ರಸ್ತೆಬದಿ ಕಸ ಎಸೆಯುವರಿಗೆ ಪಾಠ ಕಲಿಸಿದ ಮಂಗಳೂರು ಯುವಕ

2:34 PM, Thursday, January 4th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

swachathaಮಂಗಳೂರು: ದೇಶದಾದ್ಯಂತ ಸ್ವಚ್ಛ ಭಾರತ್ ಅಭಿಯಾನದಡಿ ಹಲವಾರು ಸಂಘ ಸಂಸ್ಥೆಗಳು ದೇಶವನ್ನು ಸ್ವಚ್ಛಗೊಳಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿವೆ. ಭಾನುವಾರ ಬಂತೆಂದರೆ ಪೊರಕೆ ಹಿಡಿದು ಸಾವಿರಾರು ಸ್ವಯಂ ಸೇವಕರು ರಸ್ತೆಗಿಳಿದು ಪರಿಸರವನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಸೋಮವಾರ ಅದೇ ಸ್ಥಳಗಳಲ್ಲಿ ಸಾರ್ಜನಿಕರು ಮತ್ತೆ ತ್ಯಾಜ್ಯ ಸುರಿದು ಗಲೀಜುಗೊಳಿಸುತ್ತಾರೆ.

ಸಾರ್ವಜನಿಕರ ಈ ಮನಸ್ಥತಿಯ ವಿರುದ್ದ ಮಂಗಳೂರಿನಲ್ಲಿ ನೂತನ ಅಭಿಯಾನ ಆರಂಭವಾಗಿದೆ. ಬಾನುವಾರವಷ್ಟೇ ಸ್ವಚ್ಛಗೊಳಿಸಿದ ರಸ್ತೆಯಲ್ಲಿ ಕಸ ಎಸೆದಿದ್ದಕ್ಕೆ ಸಿಟ್ಟಾದ ಯುವಕನೋರ್ವ ಅದೇ ಕಸವನ್ನು ವಸ್ತ್ರ ಮಳಿಗೆಯೊಳಗೆ ಸುರಿದ ಘಟನೆ ಮಂಗಳೂರಿನ ಕರಂಗಲ್ಪಾಡಿಯಲ್ಲಿ ನಡೆದಿದೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯುವಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ರಾಮಕೃಷ್ಣ ಮಿಷನ್ ವತಿಯಿಂದ ಪ್ರತೀ ಆದಿತ್ಯವಾರ ನೂರಾರು ಸ್ವಯಂ ಸೇವಕರು ಮಂಗಳೂರು ನಗರವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಆದರೆ ಮಾರನೇ ದಿನ ಮತ್ತೆ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಸಾರ್ವಜನಿಕರು ಕಸ ಹಾಕುತ್ತಿದ್ದರು.‌

ಇದೇ ರೀತಿ ಮಂಗಳೂರಿನ ಕರಂಗಲ್ಪಾಡಿಯಲ್ಲೂ ಡಿ.31 ರ ಆದಿತ್ಯವಾರ ಸ್ವಯಂ ಸೇವಕರು ಸ್ವಚ್ಛ ಗೊಳಿಸಿದ್ದರು. ಅದೇ ದಿನ ಸ್ಥಳೀಯ ವಸ್ತ್ರ ಮಳಿಗೆಯ ಸಿಬ್ಬಂದಿ ಸ್ವಯಂ ಸೇವಕರು ಸ್ವಚ್ಛಗೊಳಿಸಿದ್ದ ಅದೇ ಜಾಗದಲ್ಲಿ ಕಸ ಎಸೆದಿದ್ದಾರೆ. ಇದರಿಂದ ಕೋಪಗೊಂಡ ಸೌರಜ್ ಎಂಬವರು ಮಳಿಗೆಯ ಸಿಬ್ಬಂದಿ ಎಸೆದ ಕಸವನ್ನು ರಸ್ತೆ ಬದಿಯಿಂದ ಸಂಗ್ರಹಿಸಿ ವಸ್ತ್ರ ಮಳಿಗೆ ಒಳಗೆ ಸುರಿದಿದ್ದಾರೆ.

ಸ್ವಚ್ಛ ಗೊಳಿಸಿದ ಸ್ಥಳದಲ್ಲೇ ಕಸ ಸುರಿದ‌ ಶಾಪ್ ನ ಸಿಬ್ಬಂದಿ ಸೌರಜ್ ಅವರ ಕಾರ್ಯದಿಂದ ಒಂದು ಕ್ಷಣ ವಿಚಲಿತರಾದ್ರೂ ಸೌರಜ್ ನ ಕೋಪದ ಮುಂದೆ ತಣ್ಣಗಾದರು. ಈ ಎಲ್ಲಾ ಪ್ರಸಂಗವನ್ನು ಸೌರಜ್ ಫೇಸ್ ಬುಕ್ ಲೈವ್ ಮೂಲಕ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ನಗರದ ಮೋರ್ಗನ್ಸ್ ಗೇಟ್ ಬಳಿಯೂ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಅಕ್ಕಪಕ್ಕದ ಮನೆಯವರು ಕಸ ಸುರಿದಿದ್ದು, ಸೌರಜ್ ಅದೇ ಕಸವನ್ನು ಸಂಗ್ರಹಿಸಿ ಮನೆಯೊಳಗೆ ಹೋಗಿ ಸುರಿದಿದ್ದರು.

ಆ ನಂತರವಾಗಿ ಮನೆಯವರು ಎಚ್ಚೆತ್ತು ಕಸವನ್ನು ತೊಟ್ಟಿಯಲ್ಲಿ ಹಾಕಲು ಆರಂಭಿಸಿದ್ದಾರೆ. ಮಾತಿಗೆ ಬಗ್ಗದ ಜನರ ವಿರುದ್ಧ ಇನ್ನು ಮುಂದೆ ಇದೇ ರೀತಿಯ ಅಭಿಯಾನ ಮಾಡಲು ಸ್ವಚ್ಛತಾ ಸ್ವಯಂ ಸೇವಕರು ನಿರ್ಧರಿಸಿದ್ದು, ಎಲ್ಲೆಂದರಲ್ಲಿ ಕಸ ಎಸೆದವರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English