ಮಂಗಳೂರು: ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಗಳ ಗುಂಪಿನ ನಡುವೆ ಸೋಮವಾರ ಸಂಜೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಓರ್ವ ಕಾರಾಗೃಹ ಸಿಬ್ಬಂದಿ ಸೇರಿದಂತೆ 5 ಮಂದಿ ಪೊಲೀಸರು ಹಾಗೂ 10 ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿಗೆ ಗಾಯಗಳಾಗಿವೆ.
ಜೈಲಿನ ಎ ಮತ್ತು ಬಿ ಬ್ಯಾರೆಕ್ ನ ಕೈದಿಗಳನ್ನು ಇಂದು ವಿಸಿಟಿಂಗ್ ಹಾಗೂ ಟೀ ಬ್ರೇಕ್ ಗೆ ಬಿಡಲಾಗಿತ್ತು . ಈ ಸಂದರ್ಭದಲ್ಲಿ ಕಲ್ಲಡ್ಕದ ಚೂರಿ ಇರಿತ ಪ್ರಕರಣದ ಆರೋಪಿ ಮಿಥುನ್ ಹಾಗೂ ಶರತ್ ಮಡಿವಾಳ ಪ್ರಕರಣದ ಆರೋಪಿ ಸಾದಿಕ್ ನಡುವೆ ಘರ್ಷಣೆ ನಡೆದಿದೆ. ನಂತರ ಈ ಘರ್ಷಣೆ ಕೈದಿಗಳ ಎರಡು ಗುಂಪುಗಳ ನಡುವೆ ಮಾರಾಮಾರಿಗೆ ಕಾರಣವಾಗಿದೆ.
ಬಳಿಕ ಎ ಬ್ಯಾರೆಕ್ ನಲ್ಲಿದ್ದ ಕೈದಿಗಳು ಬಿ ಬ್ಯಾರೆಕ್ ಗೆ ನುಗ್ಗಿ ದಾಂಧಲೆ ನಡೆಸಲು ಯತ್ನಿಸಿದ್ದಾರೆ. ಎ ಬ್ಯಾರೆಕ್ ನ ವಿಚಾರಣಾಧೀನ ಕೈದಿಗಳು ಬಿ ಬ್ಯಾರೆಕ್ ನ ಕಬ್ಬಿಣದ ಬಾಗಿಲನ್ನು ಮುರಿದು ಒಳ ನುಗ್ಗಿದ್ದಾರೆ. ಈ ಹಿನ್ನೆಲೆಯಲ್ಲಿ ಎ ಹಾಗು ಬಿ ಬ್ಯಾರೆಕ್ ನ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ.
ಕಲ್ಲು, ರಾಡ್, ಕೊಡಪಾನ, ಚೊಂಬು, ಟ್ಯೂಬ್ ಲೈಟ್, ಕಿಟಕಿಯ ಅಲ್ಯೂಮಿನಿಯಂ ಫ್ರೇಮ್ ನಿಂದ ಕೈದಿಗಳು ಪರಸ್ಪರ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಾರಾಗೃಹಕ್ಕೆ ದೌಡಾಯಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ದಾಂಧಲೆ ನಡೆಸುತ್ತಿದ್ದ ಕೈದಿಗಳನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದ್ದಾರೆ.
ಈ ಸಂದರ್ಭ ಪೊಲೀಸರ ಮೇಲೆ ಕೈದಿಗಳು ತಿರುಗಿ ಬಿದ್ದಿದ್ದಾರೆ. ಪೊಲೀಸರು ಹಾಗೂ ಕಾರಾಗೃಹ ಸಿಬ್ಬಂದಿಗಳ ಮೇಲೂ ಕೈದಿಗಳು ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಗಳನ್ನು ಕಾರಾಗೃಹಕ್ಕೆ ಕರೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ.
ಘಟನೆಯಲ್ಲಿ 5 ಪೊಲೀಸರು ಹಾಗೂ 10ಕ್ಕೂ ಹೆಚ್ಚು ಕೈದಿಗಳಿಗೆ ಗಾಯಗಳಾಗಿವೆ. ಗಾಯಗೊಂಡ ಪೊಲೀಸರು ಹಾಗೂ ಕೈದಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Click this button or press Ctrl+G to toggle between Kannada and English