ಬೈಂದೂರು: ಬಿಜೆಪಿಯವರು ಕೆಲಸ ಮಾಡೋದು ಕಡಿಮೆ, ಪ್ರಚಾರ ಮಾಡೋದು ಜಾಸ್ತಿ. ನಾವು(ಕಾಂಗ್ರೆಸ್) ಮಾಡಿರುವ ಅಭಿವೃದ್ಧಿ ಕೆಲಸವನ್ನು ತಾವು(ಬಿಜೆಪಿ) ಮಾಡಿದ್ದು ಎಂದು ಹೇಳಿಕೊಳ್ಳೋದು ಬಿಜೆಪಿಯವರ ಚಾಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಸೋಮವಾರ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಯ ಒಟ್ಟು 490.97 ಕೋಟಿ ಮೊತ್ತದ ಕಾಮಗಾರಿಗೆ ಶಿಲಾನ್ಯಾಸ ಹಾಗೂ ರಾಜ್ಯ ಸರಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾವು ಮಾಡಿರುವ ಕೆಲಸವನ್ನು ಅವರು ಮಾಡಿರುವುದಾಗಿ ಹೇಳಿಕೊಳ್ಳುತ್ತಾರೆಂದು ಶಾಸಕ ಗೋಪಾಲ ಪೂಜಾರಿ ಅವರು ನೊಂದುಕೊಳ್ಳಬೇಕಾಗಿಲ್ಲ. ಯಾಕೆಂದರೆ ಯಾರು ಅನುದಾನ ತಂದಿದ್ದು, ಯಾರು ಮಂಜೂರಾತಿ ಮಾಡಿದ್ದು ಎಂಬುದು ಇಲ್ಲಿರುವ ಜನರಿಗೆ, ಕ್ಷೇತ್ರದ ಮತದಾರರಿಗೆ ಗೊತ್ತಿದೆ ಅಷ್ಟು ಸಾಕು ಎಂದು ಹೇಳಿದರು.
ದೇಶದಲ್ಲಿ ಬಂಡವಾಳಶಾಹಿಗಳಿಗೆ ಅಚ್ಚೇ ದಿನ್ ಬಂದಿದೆ ಹೊರತು, ಬಡವರಿಗೆ, ರೈತರಿಗೆ, ಮಹಿಳೆಯರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಬಂದಿಲ್ಲ ಎಂದು ಪುನರುಚ್ಚರಿಸುವ ಮೂಲಕ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ತನಗೆ ಈ ಬಾರಿ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಶಾಸಕ ಗೋಪಾಲ ಪೂಜಾರಿ ಅವರು ಮುನಿಸಿಕೊಂಡಿದ್ದರು, ಅದಕ್ಕೆ ನಾನು ಸಮಾಧಾನ ಮಾಡಿ, ನಿಮಗೆ ಮುಂದೆ ಅವಕಾಶ ಸಿಗುತ್ತೆ ಅಂತ ಹೇಳಿ ಕೆಎಸ್ ಆರ್ ಟಿಸಿ ನಿಗಮ ಅಧ್ಯಕ್ಷ ಸ್ಥಾನ ನೀಡಿದ್ದೆ, ಈಗ ಎಲ್ಲಾ ಕಡೆ ಬಸ್ ಓಡಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ನಗೆ ಚಟಾಕಿ ಹಾರಿಸಿದರು.
ಗೋಪಾಲ ಪೂಜಾರಿ ಅವರು ಅತ್ಯಂತ ಕ್ರಿಯಾಶೀಲ, ಜನಪರ ಶಾಸಕ…ಸದಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಿರುವ ಶಾಸಕ..ಅನಗತ್ಯವಾಗಿ ಯಾವತ್ತೂ ನನ್ನ ಭೇಟಿ ಮಾಡಲು ಬಂದಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ಸೇರಿರೋದು ಪೂಜಾರಿಯವರ ಜನಪ್ರಿಯತೆಗೆ ಸಾಕ್ಷಿ ಎಂದು ಹೊಗಳಿದರು. ಅಲ್ಲದೇ ಶಾಸಕ ಪೂಜಾರಿಯವರಿಗೆ ಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ, ಅವರು ಈ ಬಾರಿ ಮಂತ್ರಿ ಆಗ್ತಾರೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಆಹಾರ ಖಾತೆ ಸಚಿವ ಯುಟಿ ಖಾದರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಎಂಎಲ್ ಸಿ ಪ್ರತಾಪ್ ಚಂದ್ರ ಶೆಟ್ಟಿ, ರಾಜೇಂದ್ರ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ಧನ್ ತೋನ್ಸೆ, ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ, ಮದನ್ ಕುಮಾರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English