ಮಂಗಳೂರು: ಕೊಡಿಯಾಲ್ ಬೈಲ್‌ನಲ್ಲಿ 1992ರಲ್ಲಿ ಸ್ಥಾಪನೆಗೊಂಡ ತುಳುನಾಡು ಎಜುಕೇಶನಲ್ ಟ್ರಸ್ಟ್‌ನ ಆಶ್ರಯದಲ್ಲಿ ಆರಂಭವಾದ ವಿದ್ಯಾಸಂಸ್ಥೆ ಶಾರದಾ ವಿದ್ಯಾಲಯವು ಇಪ್ಪತ್ತೈದು ಸಂವತ್ಸರವನ್ನು ಪೂರೈಸಿ ರಜತಪರ್ವದ ಸಂಭ್ರಮದಲ್ಲಿದೆ.
‘ನಹಿ ಜ್ಞಾನೇನ ಸದೃಶಂ’ ಎಂಬು ದು ಇದರ ಧ್ಯೇಯ ವಾಕ್ಯ. ಜ್ಞಾನ ದಾಸೋಹದೊಂದಿಗೆ ಇಂದು ನಾಡಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿ ಬೆಳೆದಿದೆ. ಭಾರತೀಯ ಸಂಸ್ಕೃತಿ, ಜೀವನ ಮೌಲ್ಯಗಳ ಆಧಾರಿತ ಪರಿಕಲ್ಪನೆಗಳಿಂದ ಒಡಗೂಡಿ ಯೋಗ, ಸಂಗೀತ, ಕ್ರೀಡೆ, ಸಂಸ್ಕೃತ, ನೈತಿಕ ಶಿಕ್ಷಣ ಎಂಬ ಪಂಚಮುಖೀ ಶಿಕ್ಷಣ ಕ್ರಮಗಳನ್ನು ಅನುಸರಿಸಿ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಶ್ರಮಿಸುತ್ತಿದೆ.
ಆರಂಭದಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ವಿದ್ಯಾಲಯದಲ್ಲಿ ಇಂದು 2,250ಕ್ಕೂ ಹೆಚ್ಚು ಮಂದಿ ಕಲಿಯುತ್ತಿದ್ದಾರೆ. ಹದಿನೆಂಟು ವರ್ಷಗಳಿಂದ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಎಸೆಸೆಲ್ಸಿಯಲ್ಲಿ ಶೇ.100 ರಷ್ಟು ಫಲಿತಾಂಶವನ್ನು ದಾಖಲಿಸುತ್ತಿರುವ ಹೆಗ್ಗಳಿಕೆ ಇದರದ್ದು.
ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕ ಸೇವಾ ಚಟುವಟಿಕೆಗಳಲ್ಲಿ ನಿರತರಾದ ವಿದ್ಯಾ ಭಾರತಿಯ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡಿರುವ ಶಾರದಾ ವಿದ್ಯಾಸಂಸ್ಥೆಯು, ದೇಶಭಕ್ತಿ ಹಾಗೂ ಸಂಸ್ಕಾರದೊಂದಿಗೆ ಆಧುನಿಕ ಶಿಕ್ಷಣವನ್ನು ನೀಡುತ್ತಿದೆ. ಇಲ್ಲಿಯ ವಿದ್ಯಾರ್ಥಿಗಳು ಶೈಕ್ಷಣಿಕವಲ್ಲದೇ ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರದಲ್ಲೂ ಸಾಧನೆ ಮಾಡಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರಗಳನ್ನು ಗಳಿಸಿದ್ದಾರೆ. 2017ರ ಜು. 30ರಿಂದ ಆಗಸ್ಟ್ 8ರ ವರೆಗೆ ಇಂಗ್ಲೆಂಡ್‌ನ ಚರ್ನ್ವುಡ್ ಎಂಬಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ದೇಶದಿಂದ ಭಾಗ ವಹಿಸಿದ್ದ 82 ವಿದ್ಯಾರ್ಥಿಗಳ ಪೈಕಿ 24 ಮಂದಿ ಈ ವಿದ್ಯಾಸಂಸ್ಥೆಯವರು ಎಂಬುದು ಉಲ್ಲೇಖನೀಯ.
ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ನಡೆಸುವ ರಾಜ್ಯ, ರಾಷ್ಟ್ರಮಟ್ಟದ ವಿವಿಧ ಆಟೋಟ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯಲಾಗಿದೆ. ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸುವ ರಾಮಾಯಣ, ಮಹಾಭಾರತ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.’ಅನ್ನಮಯ, ಪ್ರಾಣ ಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಎಂಬ ಪಂಚಕೋಶ ಶಿಕ್ಷಣ ಪರಿಕಲ್ಪನೆ ಇಲ್ಲಿಯದು.
ಇಪ್ಪತ್ತೈದು ವರ್ಷಗಳಲ್ಲಿ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ಪ್ರಸ್ತುತ ವಿದ್ಯಾಲಯದಲ್ಲಿ ಸಿಬಿಎಸ್‌ಸಿ ಶಿಕ್ಷಣ ಕ್ರಮದಡಿ ಪೂರ್ವ ಪ್ರಾಥಮಿಕದಿಂದ ಎಸೆಸೆಲ್ಸಿ, ಶಾರದಾ ಪ.ಪೂ. ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ಶಿಕ್ಷಣ, ಶಾರದಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ., ಬಿಬಿಎಂ, ಬಿಬಿಎ ಮತ್ತು ಬಿಎಸ್ಸಿ(ಆ್ಯನಿಮೇಶನ್ ಆ್ಯಂಡ್ ವಿಶ್ಯುವಲ್) ಪದವಿ ಶಿಕ್ಷಣಕ್ಕೆ ಅವಕಾಶವಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಲು ಮೂಡುಶೆಡ್ಡೆ ಬಳಿ ಶಿವನಗರದಲ್ಲಿ ಶುಭೋದಯ ವಿದ್ಯಾಲಯದಲ್ಲಿ ಸಿಬಿಎಸ್‌ಸಿ ಪಠ್ಯಕ್ರಮ ಬೋಧಿಸಲಾಗುತ್ತಿದೆ.
ತಲಪಾಡಿಯ ದೇವಿನಗರದಲ್ಲಿ ಗ್ರಾಮೀಣ ಮತ್ತು ಉದ್ಯೋಗಿ ಪೋಷಕರಿಗೆ ಪೂರಕವಾಗಿ ಪಬ್ಲಿಕ್ ವಸತಿ ಶಾಲೆ ಮತ್ತು ಡೇ ಬೋರ್ಡಿಂಗ್ ಶಾಲೆಯಲ್ಲಿ ಎಸೆಸೆಲ್ಸಿವರೆಗೆ ಮತ್ತು ಪ.ಪೂ. ಶಿಕ್ಷಣ ಕಲ್ಪಿಸಲಾಗಿದೆ. ಆರೋಗ್ಯ ಕ್ಷೇತ್ರಕ್ಕೂ ಕಾಲಿಟ್ಟಿರುವ ಸಂಸ್ಥೆಯು, ತಲಪಾಡಿಯಲ್ಲಿ ಶಾರದಾ ಆಯುರ್ವೇದಿಕ್ ಆಸ್ಪತ್ರೆ ಸ್ಥಾಪಿಸಿ ಜನರಿಗೆ ಸೇವೆ ಒದಗಿಸುತ್ತಿದೆ.
ಶಾರದಾ ವಿದ್ಯಾಲಯದ ರಜತ ಮಹೋತ್ಸವ ಸಂಭ್ರಮ ಜ. 20ರಂದು ಕೊಡಿಯಾಲ್ ಬೈಲಿನ ಶಾಲಾ ಕ್ಯಾಂಪಸ್‌ನಲ್ಲಿ ನಡೆಯಲಿದ್ದು ಸಂಜೆ 5 ಗಂಟೆಗೆ ರಾಜ್ಯಪಾಲ ವಜೂಭಾಯಿ ರುಡಾಬಾಯಿ ವಾಲಾ ಉದ್ಘಾಟಿಸಲಿದ್ದಾರೆ. ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡುವರು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English