ಮಂಗಳೂರು: ದೀಪಕ್ ರಾವ್ ಕೊಲೆಯ ವಿರುದ್ದ ಬಂದ್, ರಸ್ತೆ ತಡೆ ಅಂತ ಬೀದಿಗಿಳಿದಿರುವ ಬಿಜೆಪಿ ಮುಖಂಡರು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿರುವ ಅಬ್ದುಲ್ ಬಷೀರ್ ಬಗ್ಗೆ ಯಾಕೆ ಮಾತಾಡುವುದಿಲ್ಲ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ದೀಪಕ್ ಹತ್ಯೆಗೆ ಪ್ರತೀಕಾರ ಎಂದು ರಸ್ತೆಯಲ್ಲಿ ಹೋಗುವ ಅಮಾಯಕ ಮುಸಲ್ಮಾನನ್ನು ಕಡಿದು ಕೊಲೆ ಮಾಡುವುದು ಬಿಜೆಪಿಗೆ ಸಮ್ಮತವೇ?” ಎಂದು ಪ್ತಶ್ನಿಸಿದ್ದಾರೆ.
“ಬಿಜೆಪಿ ಮುಖಂಡರಾದ ಸಿ.ಟಿ. ರವಿ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಅಮಾಯಕ ಅಬ್ದುಲ್ ಬಷೀರ್ ಅವರ ಮೇಲೆ ನಡೆದ ಮಾರಕ ದಾಳಿಯ ಬಗ್ಗೆ ಏಕೆ ಮಾತನಾಡುವುದಿಲ್ಲ? ಏಕೆ ಖಂಡಿಸುವುದಿಲ್ಲ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮುಖಂಡರುಗಳು ಜನಪ್ರತಿನಿಧಿಗಳೇ ಅಂತಾದರೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿದ ಅವರು, “ಮುಸ್ಲಿಮರ ಕೊಲೆ, ಸಾವು ಇವರಿಗೆ ತಟ್ಟುವುದಿಲ್ಲ ಅಂತಾದರೆ ಬಿಜೆಪಿಯಲ್ಲಿ ಅಲ್ಪ ಸಂಖ್ಯಾತರ ಘಟಕ ಯಾಕಿದೆ?,” ಎಂದು ಅಸಮಾಧಾನ ವ್ಯಕ್ತಪಡಿಸಿದರು .
“ಕಾಟಿಪಳ್ಳದ ದೀಪಕ್ ರಾವ್ ನನ್ನ ತಮ್ಮ. ಬಶೀರ್ ನನ್ನ ಅಣ್ಣ. ಇಬ್ಬರ ಮನೆಯಲ್ಲೂ ಕಣ್ಣೀರು ಸುರಿಸುತ್ತಿರುವ ಹೆಣ್ಣು ಮಕ್ಕಳು ನನ್ನ ಅಮ್ಮಂದಿರು.
ಅವರೆಲ್ಲರ ಜೊತೆ ಡಿವೈಎಫ್ಐ ನಿಲ್ಲುತ್ತದೆ. ಶವ ರಾಜಕಾರಣ, ಸತ್ತ ಅಮಾಯಕರ ಕುಟುಂಬದ ಕಣ್ಣೀರಿನ ಮೇಲೆ ರಾಜಕಾರಣ ಮಾಡುವ ಬಿಜೆಪಿಯ ಮುಖಂಡರಿಗೆ ಇದು ಸಾಧ್ಯವೇ? ಜನ ಖಂಡಿತಾ ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ. ಮುಂಬರುವ ದಿನಗಳಲ್ಲಿ ಸೂಕ್ತ ಉತ್ತರ ನೀಡುತ್ತಾರೆ,” ಎಂದು ಅವರು ಹೇಳಿದರು.
Click this button or press Ctrl+G to toggle between Kannada and English