ಮಂಗಳೂರು: ದೀಪಕ್ ರಾವ್ ಹತ್ಯೆಗೆ ಸ್ಥಳೀಯ ಕಾರ್ಪೋರೇಟರ್ ಸುಪಾರಿ ನೀಡಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿವರ ಆರೋಪವನ್ನು ಕಾರ್ಪೋರೇಟರ್ ತಿಲಕ್ ರಾಜ್ ತಳ್ಳಿಹಾಕಿದ್ದಾರೆ.
ಬಿಜೆಪಿ ಮಂಗಳೂರು ಉತ್ತರ ಬ್ಲಾಕ್ ಅಧ್ಯಕ್ಷ ಭರತ್ ಶೆಟ್ಟಿ ಹಾಗೂ ತಿಲಕ್ ರಾಜ್ ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಮೊಯ್ದಿನ್ ಬಾವ ಅವರು ತಮ್ಮ ಸೋದರ ಫಾರೂಕ್ ಮುಖಾಂತರ ಕುಮಾರಸ್ವಾಮಿಯವರು ಇಂಥದ್ದೊಂದು ಆರೋಪ ಮಾಡಿದ್ದಾರೆ. ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ನನಗೆ ಪೊಲೀಸರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅವರು ಕೂಲಂಕಷವಾಗಿ ತನಿಖೆ ನಡೆಸುತ್ತಾರೆ ಎಂದರು.
ತನಿಖೆಯ ದಾರಿ ತಪ್ಪಿಸುವುದಕ್ಕಾಗಿ ಮೊಯ್ದಿನ್ ಬಾವ ಈ ರೀತಿಯ ಷಡ್ಯಂತ್ರ ಮಾಡುತ್ತಿದ್ದಾರೆ. ದೀಪಕ್ ರಾವ್ ಹತ್ಯೆಯಾದ ಮರುದಿನ ಬೆಳಗ್ಗೆ ಇದೇ ಶಾಸಕರು ನನಗೆ ಕರೆ ಮಾಡಿ, ರಾಜಕೀಯ ಮರೆತು ಎಲ್ಲಾ ಪಕ್ಷದವರು ಸೇರಿ ಶಾಂತಿ ಸಭೆ ಮಾಡೋಣ ಅಂತ ಹೇಳಿದ್ದಾರೆ. ನಾನೇ ಈ ಕೊಲೆಗೆ ಸುಪಾರಿ ನೀಡಿದ್ದೇನೆ ಅಂತಾದರೆ ಅವರು ಯಾಕೆ ನನಗೆ ಕರೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ನಾನು 50 ಲಕ್ಷ ರೂ. ಸುಪಾರಿ ಕೊಟ್ಟಿದ್ದೇನೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಆದರೆ, ಅಷ್ಟು ದೊಡ್ಡ ಮೊತ್ತ ನೀಡುವಷ್ಟು ನನಗೆ ಸಾಮರ್ಥ್ಯವಿದೆಯೇ ಎಂದು ಮೊದಲು ತಿಳಿದುಕೊಳ್ಳಬೇಕಿತ್ತು. ರಾಜಕೀಯ ಮಾಡುವುದಕ್ಕಾಗಿ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ. ಈ ಎಲ್ಲದರ ಬಗ್ಗೆಯೂ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಕುಮಾರಸ್ವಾಮಿ ದೈವಭಕ್ತ. ಇಷ್ಟೆಲ್ಲಾ ಆರೋಪ ಮಾಡುವವರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. ನಾನು ದೇವರ ಕೆಲಸ ಮಾಡಿದವನು. ಯಾರೇ ಕೈಬಿಟ್ಟರು ದೇವರು ಕೈಬಿಡಲ್ಲ. ಎಲ್ಲಾ ಸತ್ಯಗಳು ತನಿಖೆಯಲ್ಲಿ ಹೊರಬರುತ್ತದೆ ಎನ್ನುವ ನಂಬಿಕೆ ನನಗಿದೆ ಎಂದು ತಿಲಕ್ ರಾಜ್ ಗದ್ಗದಿತರಾದರು.
ದೀಪಕ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಬಂಧಿತರಾದ ಅರೋಪಿಗಳು ಯಾರೆಂದೇ ನನಗೆ ಗೊತ್ತಿಲ್ಲ. ಅವರ ಬಗ್ಗೆ ನನಗೆ ಲಿಂಕ್ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನನ್ನ ಮೇಲೆ ನೇರವಾಗಿ ಟಾರ್ಗೆಟ್ ಮಾಡಿದ್ದು ನಿಜಕ್ಕೂ ನನಗೆ ಆಘಾತವಾಗಿದೆ. ಈ ಬಗ್ಗೆ ನಾನು ಪಕ್ಷದ ವರಿಷ್ಠರ ಜೊತೆಗೆ ಮಾತುಕತೆ ನಡೆಸಿ ಮುಂದೇನು ಕಾನೂನು ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸುತ್ತೇನೆ ಎಂದಿದ್ದಾರೆ.
Click this button or press Ctrl+G to toggle between Kannada and English