ಮಂಗಳೂರು: ತಿಂಗಳುಗಟ್ಟಲೆ ರಸ್ತೆ ಅಗೆದು ಕಾಮಗಾರಿ ಯಾವಾಗ ಮುಗಿಯುತ್ತೆ ಎನ್ನುವ ಸ್ಪಷ್ಟ ಕಲ್ಪನೆ ಇಲ್ಲದೆ ನೂರಾರು ಜನ ನಿತ್ಯ ಪ್ರಯಾಣಿಸುವ ರಸ್ತೆಯನ್ನು ಬಂದ್ ಮಾಡಿರುವ ಮೇಯರ್ ಹಾಗೂ ಶಾಸಕರಿಗೆ ಜನರ ಸಮಸ್ಯೆ ಅರ‍್ಥವಾಗುವುದಿಲ್ಲವೇ ಎಂದು ಮಂಗಳೂರು ನಗರ ದಕ್ಷಿಣದ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ.
ಅವರು ಬೋಳೂರು ವಾರ‍್ಡ್ 27ರಲ್ಲಿ ಸ್ಥಳೀಯ ನಾಗರಿಕರು ಮತ್ತು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ರಸ್ತೆ ಕಾಮಗಾರಿಗಳನ್ನು ನಿರ‍್ದೀಷ್ಟ ಸಮಯದ ಒಳಗೆ ಮುಗಿಸುವ ಪರಿಜ್ಞಾನ ಜನಪ್ರತಿನಿಧಿಗಳಿಗೆ ಇರಬೇಕು. ಆದರೆ ಮಹಾನಗರ ಪಾಲಿಕೆ ಯಾವಾಗಲೋ ರಸ್ತೆ ಅಗಿಯುವುದು, ಹೊಂಡ ತೆಗೆಯುವುದು ಮತ್ತು ಮರೆತು ಬಿಡುವುದು ಮಾಡುವುದರಿಂದ ಮಂಗಳೂರಿನ ನಾಗರಿಕರು ಸಂಕಟ ಪಡುತ್ತಿದ್ದಾರೆ.
ಜನರಿಗೆ ಅಭಿವೃದ್ಧಿ ಮಾಡುತ್ತೇವೆ ಎಂದು ಸುಳ್ಳು ಹೇಳಿ ಗುತ್ತಿಗೆದಾರರ ಮತ್ತು ತಮ್ಮ ಬೇಳೆ ಬೇಯಿಸಿಕೊಳ್ಳುವ ಪಾಲಿಕೆಯ ಕಾಂಗ್ರೆಸ್ ಆಡಳಿತ ಸುಳ್ಳು ಹೇಳಿಯೇ ಅಧಿಕಾರಕ್ಕೆ ಬಂದಿರುವುದರಿಂದ ಅವರಿಂದ ಜನರಿಗೆ ಭ್ರಮನಿರಸನವಾಗಿದೆ ಎಂದರು. ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಿಸಲ್ಲ ಎಂದಿದ್ದರು, ಬಳಿಕ ಕುಡಿಯುವ ನೀರಿನ ಬಾವಿಗಳನ್ನು ಹಾಳು ಮಾಡಿದರು, ಈಗ ಜನರಿಗೆ ಧೂಳು, ಮಣ್ಣು ತಿನ್ನಿಸುತ್ತಿದ್ದಾರೆ. ಇಂತಹ ಆಡಳಿತವನ್ನು ದಿಕ್ಕರಿಸುವ ಸಮಯ ಬಂದಿದೆ ಎಂದು ಡಿ ವೇದವ್ಯಾಸ ಕಾಮತ್ ಹೇಳಿದರು.
ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂರಾರು ಸಂಖ್ಯೆಯಲ್ಲಿ ಸ್ಥಳೀಯರು, ಬಿಜೆಪಿ ಕಾರ‍್ಯಕರ‍್ತರು ಭಾಗವಹಿಸಿದ್ದರು.
Click this button or press Ctrl+G to toggle between Kannada and English