ಮಂಗಳೂರು: ಇದೇ ಮೊದಲ ಬಾರಿಗೆ ಎಂಬಂತೆ ತೆಂಗಿನಕಾಯಿಯ ಧಾರಣೆ 40 ರೂ.ಗಳ ಗಡಿ ದಾಟಿದ್ದು, ಇಳುವರಿ ಕಡಿಮೆಯಿಂದ ಕಂಗೆಟ್ಟಿದ್ದ ಕೃಷಿಕರಿಗೆ ಧಾರಣೆ ಏರಿಕೆ ಒಂದಷ್ಟು ಸಂತಸ ನೀಡಿದೆ. ಆದರೆ ತೆಂಗು ಖರೀದಿಸುವ ಗ್ರಾಹಕರಿಗೆ ಧಾರಣೆ ಏರಿಕೆ ದೊಡ್ಡ ಹೊಡೆತ ನೀಡಿದೆ. ಇದರ ಜತೆಗೆ ಎಳನೀರಿನ ಧಾರಣೆಯೂ ಗಗನಕ್ಕೇರಿದೆ.
ಕೃಷಿಕರಿಂದ ತೆಂಗಿನಕಾಯಿ ಖರೀದಿ ಮಾಡುವ ವರ್ತಕರು ತೆಂಗಿಗಾಗಿ ಬೇಡಿಕೆ ಇಟ್ಟರೂ ಉತ್ಪನ್ನವೇ ಸಿಗುತ್ತಿಲ್ಲ ಎಂದು ಮಾತುಗಳು ಕೇಳಿ ಬರುತ್ತಿದೆ. ಇತ್ತ ಧಾರಣೆ ಏರಿಕೆಯಿಂದ ರೈತರು ಕೂಡ ತಮ್ಮ ಫಸಲನ್ನೂ ಕೂಡ ಮುಗಿಸಿದ್ದಾರೆ. ಕೆಲವೊಂದು ರೈತರು ರೋಗಬಾಧೆಯಿಂದ ಫಸಲು ಕೈಸೇರುತ್ತಿಲ್ಲ ಎಂಬ ಕಾರಣಕ್ಕೆ ಎಳನೀರನ್ನೇ ಕೊಯ್ದು ಮಾರಾಟ ಮಾಡಿದ್ದಾರೆ. ಈ ಕಾರಣ ಪ್ರಸ್ತುತ ಉತ್ಪನ್ನ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಕಳೆದ ವರ್ಷ ಗರಿಷ್ಠ ಅಂದರೆ 30 ರೂ.ಗಳಿಗೆ ತಲುಪಿದ್ದ ತೆಂಗಿನಕಾಯಿಯ ಧಾರಣೆ ಈಗ ಮಂಗಳೂರಿನಲ್ಲಿ 42ರಿಂದ 43 ರೂ.ಗಳಿಗೆ ತಲುಪಿದೆ. ಇದು ಕೃಷಿಕರಿಂದ ಖರೀದಿ ಮಾಡುವ ಧಾರಣೆ ಯಾಗಿದ್ದು, ಗ್ರಾಹಕರಿಗೆ 48 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಇದೇ ಧಾರಣೆ ಯಥಾಸ್ಥಿತಿಯಲ್ಲಿದೆ. ಮುಂದೆಯೂ ಇದೇ ಧಾರಣೆ ಮುಂದುವರಿಯುತ್ತದೆ ಎಂದು ಹೇಳು ವಂತಿಲ್ಲ. ಧಾರಣೆ ಏರಿಕೆ ಅಥವಾ ಇಳಿಕೆ ಯಾಗುವ ಸಾಧ್ಯತೆಯೂ ಇದೆ. ಈಗ ಶಬರಿಮಲೆ ಸೀಸನ್ ಆಗಿದ್ದು, ಇದು ಮುಗಿದ ತತ್‌ಕ್ಷಣ ಧಾರಣೆ ಇಳಿಕೆಯಾಗುವ ಸಾಧ್ಯತೆಯೂ ಇದೆ.
ತೆಂಗಿನ ಮರಕ್ಕೆ ರೋಗಬಾಧೆ ಕಾಡಿದ್ದು, ಈ ಹಿನ್ನೆಲೆಯಲ್ಲಿ ಬಹುತೇಕ ಇಳುವರಿ ಕಡಿಮೆಯಾಗಿದೆ. ಕೆಲವೊಂದು ಭಾಗಗಳಲ್ಲಿ ಕೋತಿ ಕಾಟವೂ ತೆಂಗಿನ ಉತ್ಪನ್ನ ಕಡಿಮೆಯಾಗಲು ಕಾರಣವಾಗಿದೆ. ಕೋತಿ ಕಾಟ ಇರುವಲ್ಲಿ ಕೃಷಿಕ ಕೂಡ ತನ್ನ ಉಪಯೋಗಕ್ಕೆ ಮಾರುಕಟ್ಟೆಯಿಂದಲೇ ಖರೀದಿಸಬೇಕಾದ ಸ್ಥಿತಿ ಇದೆ. ಸಾಮಾನ್ಯವಾಗಿ ವರ್ಷದಲ್ಲಿ 2 ಬಾರಿ ತೆಂಗಿನಕಾಯಿಯ ಕೊಯ್ಲು ನಡೆಸುತ್ತಿದ್ದು, ಹಿಂದೆ ಒಮ್ಮೆ ಕಾಯಿ ಕೀಳುವ ಸಂದರ್ಭ 1 ಮರದಲ್ಲಿ ಸುಮಾರು 100 ಕಾಯಿಗಳು ಸಿಗುತ್ತಿದ್ದವು. ಆದರೆ ಈಗ 50 ಕಾಯಿ ಸಿಗುವುದು ಕೂಡ ಕಷ್ಟವಾಗಿದೆ. ಜತೆಗೆ ತೆಂಗಿನಕಾಯಿಯ ಗಾತ್ರವೂ ಚಿಕ್ಕದಾಗಿದೆ ಎಂದು ಕೃಷಿಕರೊಬ್ಬರ ಅಭಿಪ್ರಾಯ.
ಕೃಷಿಕರು ತೆಂಗಿನ ಕೊಯ್ಲು ನಡೆಸಲು ವಿಳಂಬವಾದರೆ ತೆಂಗಿನಕಾಯಿಯ ನೀರು ಆವಿಯಾಗುತ್ತದೆ. ಈ ಸಂದರ್ಭ ಅದನ್ನು ಒಡೆದು ಒಣಗಿಸಿ ಕೊಬ್ಬರಿಯನ್ನು ಮಾರಾಟ ಮಾಡುತ್ತಾರೆ. ಒಂದು ವರ್ಷದ ಹಿಂದೆ ಸುಮಾರು 50 ರೂ.ಗಳಷ್ಟಿದ್ದ ಕೊಬ್ಬರಿಯು ಈಗ 130ರಿಂದ 145 ರೂ.ಗಳ ವರೆಗೆ ಖರೀದಿಯಾಗುತ್ತಿದೆ.
ಇಳುವರಿ ಕಡಿಮೆಯಾಗಿರುವುದೇ ತೆಂಗಿನಕಾಯಿ ಧಾರಣೆ ಏರಿಕೆಗೆ ಪ್ರಮುಖ ಕಾರಣ. ಈಗ ಅಡಿಕೆಗೆ ಧಾರಣೆ ಕಡಿಮೆ ಇದ್ದು, ತೆಂಗಿನ ಧಾರಣೆ ಏರಿಕೆಯಾಗಿರುವುದು ರೈತರಿಗೆ ಕೊಂಚ ಸಮಾಧಾನ ತಂದಿದೆ. ಆದರೆ ರೋಗ ಬಾಧೆಯಿಂದ ಇಳುವರಿ ಕಡಿಮೆಯಾಗುತ್ತಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.
ತೆಂಗಿನಕಾಯಿಗೆ ಮೊದಲ ಬಾರಿಗೆ ಈ ರೀತಿಯಲ್ಲಿ ಧಾರಣೆ ಏರಿದೆ. ಬೇಡಿಕೆ ಇದ್ದರೂ ತೆಂಗಿನಕಾಯಿ ಸಿಗುತ್ತಿಲ್ಲ. ತೆಂಗಿನಕಾಯಿಯ ಪೌಡರ್‌ಗೆ ಉತ್ತಮ ಬೇಡಿಕೆ ಇರುವುದರಿಂದ ಧಾರಣೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ 5 ದಿನಗಳು ಕಾಯಿಯೇ ಸಿಕ್ಕಿರಲಿಲ್ಲ. ಒಂದೂವರೆ ಟನ್ ಕೇಳಿದರೆ 900 ಕೆ.ಜಿ. ಮಾತ್ರ ಸಿಕ್ಕಿದೆ.
Click this button or press Ctrl+G to toggle between Kannada and English