ಬೆಳ್ತಂಗಡಿ: ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಕ್ಕೆ ಇಂದು ದೇಶ ವಿದೇಶಗಳಲ್ಲಿ ಮಾನ್ಯತೆ ಇದೆ. ಉತ್ತಮ ಸೇವೆ-ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ನೂತನ ಪದವೀಧರರು ತಜ್ಞರಾಗಿ ಬದ್ಧತೆಯಿಂದ ಆರೋಗ್ಯ ಭಾಗ್ಯ ಕಾಪಾಡಲು ಕಟಿಬದ್ಧರಾಗಿ ಸೇವೆ ಮಾಡಬೇಕು ಎಂದು ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚ ಹೇಳಿದರು.
ಅವರು ಶುಕ್ರವಾರ ಉಜಿರೆಯಲ್ಲಿರುವ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಪೂರೈಸಿದ 106 ಮಂದಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಧರ್ಮಸ್ಥಳದಲ್ಲಿ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಪರಿಶುದ್ಧ ಪ್ರಕೃತಿ ಚಿಕಿತ್ಸಾ ಕ್ರಮವನ್ನು ಅಳವಡಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ದೇಶದಲ್ಲೇ ಪ್ರಥಮವಾಗಿ ಉಜಿರೆಯಲ್ಲಿರುವ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ಆಯುಷ್ ಮಂತ್ರಾಲಯದಿಂದ ಉತ್ಕೃಷ್ಟತಾ ಕಾಲೇಜು ಎಂಬ ಮಾನ್ಯತೆ ನೀಡಲಾಗಿದೆ ಎಂದರು. ಕಾಲೇಜು ಅಲ್ಪಾವಧಿಯಲ್ಲಿ ಉನ್ನತ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ತಾತ್ಕಾಲಿಕ ಸುಖ-ಸಂತೋಷದ ಲಾಲಸೆಯಿಂದ ಆರೋಗ್ಯವನ್ನು ಕಳೆದುಕೊಳ್ಳಬಾರದು. ಪಂಚೇಂದ್ರಿಯಗಳ ನಿಯಂತ್ರಣದಿಂದ ಆರೋಗ್ಯ ಭಾಗ್ಯ ರಕ್ಷಣೆ ಸಾಧ್ಯವಾಗುತ್ತದೆ.
ನೂತನ ಪದವೀಧರರು ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನದ ರಾಯಬಾರಿಗಳಾಗಿ, ಕೀಳರಿಮೆ ಇಲ್ಲದೆ ಮಾನವ ಜನಾಂಗದ ಸನ್ಮಿತ್ರರಾಗಿ, ಮಾರ್ಗದರ್ಶಕರಾಗಿ ಆರೋಗ್ಯ ರಕ್ಷಣೆಗೆ ಸಹಕಾರ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ದೆಹಲಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಆಪ್ತ ವೈದ್ಯಕೀಯ ಸಲಹೆಗಾರರಾಗಿ ನೇಮಕವಾದ ಡಾ. ಕನಕ್ ಸೋನಿ ತಮ್ಮ ಅನುಭವ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಡಾ. ಶಿವಪ್ರಸಾದ ಶೆಟ್ಟಿ ವಂದಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಮತ್ತು ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು. ಡಾ. ಚಂದ್ರಕಾಂತ್ ಮತ್ತು ಡಾ. ಜ್ಯೋಸ್ನಾ ಥಾಯಿಲ್ ಕಾರ್ಯಕ್ರಮ ನಿರ್ವಹಿಸಿದರು. 97 ಮಂದಿ ಪದವೀಧರರು ಹಾಗೂ 9 ಮಂದಿ ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.
Click this button or press Ctrl+G to toggle between Kannada and English