ಮಂಗಳೂರು, ಡಿ.15: ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅವರಿಗೆ ಅರುವತ್ತು ತುಂಬಿದ ಅಂಗವಾಗಿ ಅರುವತ್ತರ ತಾರಲೋಕ ಕಾರ್ಯಕ್ರಮ ಡಿ.24ರಂದು ನಗರದ ಪುರಭವನದಲ್ಲಿ ಅಪರಾಹ್ನ 2:30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಡಾ.ನಾ.ದಾಮೋದರ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ‘ಚಿನ್ನ ಚಿತ್ತಾರ’ ಎನ್ನುವ ಅಭಿನಂದನೀಯ ಗ್ರಂಥ ಬಿಡುಗಡೆಯ ಜತೆಯಲ್ಲಿ ವಿಚಾರ ಸಂಕಿರಣ, ಚಿನ್ನಾರೊಂದಿಗೆ ರಸನಿಮಿಷಗಳು, ಚಿನ್ನಾ ಅವರು ಅಭಿನಯಿಸಿದ ನಾಟಕಗಳ, ಚಲನಚಿತ್ರ ಹಾಡುಗಳ ಗಾಯನಗೋಷ್ಠಿ ಹಾಗೂ ಅಭಿನಂದನೀಯ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದಾರೆ. ಉದ್ಯಮಿ ಡಾ.ಪಿ.ದಯಾನಂದ ಪೈ ‘ಚಿನ್ನ -ಚಿತ್ತಾರ’ ಗ್ರಂಥ ಅನಾವರಣ ಮಾಡಲಿದ್ದಾರೆ. ವಿಶೇಷವಾಗಿ ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ.ಎಸ್.ನಾಗಾಭರಣ, ಸಿನಿಮಾ ಅಂಗಳಕ್ಕೆ ಸಂಬಂಧಿಸಿದ ಗಣ್ಯರು ಭಾಗವಹಿಸಲಿದ್ದಾರೆ.
ಇದರ ಜತೆಯಲ್ಲಿ ಉದ್ಯಮಿಗಳಾದ ಪ್ರದೀಪ್ ಪೈ, ಸಂಗೀತ ನಿರ್ದೇಶಕ ವಿ. ಮನೋಹರ್, ನಟ ಸುಂದರ್‌ರಾಜ್, ಸಂಗೀತ ನಿರ್ದೇಶಕ ಗುರುಕಿರಣ್, ಸಾಹಿತಿ ಗೋಪಾಲಕೃಷ್ಣ ಪೈ, ಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಭಾಗವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಚಿನ್ನಾ ನಟಿಸಿದ ಚಿತ್ರಗಳಾದ ‘ಆಸ್ಫೋಟ’ ಡಿ.22ರಂದು, ‘ಉಜ್ವಾಡು’ ಡಿ.23ರಂದು ಹಾಗೂ ‘ಬಂಗಾರ್ ಪಟ್ಲೇರ್’ ಸಿನಿಮಾ ಡಿ.24ರಂದು ಸಂಜೆ 6.30ಕ್ಕೆ ಪ್ರದರ್ಶನವು ನಗರದ ಬಿಗ್ ಸಿನಿಮಾಸ್‌ನಲ್ಲಿ ನಡೆಯಲಿದೆ ಎಂದರು.
ಈ ಸಂದರ್ಭ ವಿಠಲ್ ಕುಡ್ವಾ, ರಾಯ್ ಕ್ಯಾಸ್ಟಲಿನೋ, ವೇಣು ಶರ್ಮ ಹಾಗೂ ಸ್ಮಿತಾ ಶೆಣೈ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English