ಮಂಗಳೂರು: ಗುರುವಿನ ವ್ಯಕ್ತಿತ್ವವನ್ನು ಶಿಷ್ಯರ ಸಾಧನೆಯಲ್ಲಿ ಕಾಣು ಎಂಬುದು ಹಿರಿಯರ ಅನುಭವದ ಮಾತು. ನೃತ್ಯ ಗುರು ಶಾರದಾಮಣಿ ಶೇಖರ್ ಈ ಲೋಕೋಕ್ತಿಗೆ ಅನ್ವರ್ಥ ನಾಮ. ಕಾರಣ ಇಲ್ಲಿದೆ.
ಕಳೆದ ಮೂರು ದಶಕಗಳಲ್ಲಿ ಸನಾತನ ನಾಟ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ನೃತ್ಯಪಟುವಾಗಿ ಹೊರಹೊಮ್ಮಿದ್ದರೆ ಅದರ ಮೂಲ ಪ್ರೇರಣೆ ಶಾರದಾಮಣಿ ಶೇಖರ್! ಇದೀಗ ಅವರ ಶಿಷ್ಯರು ಜಿಲ್ಲೆ, ರಾಜ್ಯ, ದೇಶದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ಗುರುಗಳಾಗಿ ಮಿಂಚುತ್ತಿದ್ದಾರೆ.
ಮಂಗಳೂರಿವರೇ ಆದ ಶಾರದಾಮಣಿ ಶೇಖರ್, ಭರತನಾಟ್ಯವನ್ನು ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್, ಶಾಂತಲಾ ಪ್ರಶಸ್ತಿ ಪುರಸ್ಕೃತರಾದ ದಿ. ಮುರಳೀಧರ್ ರಾವ್ ಮತ್ತು ಕೂಚುಪುಡಿ ನೃತ್ಯವನ್ನು ಹೈದರಾಬಾದ್ ಕೂಚುಪುಡಿ ಆರ್ಟ್ ಅಕಾಡೆಮಿಯ ಶೋಭಾನಾಯ್ಡು ಹಾಗೂ ಬೆಂಗಳೂರಿನ ಬಿ.ಎಸ್. ಸುನಂದಾದೇವಿ ಅವರಿಂದ ಅಭ್ಯಾಸ ಮಾಡಿದರು.
ತಂದೆ ದಿ. ಕೆ.ಎನ್.ಸುಂದರಾಚಾರ್ಯ ಹಾಗೂ ವಿದ್ವಾನ್ ಶ್ರೀನಾಥ್ ಮರಾಠೆ ಅವರಿಂದ ಸಂಗೀತವನ್ನೂ ಕಲಿತರು. ಸನಾತನ ನಾಟ್ಯಾಲಯ ಖ್ಯಾತ ಸಂಗೀತ ಗುರು ಎನ್.ಕೆ. ಸುಂದರಾಚಾರ್ಯ ಅವರ ಕನಸಿನ ಕೂಸು. ಆದರೆ, ಅದನ್ನು ಸಾಕಾರಗೊಳಿಸಿದ್ದು ಅವರ ಮಗಳು ಶಾರದಾಮಣಿ.
ಕಳೆದ 36 ವರ್ಷಗಳಲ್ಲಿ ಮಂಗಳೂರು, ಮೂಡುಬಿದ್ರೆ ಹಾಗೂ ಕಾರ್ಕಳದಲ್ಲಿ ಅನೇಕ ಶಿಷ್ಯವೃಂದವನ್ನು ಹೊಂದಿರುವ ಸಂಸ್ಥೆಯಿಂದ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸಂಗೀತ ಪದವಿಯನ್ನು ಪಡೆದಿದ್ದಾರೆ. ಇವರ ಶಿಷ್ಯರು ದೇಶ, ವಿದೇಶಗಳಲ್ಲಿ ನೃತ್ಯ ಗುರುಗಳಾಗಿದ್ದರೆ, ಅವರ ಇನ್ನೋರ್ವ ಶಿಷ್ಯೆ ಶ್ರೀಲತಾ ನಾಗರಾಜ್ ಸನಾತನದಲ್ಲಿಯೇ 20 ವರ್ಷಗಳಿಂದ ನೃತ್ಯ ಗುರುಗಳಾಗಿ ಅನೇಕ ಮಕ್ಕಳಿಗೆ ಜ್ಞಾನಾರ್ಜನೆ ಮಾಡುತ್ತಿದ್ದಾರೆ.
ಸನಾತನದ ವಿದ್ಯಾರ್ಥಿಗಳು ಈಗಾಗಲೇ ಅಮೆರಿಕಾ ಕನ್ನಡೋತ್ಸವ, ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಚಾಲುಕ್ಯ ಉತ್ಸವ, ಅಂತಾರಾಷ್ಟ್ರೀಯ ಕನ್ನಡ ಸಮಾವೇಶ, ಆಳ್ವಾಸ್ ನುಡಿಸಿರಿ, ವಿರಾಸತ್, 66ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮುಂಬಯಿ, ನಾಸಿಕ್ ಸೇರಿದಂತೆ ಅನೇಕ ಹೊರ ರಾಜ್ಯ, ಜಿಲ್ಲೆಗಳ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.
ದೇಶಭಕ್ತಿಯನ್ನು ಜಾಗೃತಿಗೊಳಿಸುವ ಗೀತ ರೂಪಕ ‘ರಾಷ್ಟ್ರದೇವೋಭವ’ 175ಕ್ಕೂ ಅಧಿಕ ಪ್ರದರ್ಶನಗಳ ಮೂಲಕ ಜನಜನಿತವಾಗಿದೆ. ಖ್ಯಾತ ವಿದ್ವಾಂಸರಾದ ಪ್ರೊ. ಅಮೃತ ಸೋಮೇಶ್ವರ ಅವರ ‘ಸತ್ಯನಾಪುರತ ಸಿರಿ’ ಗೀತರೂಪಕ 250ಕ್ಕೂ ಅಧಿಕ ಹಾಗೂ ಸೇಡಿಯಾಪು ಕೃಷ್ಣ ಭಟ್ಟರ ‘ಪುಣ್ಯ ಲಹರಿ ಶಬರಿ’ ಗೀತರೂಪಕ 300ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ.
ಶಾರದಾಮಣಿಯವರ ನೃತ್ಯ ಸಾಧನೆಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ, ಪ್ರಶಸ್ತಿಗಳ ಜೊತೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ನೀಡುವ ಈ ಬಾರಿಯ ‘ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿವೆ. ಮಧ್ಯಪ್ರದೇಶ ಸರ್ಕಾರ ನೀಡುವ ಕಾಳಿದಾಸ್ ಪುರಸ್ಕಾರ್ ಸಮ್ಮಾನ್ ಆಯ್ಕೆ ಸಮಿತಿ ಸದಸ್ಯರಾಗಿರುವ ಇವರು, ಅನೇಕ ಪ್ರತಿಷ್ಠಿತ ಸಂಸ್ಥೆಗಳು ಆಯೋಜಿಸುವ ನೃತ್ಯ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿಯೂ ಕಲೆಗೆ ನ್ಯಾಯ ಒದಗಿಸುತ್ತಿದ್ದಾರೆ.
ಶಾರದಾಮಣಿ ಶೇಖರ್ ಕೇವಲ ನೃತ್ಯಗುರು ಮಾತ್ರವಲ್ಲ, ನಿರ್ಮಲ ಹಾಗೂ ಮೃದು ಮನಸ್ಸಿನ ತಾಯಿ. ಯಾವುದೇ ಮಗು ತಾನು ಹೇಳಿಕೊಟ್ಟ ನೃತ್ಯಪಟ್ಟುಗಳನ್ನು ಕಲಿಯಲು ಅಸಾಧ್ಯವಾದರೆ ಆ ಮಗುವಿಗಿಂತಲೂ ಶಾರದಾಮಣಿಯವರೇ ಹೆಚ್ಚು ನೊಂದುಕೊಳ್ಳುತ್ತಿದ್ದರು. ಅವಿವಾಹಿತರಾಗಿದ್ದ ಇಳಿವಯಸ್ಸಿನ ಅವರ ನೃತ್ಯಗುರು ಮುರಳೀಧರ್ ರಾವ್ ಅವರನ್ನು ಕಳೆದ 9 ವರ್ಷಗಳಿಂದ ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು ಆರೈಕೆ ಮಾಡಿದರು.
ಇಂದಿಗೂ ಅದೆಷ್ಟೊ ಬಡಮಕ್ಕಳ ಶಾಲಾ, ಕಾಲೇಜು ಶುಲ್ಕಗಳನ್ನು ತಾವೇ ಭರಿಸುತ್ತಿದ್ದಾರೆ. ಅವಕಾಶ ವಂಚಿತ 9ಮಕ್ಕಳನ್ನು ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಓದಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಇಲ್ಲಿ ಕೇವಲ ನೃತ್ಯಾಭ್ಯಾಸ ಮಾತ್ರವಲ್ಲದೆ, ಅವರ ಪರಿಪೂರ್ಣವಾದ ವ್ಯಕ್ತಿತ್ವಕ್ಕಾಗಿ ಯೋಗ, ಸದ್ಗುಣ ವಿಕಾಸ, ಸಂಸ್ಕಾರ, ಮಾತೃವಿಕಾಸ ಶಿಬಿರಗಳೂ ಆಗಾಗ ನಡೆಯುತ್ತಿವೆ.
ಶಾರದಾಮಣಿಯವರ ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತವರು ಇವರ ಪತಿ ಚಂದ್ರಶೇಖರ್ ಶೆಟ್ಟಿ ಹಾಗೂ ಶಿಷ್ಯೆ ಶ್ರೀಲತಾ ನಾಗರಾಜ್. ಚಂದ್ರಶೇಖರ್-ಶಾರದಾಮಣಿಯವರ ಪುತ್ರಿ ಶುಭಾಮಣಿ, ಖ್ಯಾತ ನೃತ್ಯ ಗುರು ದೆಹಲಿಯ ಕಲೈಮಾಮಣಿ ರಮಾ ವೈದ್ಯನಾಥನ್ ಅವರಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ದೇಶ, ವಿದೇಶಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಪ್ರತಿಯೊಬ್ಬರು ದೀಪ ಆಗದೇ ಹೋಗಬಹುದು. ಆದರೆ, ಕನ್ನಡಿಯಾಗಬಲ್ಲರು. ತಿಳಿದಿರುವ ಜ್ಞಾನ ಮತ್ತು ಸಂತೋಷವನ್ನು ಇತರರಿಗೂ ಹಂಚುವುದು ನಿಜವಾದ ಜೀವನ ಎಂಬ ಸನಾತನ ನಾಟ್ಯಾಲಯದ ಧ್ಯೇಯವಾಕ್ಯಗಳ ಪ್ರತಿರೂಪದಂತಿದ್ದಾರೆ ಶಾರದಾ ಮಣಿಶೇಖರ್.
Click this button or press Ctrl+G to toggle between Kannada and English