ಉಜಿರೆ: ಪರಮಪೂಜ್ಯ ಆಚಾರ್ಯ ಶ್ರೀ ವೈರಾಗ್ಯ ನಂದಿಜಿ ಮುನಿ ಮಹಾರಾಜರು ಹಾಗೂ ಮುನಿಸಂಘದವರು ಬುಧವಾರ ಸಂಜೆ ಧರ್ಮಸ್ಥಳಕ್ಕೆ ಮಂಗಲ ಪುರ ಪ್ರವೇಶ ಮಾಡಿದಾಗ ಪ್ರವೇಶ ದ್ವಾರದಿಂದ ಭಕ್ತಿ ಪೂರ್ವಕ ಸ್ವಾಗತ ಮಾಡಿ ಭವ್ಯ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಕರೆದುಕೊಂಡು ಹೋಗಲಾಯಿತು.
ಅಲ್ಲಿ ದೇವರ ದರ್ಶನದ ಬಳಿಕ ಮಂಗಲ ಪ್ರವಚನ ನೀಡಿದ ಪರಮಪೂಜ್ಯ ಆಚಾರ್ಯ ಶ್ರೀ ವೈರಾಗ್ಯ ನಂದಿಜಿ ಮುನಿ ಮಹಾರಾಜರು ಧರ್ಮಸ್ಥಳದಲ್ಲಿ ಸತ್ಯ, ಧರ್ಮ, ನ್ಯಾಯ, ನೀತಿ ನಿತ್ಯವೂ ಅನುಷ್ಠಾನದಲ್ಲಿದ್ದು ಧರ್ಮದ ಅಕ್ಷಯ ನಿಧಿಯಾಗಿದೆ. ಎಲ್ಲೆಲ್ಲೂ ಸೊಬಗಿದೆ, ಸೊಗಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿನ ಚತುರ್ವಿಧ ದಾನ ಪರಂಪರೆ, ಶಿಸ್ತು, ಸ್ವಚ್ಛತೆ ಮತ್ತು ಸೌಜನ್ಯಪೂರ್ಣ ಸೇವೆ ಅನುಕರಣೀಯವಾಗಿದೆ.
1982 ರಲ್ಲಿ ಹಾಗೂ 2006 ರಲ್ಲಿ ತಾವು ಧರ್ಮಸ್ಥಳಕ್ಕೆ ಬಂದಾಗ ವೀರೇಂದ್ರ ಹೆಗ್ಗಡೆಯವರ ತಾಯಿ ರತ್ನಮ್ಮನವರು ಭಕ್ತಿಯಿಂದ ನೀಡಿದ ಆಹಾರ ದಾನ ಹಾಗೂ ಸೇವೆಯನ್ನು ಮುನಿಗಳು ಸ್ಮರಿಸಿದರು.
ಧರ್ಮಸ್ಥಳಕ್ಕೆ ಬಂದವರೆಲ್ಲ ಶಾಂತಿ, ನೆಮ್ಮದಿಯನ್ನು ಪಡೆಯುತ್ತಾರೆ. ಯಾತ್ರಾರ್ಥಿಗಳು ಸದಾ ಒಳ್ಳೆಯ ಅಭಿಪ್ರಾಯ ಹಾಗೂ ಗೌರವ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು. ಸದಾ ಧರ್ಮ ಮಾರ್ಗದಲ್ಲಿ ನಡೆದು ಆತ್ಮಕಲ್ಯಾಣ ಮಾಡಿಕೊಳ್ಳಿ ಎಂದು ಮುನಿಗಳು ಎಲ್ಲರಿಗೂ ಆಶೀರ್ವದಿಸಿದರು.
ಹೆಗ್ಗಡೆಯವರ ವಿನಯ, ಹೃದಯ ಶ್ರೀಮಂತಿಕೆ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬುಧವಾರ ಸಂಜೆ ಅನಿವಾರ್ಯವಾಗಿ ಉಡುಪಿಗೆ ಹೋಗಬೇಕಾದುದರಿಂದ ಉಜಿರೆಯಲ್ಲಿ ದಾರಿ ಮಧ್ಯದಲ್ಲೇ ತಮ್ಮ ಕಾರು ನಿಲ್ಲಿಸಿ ಮುನಿಸಂಘದವರಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸಿ ಆಶೀರ್ವಾದ ಪಡೆದರು. ಧರ್ಮಸ್ಥಳದಲ್ಲಿ ತಮ್ಮ ಅನುಪಸ್ಥಿತಿ ಬಗ್ಗೆ ಹೆಗ್ಗಡೆಯವರು ಮುನಿಗಳಲ್ಲಿ ಕ್ಷಮೆ ಯಾಚಿಸಿದರು.
ಮುನಿಗಳು ವಿಶೇಷವಾಗಿ ತಮ್ಮ ಪ್ರವಚನದಲ್ಲಿ ಇದನ್ನು ಉಲ್ಲೇಖಿಸಿ ಹೆಗ್ಗಡೆಯವರ ವಿನಯ, ಸೌಜನ್ಯ ಹಾಗೂ ಹೃದಯ ಶ್ರೀಮಂತಿಕೆ ಬಗ್ಗೆ ಶ್ಲಾಘಿಸಿ ವಿಶೇಷ ಆಶೀರ್ವಾದ ನೀಡಿದರು.
ಮುನಿಸಂಘ: ಮುನಿಸಂಘದಲ್ಲಿ 5 ಮಂದಿ ಮುನಿಗಳು, 5 ಮಂದಿ ಆರ್ಯಿಕಾ ಮಾತಾಜಿಯಾವರು ಮತ್ತು 5 ಮಂದಿ ಕ್ಷುಲ್ಲಿಕಾ ಮಾತಾಜಿಯವರು ಇದ್ದಾರೆ.
Click this button or press Ctrl+G to toggle between Kannada and English