ಮಂಗಳೂರು: ಕಾಟಿಪಳ್ಳದ ದೀಪಕ್ ರಾವ್ ಕೊಲೆ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಈಗ ದೊಡ್ಡ ವಿವಾದವಾಗಿ ಬೆಳೆದಿದೆ.
ಮೈಸೂರಲ್ಲಿ ಸೋಮವಾರ ಬೆಳಗ್ಗೆ ಮಾತನಾಡಿದ ಕುಮಾರಸ್ವಾಮಿ, ದೀಪಕ್ ಕೊಲೆ ಕೇಸಲ್ಲಿ ಬಿಜೆಪಿ ಕಾರ್ಪೊರೇಟರ್ ಒಬ್ಬರ ಕೈವಾಡವಿದೆ ಎಂದು ಹೇಳಿದ್ದು ವರದಿಯಾಗಿತ್ತು. ಬಳಿಕ ಈ ಬಗ್ಗೆ ಕುಮಾರಸ್ವಾಮಿ ಯೂಟರ್ನ್ ಹೊಡೆದು ತನಗೆ ಬಂದಿರುವ ಮಾಹಿತಿ ತಪ್ಪಿರಬಹುದು ಎಂದು ಹೇಳಿದ್ದಾರೆ ಎಂದು ಸುದ್ದಿಯಾಯಿತು.
ಕುಮಾರಸ್ವಾಮಿ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಕೊಲೆ ಪ್ರಕರಣದ ಕುರಿತು ದಾಖಲೆಗಳಿದ್ದರೆ ಕುಮಾರಸ್ವಾಮಿ ನೀಡಿ ಸಹಕರಿಸಿ ಎಂದು ಹೇಳಿದರು. ಮಂಗಳೂರಲ್ಲಿ ಮಾತನಾಡಿದ ಬಿಜೆಪಿ ಮುಖಂಡರು ಕುಮಾರಸ್ವಾಮಿ ಹಾಗು ಶಾಸಕ ಮೊಯ್ದಿನ್ ಬಾವಾ ಅವರನ್ನೇ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು. ಜೊತೆಗೆ ಜೆಡಿಎಸ್ ನಲ್ಲಿರುವ ಮೊಯ್ದಿನ್ ಬಾವಾ ಅವರ ಸೋದರ ಬಿ ಎಂ ಫಾರೂಕ್ ಅವರ ಕುಮ್ಮಕ್ಕಿನಿಂದ ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
“ನನಗೆ ಬಂದಂತಹ ನಿಖರವಾದ ಮಾಹಿತಿ ಇಟ್ಟುಕೊಂಡು ನಾನು ಹೇಳಿದ್ದೇನೆ. ಬಿಜೆಪಿ ಕಾರ್ಪೊರೇಟರ್ ಒಬ್ಬರ ಪಾತ್ರ ಈ ಕೊಲೆಯಲ್ಲಿ ಇದೆ ಎಂಬ ಗುಮಾನಿ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಹರಿದಾಡುತ್ತಿರುವುದನ್ನು ಹೇಳಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಹೇಳಿಕೆಯಿಂದ ಹಿಂದೆ ಸರಿಯುವ , ಯೂಟರ್ನ್ ಮಾಡುವ ಪ್ರಶ್ನೆಯೇ ಇಲ್ಲ.
ಅದ್ಯಾರೋ ಟಿವಿಯವರು ಏನೋ ಕೇಳಿ ಅದನ್ನು ಏನೋ ಮಾಡಿ ಹಾಕಿದ್ದಾರೆ. ಟಿವಿ9 ನವರಿಗೆ ನನ್ನ ಜೊತೆ ಪರ್ಸನಲ್ ಸಮಸ್ಯೆ ಇದೆ . ನನ್ನನ್ನು ಮುಗಿಸೋಕೆ ಹೊರಟಿದ್ದಾರೆ. ಹಾಗಾಗಿ ಅವರು ಹೀಗೆ ಯೂಟರ್ನ್ ಅಂತ ಸುದ್ದಿ ಮಾಡಿದ್ದಾರೆ. ನನ್ನ ಹೇಳಿಕೆಗೆ ಈಗಲೂ ಬದ್ಧ ”
“ಕೊಲೆ ಆರೋಪಿಗಳನ್ನು ಬಂಧಿಸಿ ಇಂದಿಗೆ ಐದು ದಿನ ಆಗಿವೆ. ಸರ್ಕಾರಕ್ಕೆ ಇನ್ನೂ ಅವರ ಬಾಯಿ ಬಿಡಿಸಲು ಯಾಕೆ ಸಾಧ್ಯ ಆಗಿಲ್ಲ. ಯಾಕೆ ಇನ್ನೂ ಈ ಬಗ್ಗೆ ಸತ್ಯಾಂಶ ಹೊರಗೆ ಬರುತ್ತಿಲ್ಲ. ಅಂತಹ ಸೀಕ್ರೆಟ್ ಮಾಡೋದು ಏನಿದೆ ಅದರಲ್ಲಿ ? ”
“ಸರ್ಕಾರಕ್ಕೆ ನಾನು ಯಾಕೆ ದಾಖಲೆ ಕೊಡಬೇಕು ? ನಾನು ದಾಖಲೆ ಕೊಡೋದಾದರೆ ಸಿದ್ದರಾಮಯ್ಯ ಯಾಕೆ ಸಿಎಂ ಕುರ್ಚಿಯಲ್ಲಿ ಕೂತಿದ್ದಾರೆ ? ಆರೋಪಿಗಳನ್ನು ಬಂಧಿಸಿ ಅವರದೇ ಅಧೀನದ ಪೊಲೀಸರ ಕೈಯಲ್ಲಿದ್ದಾರೆ. ಅವರ ಬಾಯಿ ಬಿಡಿಸಲು ಇವರಿಂದ ಆಗೋದಿಲ್ಲ ಎಂದಾದರೆ ಇವರು ಯಾಕೆ ಅಧಿಕಾರದಲ್ಲಿದ್ದಾರೆ ? ಅವರ ಇಂಟೆಲಿಜೆನ್ಸ್ ಇಲಾಖೆ ಏನು ಮಾಡುತ್ತಿದೆ ?”
“ಬಷೀರ್ ಕೊಲೆ ಕೇಸಲ್ಲೂ ಸತ್ಯ ಹೊರಬರಬೇಕು. ಕೊಂದಿದ್ದು ಯಾಕೆ ? ಯಾರು ಕೊಲ್ಲಿಸಿದ್ದು ? ಎಂಬ ಸತ್ಯ ಹೊರಬರಬೇಕು. ”
“ನನ್ನನ್ನು ಯಾಕೆ ತನಿಖೆ ಮಾಡಬೇಕು. ಬಿಜೆಪಿ, ಕಾಂಗ್ರೆಸ್ ಸೇರಿ ಕರಾವಳಿಯನ್ನು ಹಾಳು ಮಾಡಿ ಹಾಕಿ ಈಗ ನನ್ನನ್ನು ಯಾಕೆ ತನಿಖೆ ಮಾಡುತ್ತಾರೆ? ”
“ಬಿ ಎಂ ಫಾರೂಕ್ ನನಗೆ ಯಾಕೆ ಹೇಳ್ತಾರೆ ? ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವನು ನಾನು. ನನಗೆ ನನ್ನದೇ ಆದ ಮಾಹಿತಿ ಮೂಲಗಳಿವೆ. ಚಿಕ್ಕಮಗಳೂರಲ್ಲಿ ಪೊಲೀಸ್ ಅಧಿಕಾರಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ನಡೆದಾಗಲೂ ಅದು ಮಟ್ಕಾ ದಂಧೆ ನಡೆಸುವವರ ಚಿತಾವಣೆಯಿಂದ ನಡೆದಿದೆ ಎಂದು ಹೇಳಿದ್ದೆ. ಆತನ ಮೇಲೆ ಯಾರಿಂದಲೋ ಕಂಪ್ಲೇಂಟ್ ಕೊಡಿಸಿ ಸಸ್ಪೆನ್ಡ್ ಮಾಡಿ ಕೊನೆಗೆ ಆತ್ಮಹತ್ಯೆ ಮಾಡ್ಕೊಂಡ. ಈಗಲೂ ಸತ್ಯಾಂಶ ಹೊರಗೆ ಬರಲಿ ಎಂದು ನಾನು ಹೇಳಿದ್ದೇನೆ. ಇದು ಸರ್ಕಾರದ ಜವಾಬ್ದಾರಿ. ”
“ದೀಪಕ್ ಯಾವುದೇ ರೀತಿಯ ಅಪರಾಧ ಪ್ರವೃತ್ತಿಯವನಲ್ಲ. ಪಾಪ ಕೆಲಸ ಮಾಡಿಕೊಂಡಿದ್ದವನು. ಅಂತಹ ಹುಡುಗನನ್ನು ಯಾಕೆ ಕೊಲೆ ಮಾಡಿಸಿದರು ಎಂಬುದು ಹೊರಗೆ ಬರಬೇಕು . ಕೊಲೆಗೆ ಪ್ರೇರೇಪಣೆ ಕೊಟ್ಟವರು ಯಾರು ? ಎಂಬುದು ಜನರಿಗೆ ಗೊತ್ತಾಗಬೇಕು. ಅಷ್ಟೇ.”
Click this button or press Ctrl+G to toggle between Kannada and English