ಪುರಭವನದಲ್ಲಿ ಶಿಕ್ಷಕ ದಿನಾಚರಣೆ ಹಾಗೂ ಸನ್ಮಾನ

9:59 PM, Monday, September 5th, 2011
Share
1 Star2 Stars3 Stars4 Stars5 Stars
(4 rating, 1 votes)
Loading...

Shikshakar /ಶಿಕ್ಷಕರು

ಮಂಗಳೂರು : ದ.ಕ.ಜಿ.ಪಂ. ಸಾರ್ವಜನಿಕ ಇಲಾಖೆ, ದ.ಕ.ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಮಂಗಳೂರು ನಗರ ವಲಯ ಶಿಕ್ಷಕ ದಿನಾಚರಣೆ ಸಮಿತಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಸೋಮವಾರ ಜರಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಸಮ್ಮಾನ ಸಮಾರಂಭವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಉದ್ಘಾಟಿಸಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಶಿಕ್ಷಕರನ್ನು ಚುನಾವಣಾ ಸಂಬಂಧಿ ಕರ್ತವ್ಯಗಳು ಸೇರಿದಂತೆ ಇತರ ಇಲಾಖೆಗಳ ಕೆಲಸಗಳಿಗೆ ನಿಯೋಜಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಚುನಾವಣಾ ಸಂದರ್ಭಗಳಲ್ಲಿ ತುರ್ತು ಅವಶ್ಯಕತೆಗಳಿಗೆ ಹೊರತು ಪಡಿಸಿದಂತೆ ಇತರ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸುವುದರಿಂದ ಶಿಕ್ಷಣದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದು ಸಚಿವರು ಹೇಳಿದರು. ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಅತ್ಯಂತ ಗೌರವ ಸ್ಥಾನವಿದೆ. ಶಿಕ್ಷಕರು ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳು. ಇಂದು ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಗಳಿಸಿರುವ ಹೆಗ್ಗಳಿಕೆಯಲ್ಲಿ ಶಿಕ್ಷಕರ ನೀಡಿರುವ ಕೊಡುಗೆ ಅಪಾರವಾದುದು. ಶಿಕ್ಷಕ ವರ್ಗಕ್ಕೆ ಸಮಸ್ಯೆಗಳು ಎದುರಾದಾಗ ಅದನ್ನು ನಿವಾರಿಸುವುದು ಜನಪ್ರತಿನಿಧಿಗಳ ಕರ್ತವ್ಯ ಎಂದ ಅವರು ಸಮಸ್ಯೆಗಳ ಪರಿಹಾರಕ್ಕೆ ಪ್ರತಿಭಟನೆಯ ಹಾದಿಯನ್ನು ಅನುಸರಿಸದಂತೆ ಅವರು ಶಿಕ್ಷಕರಿಗೆ ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ನಿಕ್‌ ಮುಖ್ಯ ಅತಿಥಿಯಾಗಿದ್ದರು. ಶಿಕ್ಷಣ ಇಲಾಖೆಗೆ ಅನುದಾನ ಬಿಡುಗಡೆಯಲ್ಲಿ ಕರ್ನಾಟಕ ರಾಜ್ಯ ಇಡೀ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಶಿಕ್ಷಕರು ಎದುರಿಸುತ್ತಿದ್ದ ಆನೇಕ ಸಮಸ್ಯೆಗಳನ್ನು ಪರಿಹರಿಸಿದೆ. ಇನ್ನು ಕೆಲವು ಸಮಸ್ಯೆಗಳು ಪರಿಹಾರದ ಹಾದಿಯಲ್ಲಿವೆ ಎಂದು ಅವರು ತಮ್ಮ ಭಾಷಣದಲ್ಲಿ ವಿವರಿಸಿದರು.

2010-11 ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕೃತ ದಯಾನಂದ ರೈ, 2011-12 ನೇ ಸಾಲಿನ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಯಶೋಧ ಕೆ.ಎನ್‌., ಶುಭಾಶ್ಚಂದ್ರ ರೈ. ಬಿ., ಇಮಾಕುಲಾತ್‌ ನಜ್ರೆತ್‌, ಸುಧಾಕರ ಸಾಲ್ಯಾನ್‌ ಬಿ., ರವಿಕಲಾ ಶೆಟ್ಟಿ , ವಿಜಯಾ ಶೆಟ್ಟಿ, ತಿರುಮಲೇಶ್ವರ ಭಟ್‌ ( ಪ್ರಾಥಮಿಕ ಶಾಲಾ ವಿಭಾಗ), ಝೀಟಾ ಡಯಸ್‌, ಗೋಪಾಲಕೃಷ್ಣ ಐ, ರಾಧಾಕೃಷ್ಣ ಟಿ., ಆನಂದ ವೈ.ಎ., ವಿನೋದ ( ಪ್ರೌಢ ಶಾಲಾ ವಿಭಾಗ) ಅವರನ್ನು ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಸಮ್ಮಾನಿಸಿದರು.

2011 ನೇ ಸಾಲಿನಲ್ಲಿ ಎಸ್‌ಎಲ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.ನೂರು ಫಲಿತಾಂಶ ದಾಖಲಿಸಿದ ಮಂಗಳೂರು ನಗರ ವಲಯದ ಆರು ಪ್ರೌಢಶಾಲೆಗಳನ್ನು ಹಾಗೂ 2010 ರ ಸೆ.9 ರಿಂದ 2011 ರ ಆ.31 ವರೆಗೆ ಮಂಗಳೂರು ನಗರ ವಲಯ ವ್ಯಾಪ್ತಿಯ ಶಾಲೆಗಳಲ್ಲಿ ನಿವೃತ್ತರಾದ ಶಿಕ್ಷಕರನ್ನು ಸಮ್ಮಾನಿಸಲಾಯಿತು.

ಸಂತ ಅಲೋಶಿಯಸ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ನಾ.ದಾಮೋದರ ಶೆಟ್ಟಿ ಅವರು ಉಪನ್ಯಾಸ ನೀಡಿದರು. ರಾಜ್ಯ ವಿಧಾನಸಭಾ ಉಪಾಧ್ಯಕ್ಷ ಎನ್‌. ಯೋಗೀಶ್‌ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯು.ಟಿ.ಖಾದರ್‌, ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್‌, ಉಪಾಧ್ಯಕ್ಷೆ ಧನಲಕ್ಷ್ಮಿ ಸ್ಥಾಯಿಸಮಿತಿ ಅಧ್ಯಕ್ಷ ಈಶ್ವರ ಕಟೀಲು, ಸಿಇಒ ಡಾ| ವಿಜಯ ಪ್ರಕಾಶ್‌, ಮನಪಾ ಉಪಮೇಯರ್‌ ಗೀತಾ ನಾಯಕ್‌, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಪ್ರೌಢ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ರಾಮಕೃಷ್ಣ ಶಿರೂರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಶಿವಶಂಕರ ಭಟ್‌ ಅತಿಥಿಗಳಾಗಿದ್ದರು.

ಜೆಪ್ಪು ಸಂತ ಜೆರೋಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಗುರುವಂದನೆ ನೆರವೇರಿತು. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಮೋಸಸ್‌ ಜಯಶೇಖರ್‌ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದಯಾವತಿ ವಂದಿಸಿದರು. ಮಂಜುಳಾ ಶೆಟ್ಟಿ ಹಾಗೂ ಉಮೇಶ್‌ ಕೆ.ಆರ್‌. ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English