುತ್ತಿದ್ದರು. ಸುಮಾರು ಎರಡರಿಂದ ಮೂರು ತಿಂಗಳವರೆಗೆ ನೀರು ಶೇಖರಣೆ ಮಾಡಿಡುವ ಇಂತಹ ಮಣ್ಣಿನ ಕಟ್ಟಗಳು ರೈತರ ಪಾಲಿನ ಸಂಜೀವಿನಿಯಾಗಿದ್ದವು.

ಆಗಿನ ಕಾಲದಲ್ಲಿ ಕಾಲಕ್ಕೆ ತಕ್ಕಹಾಗೆ ಬೀಳುವ ಮಳೆಯ ಜೊತೆಗೆ, ರೈತರೇ ಜಲಸಂಪತ್ತಿನ ಮೂಲವನ್ನು ಕಂಡುಕೊಂಡಿದ್ದರಿಂದ ಬೆಳೆಗೆ ಯಾವುದೇ ಕೊರತೆಯಾಗುತ್ತಿರಲಿಲ್ಲ. ಕ್ರಮೇಣ ಜಿಲ್ಲೆಯ ಜನತೆಯ ವ್ಯಾಪಾರೀಕರಣದ ಮನೋಭಾವ ಹಾಗೂ ಭತ್ತದ ಬೆಳೆಗಳಿಗುಂಟಾದ ಬೆಲೆ ಕುಸಿತದಿಂದಾಗಿ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಯಿತು. ಜೊತೆಗೆ ಮಣ್ಣಿನ ಕಟ್ಟಗಳು ಕೂಡಾ ಕಡಿಮೆ ಆದವು.

ಅಡಿಕೆ, ರಬ್ಬರ್, ಕೊಕ್ಕೊದಂತಹ ವಾಣಿಜ್ಯ ಬೆಳೆಗಳತ್ತ ರೈತರು ಆಕರ್ಷಿತರಾದರು. ಆದರೆ, ಎಲ್ಲಿ ಭತ್ತ ಬೆಳೆಯುತ್ತಾರೋ ಅಲ್ಲಿ ಮಾತ್ರ ಇಂದಿಗೂ ಮಣ್ಣಿನ ಕಟ್ಟಗಳು ಜೀವಂತವಾಗಿವೆ. 15 ಕಟ್ಟಗಳ ಬದಲು ಒಂದೆರಡು ಕಟ್ಟಗಳನ್ನಷ್ಟೇ ಕಾಣಬಹುದು.

ಇಂದು ಮಳೆ ಬೀಳುವುದು ಕಡಿಮೆಯಾಗಿದೆ. ಪರಿಸರವಾದಿಗಳು ನೀರು ಇಂಗಿಸುವಿಕೆಯ ವಿಧಾನವನ್ನು ಅಳವಡಿಸಿ ಎನ್ನುತ್ತಿದ್ದಾರೆ. ಆದರೆ, ಆಗಿನ ಜನರ ಜಲಪೂರಣಕ್ಕೆ ತಾವೇ ಪರ್ಯಾಯವನ್ನು ಕಂಡುಕೊಂಡಿದ್ದರು. ಆದರೆ, ನಾವಿದನ್ನು ಮರೆತಿದ್ದೇವೆ.

ಈಗೇನಿದ್ದರೂ ಭವಿಷ್ಯವನ್ನು ಅಂಧಕಾರದತ್ತ ತಳ್ಳುವ, ಅಂತರ್ಜಲವನ್ನು ಬಸಿದು ತರುವ ಬೋರ್‌ವೆಲ್‌ಗಳದ್ದೇ ಕಾರುಬಾರು. ಇದರ ನಡುವೆ ಜಲಸಮೃದ್ಧಿಯನ್ನೇ ನೀಡುವ ಮಣ್ಣಿನ ಕಟ್ಟಗಳು ಮಾಯವಾಗುತ್ತಿವೆ. ರೈತರು ನಿರ್ಮಿಸುತ್ತಿದ್ದ ಮಣ್ಣಿನ ಕಟ್ಟಗಳು ಭತ್ತದ ಬೇಸಾಯದ ದೃಷ್ಟಿಯಿಂದ ಮಾತ್ರವಲ್ಲ; ಅಂತರ್ಜಲ ಹೆಚ್ಚಿಸುವ ದೃಷ್ಟಿಯಿಂದಲೂ ಅತ್ಯುತ್ತಮ ಪರಿಹಾರೋಪಯ ಎಂಬ ಚಿಂತನೆಗಳು ಮರೆಯಾಗುತ್ತಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English