ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಪರಿಶಿಷ್ಟ ಜಾತಿ/ ಪಂಗಡದವರ ದೌರ್ಜನ್ಯ ತಡೆ ಸಭೆ

4:06 PM, Monday, September 5th, 2011
Share
1 Star2 Stars3 Stars4 Stars5 Stars
(No Ratings Yet)
Loading...

SC ST Meeting / ಪರಿಶಿಷ್ಟ ಜಾತಿ ಪಂಗಡದವರ ದೌರ್ಜನ್ಯ ತಡೆ ಸಭೆ

ಮಂಗಳೂರು : ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಾಬೂರಾಮ್‌ ಅಧ್ಯಕ್ಷತೆಯಲ್ಲಿ ರವಿವಾರ ಕಚೇರಿಯ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ/ ಪಂಗಡದವರ ದೌರ್ಜನ್ಯ ತಡೆ ಕುರಿತಾಗಿ ಸಭೆ ನಡೆಯಿತು. ಸಭೆಯಲ್ಲಿ ಉಪ್ಪಿನಂಗಡಿಯ ಅಂಬೇಡ್ಕರ್‌ ಭವನವನ್ನು ಸಾರ್ವಜನಿಕ ಕಾರ್ಯಕ್ರಮ ನಡೆಸಲು ದಲಿತರಿಗೆ ಬಿಟ್ಟು ಕೊಡಬೇಕು ಅಥವಾ ಅಂಬೇಡ್ಕರ್‌ ಭವನ ನಿರ್ಮಿಸಲು ಪರ್ಯಾಯ ಜಾಗ ಒದಗಿಸಬೇಕು ಎಂದು ಒತ್ತಾಯಿಸಲಾಯಿತು.

ಉಪ್ಪಿನಂಗಡಿಯಲ್ಲಿ ಅಂಬೇಡ್ಕರ್‌ ಭವನ 1983 – 84ರಲ್ಲಿ ಸ್ಥಾಪಿಸಲಾಗಿದೆ. 2000 ಇಸವಿ ಬಳಿಕ ಇಲ್ಲಿ ಕಾಲೇಜು ಆರಂಭವಾಗಿದ್ದು ಕಾಲೇಜಿನವರು 35,000 ರೂ. ಖರ್ಚು ಮಾಡಿ ಅಂಬೇಡ್ಕರ್‌ ಭವನದಲ್ಲಿ ಅಡ್ಡ ಗೋಡೆ ಕಟ್ಟಿ ಎರಡು ತರಗತಿ ಕೋಣೆಗಳನ್ನು ನಿರ್ಮಿಸಿದ್ದಾರೆ. ಈಗ ಅದನ್ನು ನಮ್ಮ (ದಲಿತರ) ಕಾರ್ಯಕ್ರಮಗಳಿಗೆ ಬಿಟ್ಟು ಕೊಡಲು ಒಪ್ಪಿಗೆ ನೀಡುತ್ತಿಲ್ಲ ಎಂದು ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷ ಸೋಮನಾಥ್‌ ಆರೋಪಿಸಿದರು.

SC ST Meeting / ಪರಿಶಿಷ್ಟ ಜಾತಿ ಪಂಗಡದವರ ದೌರ್ಜನ್ಯ ತಡೆ ಸಭೆ

ಕಾಲೇಜಿನಲ್ಲಿ ತರಗತಿ ನಡೆಸುವುದಕ್ಕೆ ನಮ್ಮ ಅಡ್ಡಿ ಇಲ್ಲ. ಆದರೆ ನಮಗೆ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಆವಶ್ಯಕತೆ ಬಿದ್ದಾಗ ಬಿಟ್ಟು ಕೊಡಲಿ. ಇದು ಅಸಾಧ್ಯ ಎಂದಾದರೆ ಉಪ್ಪಿನಂಗಡಿ ಬಸ್‌ ನಿಲ್ದಾಣದ ಪಕ್ಕದಲ್ಲಿ ಇರುವ ಸರಕಾರಿ ಜಾಗವನ್ನು ನಮಗೆ ಅಂಬೇಡ್ಕರ್‌ ಭವನ ನಿರ್ಮಿಸಲು ಒದಗಿಸಿ ಕೊಡಿ ಎಂದು ಸೋಮನಾಥ್‌ ಆಗ್ರಹಿಸಿದರು.

ಕಡಬ ಪೊಲೀಸ್‌ ಠಾಣೆಯ ಬಗ್ಗೆ ಮಾತನಾಡಿದ ಕಡಬದ ಶಶಿಧರ ಹಾಗೂ ಮಹಾಲಿಂಗ ಅವರು ಅಲ್ಲಿ ದಲಿತರ ದೂರುಗಳನ್ನು ಸರಿಯಾಗಿ ಸ್ವೀಕರಿಸುತ್ತಿಲ್ಲ. ರಾತ್ರಿ ವೇಳೆಯಂತೂ ಈ ಠಾಣೆಗೆ ಭೇಟಿ ನೀಡುವ ಧೈರ್ಯ ಯಾರಿಗೂ ಇಲ್ಲ. ಕೊಂಬಾರು ಮೊಸರು ಕುಡಿಕೆ ಉತ್ಸವ ಸಂದರ್ಭದಲ್ಲಿ ದಲಿತರ ಮೇಲೆ ನಡೆದ ಹಲ್ಲೆಯ ಬಗ್ಗೆ ದೂರು ಸ್ವೀಕರಿಸಲು ಪೊಲೀಸರು 3 ದಿನ ಅಲೆದಾಡಿಸಿದ್ದಾರೆ ಎಂದು ಆರೋಪಿಸಿದರು. ಅದೇ ರೀತಿ ಉಪ್ಪಿನಂಗಡಿ ಪೊಲೀಸ್‌ ಠಾಣೆಯ ಕೆಲವು ಸಿಬಂದಿಗಳು ಠಾಣೆಗೆ ದೂರು ನೀಡಲು ತೆರಳುವ ದಲಿತರ ಜತೆ ಅಸಮರ್ಪಕವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು.

ದಲಿತ ಮುಖಂಡ ಎಸ್‌.ಪಿ. ಆನಂದ ಮಾತನಾಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಲಿತ ದೌರ್ಜನ್ಯ ತಡೆ ಬಗ್ಗೆ ಸಭೆ ನಡೆಯದೆ 10 ತಿಂಗಳಾಯಿತು ಎಂದು ಹೇಳಿದರು. ವೇಣೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಡೊಂಕುಬೆಟ್ಟು ಎಂಬಲ್ಲಿ ಸುಶೀಲಾ ಅವರು 60 ವರ್ಷಗಳಿಂದ ಪಟ್ಟಾ ಜಾಗದಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ಅವರ ದಾರಿಯನ್ನು ತೋಮಸ್‌ ಎಂಬವರು ಅತಿಕ್ರಮಣ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಬಂಟ್ವಾಳದ ದಲಿತರ ಕಾಲನಿಗೆ ಮೂಲಭೂತ ಸೌಲಭ್ಯ, ಬಂಟ್ವಾಳದ ಆಶ್ರಮ ಶಾಲೆಗಳಿಗೆ ಈ ವರ್ಷ ಸಮವಸ್ತ್ರ, ಪುಸ್ತಕ ಒದಗಿಸಿಲ್ಲ. ಕೇವಲ 200 ರೂ. ಮಾತ್ರ ಪಾವತಿಸಲಾಗಿದೆ ಎಂದು ಆದಿ ದ್ರಾವಿಡ ಸಮಾಜದ ವಿಶ್ವನಾಥ ಮತ್ತು ಬಾಲಕೃಷ್ಣ ವಿವರಿಸಿದರು.

ಇಂದಿರಾ ಮಾತನಾಡಿ ಸರಕಾರಿ ಕೆಲಸ ಕೊಡಿಸುವುದಾಗಿ ಮಹಿಳೆಯಿಂದ ಒಂದೂವರೆ ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣದ ಬಗ್ಗೆ ದೂರು ನೀಡಿ 1 ವರ್ಷ ಕಳೆದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸುಬ್ರಹ್ಮಣ್ಯದ ಕೇನ್ಯ ಗ್ರಾಮದ ಅಡ್ಡ ಬೈಲಿನಲ್ಲಿ ‘ಸ್ನೇಹಿತರ ಕಲಾ ಸಂಘ’ದವರು ದಾರಿಗೆ ಅಡ್ಡವಾಗಿ ಭಜನಾ ಮಂದಿರ ನಿರ್ಮಿಸಿ ಮುದರ ಎಂಬ ದಲಿತನ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದರೂ ದೂರು ದಾಖಲಾಗಿಲ್ಲ ಎಂದು ಪುತ್ತೂರಿನ ಕೂಸಪ್ಪ ಆರೋಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English