ಬೆಂಗಳೂರು: ಎಂಎಸ್‍ಐಎಲ್ ವತಿಯಿಂದ ದೇಶದಲ್ಲಿಯೇ ಪ್ರಥಮ ಬಾರಿಗೆ ‘ಬ್ರಾಂಡೆಡ್ ನೈಸರ್ಗಿಕ ನದಿ ಮರಳನ್ನು’ ಚೀಲಗಳಲ್ಲಿ ಇಂದಿನಿಂದ ಮಾರಾಟ ಮಾಡಲಾಗುತ್ತಿದೆ.
ಸುದ್ದಿಗೊಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಸಿ.ಪ್ರಕಾಶ್, ಬಿಡದಿಯಲ್ಲಿ ಯಾರ್ಡ್ ಮಾಡಲಾಗಿದ್ದು, ಅಲ್ಲಿ ಮರಳು ಮಾರಾಟಕ್ಕೆ ಲಭ್ಯವಿದೆ. ತದನಂತರ ಬೆಂಗಳೂರಿನ ಚನ್ನಸಂದ್ರ, ದೊಡ್ಡಬಳ್ಳಾಪುರ, ತುಮಕೂರಿನ ಕ್ಯಾತ್ಸಂದ್ರ, ಮಂಡ್ಯ, ಮೈಸೂರು, ಹುಬ್ಬಳ್ಳಿ ಸೇರಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.
ಎಎಂಎಸ್ಐಎಲ್ ವತಿಯಿಂದ ನಿಗದಿತ ದರದಲ್ಲೇ ಮಾರಾಟ ಮಾಡಲಾಗುತ್ತದೆ. 50 ಕೆಜಿ ಚೀಲ ಹಾಗೂ ಟನ್ ಲೆಕ್ಕದಲ್ಲಿ ಮರಳನ್ನು ಖರೀದಿಸಬಹುದು. ಪ್ರತಿ ಟನ್‌ಗೆ ಜಿಎಸ್‌ಟಿ ತೆರಿಗೆ ಸೇರಿ 4 ಸಾವಿರ ರೂ. ದರ ನಿಗದಿಪಡಿಸಲಾಗಿದೆ. 50 ಕೆಜಿ ಚೀಲಕ್ಕೆ 200 ರಿಂದ 220 ರೂ. ದರ ಫಿಕ್ಸ್ ಮಾಡಲಾಗಿದೆ. ಇಷ್ಟೇ ತೆಗೆದುಕೊಳ್ಳಬೇಕೆಂಬ ನಿಯಮ ಇಲ್ಲ ಎಂದರು.
ಮಲೇಷ್ಯಾದಿಂದ ಹಡಗು ಮೂಲಕ ಆಂಧ್ರಪ್ರದೇಶದ ನಲ್ಲೂರು ಜಿಲ್ಲೆಯ ಕೃಷ್ಣಪಟ್ನಂ ಬಂದರ್‌ಗೆ ಮೊದಲ ಹಂತವಾಗಿ 54 ಸಾವಿರ ಟನ್ ಮರಳು ಪೂರೈಕೆಯಾಗಿದೆ ಎಂದು ಮಾಹಿತಿ ನೀಡಿದರು.
50 ಕೆಜಿ ಚೀಲಕ್ಕೆ 190 ರೂ. ದರ ನಿಗದಿಪಡಿಸಲಾಗಿದ್ದು, 20 ಚೀಲಕ್ಕೆ (1 ಟನ್) ಎಲ್ಲ ತೆರಿಗೆ ಸೇರಿ 4 ಸಾವಿರ ರೂ. ಇರಲಿದೆ. ಸದ್ಯ ರಾಜ್ಯದಲ್ಲಿ ಮರಳಿನ ಬೆಲೆ 10 ಟನ್ ಲಾರಿ ಲೋಡ್‌ಗೆ 50 ರಿಂದ 60 ಸಾವಿರ ರೂ ಇದೆ. ಮಲೇಷ್ಯಾ ಮರಳು ಖರೀದಿಯಿಂದ 10 ರಿಂದ 22 ಸಾವಿರ ರೂ. ವರೆಗೆ ಉಳಿತಾಯವಾಗಲಿದೆ ಎಂದರು.
ಖಾಸಗಿಯವರಿಗೂ ಅವಕಾಶ: ಖಾಸಗಿ ಕಂಪನಿಗಳು, ಮರಳು ವ್ಯಾಪಾರಸ್ಥರು ಸೇರಿ ಅಗತ್ಯವಿರುವವರು ವಿದೇಶಗಳಿಂದ ರಾಜ್ಯಕ್ಕೆ ಮರಳು ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ. ಇದಕ್ಕೆ ಪಾಲಿಸಬೇಕಾದ ನಿಯಮಗಳನ್ನು ರೂಪಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಲೈಸನ್ಸ್ ಪಡೆದು ಮಾರಾಟ ಮಾಡಬಹುದು ಎಂದು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ನದಿ ಮರಳಿನ ಕೊರತೆ ಉಂಟಾಗಿದ್ದು, ಇದರಿಂದ ದೇಶಾದ್ಯಂತ ಕಾರ್ಯನಿರತರಾಗಿರುವ ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿದ್ದು, ಅಲ್ಲದೆ ನೈಸರ್ಗಿಕ ಮರಳಿನ ತೀವ್ರಕೊರತೆ ಉಂಟಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಎಂಎಸ್‍ಐಎಲ್ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ನೈಸರ್ಗಿಕ ನದಿ ಮರಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಬಗ್ಗೆ ಪರಿಶೀಲಿಸಿದ್ದರು.
ಜೊತೆಗೆ ಉಪ ಖನಿಜ ನಿಯಮಾವಳಿಗೆ ತಿದ್ದುಪಡಿ ತಂದು ಜನರಿಗೆ ನೈಸರ್ಗಿಕ ಮರಳು ಒದಗಿಸಿ ಅನುಕೂಲ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಉಪ ಖನಿಜ ನಿಯಮಾವಳಿಗಳಿಗೆ ತಿದ್ದುಪಡಿಗಳನ್ನು ತಂದು ಮರಳನ್ನು ಆಮದು ಮಾಡಿಕೊಳ್ಳಲು ಹಾಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಈ ನಿಟ್ಟಿನಲ್ಲಿ ಎಂಎಸ್‍ಐಎಲ್ ಸಂಸ್ಥೆಯು ಕಾರ್ಯಪ್ರವೃತ್ತವಾಗಿ ‘ಎಂಎಸ್‍ಐಎಲ್ ಮರಳು’ ಎಂಬ ಬ್ರಾಂಡನ್ನು ನೋಂದಾಯಿಸಿ ದೇಶದಲ್ಲೇ ಪ್ರಥಮ ಬಾರಿಗೆ ನೈಸರ್ಗಿಕ ನದಿ ಮರಳನ್ನು ಚೀಲಗಳಲ್ಲಿ ಮಾರಾಟ ಮಾಡಲು ಮುಂದಾಗಿದೆ. ಕರ್ನಾಟಕ ಪಾರದರ್ಶಕ ನಿಯಮದ ಪ್ರಕಾರ ಗ್ಲೋಬಲ್ ಟೆಂಡರ್ ಕರೆದು ಸರಬರಾಜುದಾರರನ್ನು ಗುರುತಿಸಿ ಮರಳನ್ನು ಆಮದು ಮಾಡಿಕೊಳ್ಳಲು ಆರಂಭಿಸಲಾಗಿದೆ ಎಂದು ತಿಳಿಸಿದರು.
ಈ ಮರಳನ್ನು ಮಲೇಷಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಮೂರು ಹಂತಗಳಲ್ಲಿ ಗುಣಮಟ್ಟ ಪರೀಕ್ಷಿಸಲಾಗುತ್ತಿದೆ. ಮರಳನ್ನು ಹಡಗಿಗೆ ತುಂಬುವಾಗ, ಚೀಲಗಳಿಗೆ ತುಂಬುವ ಮುನ್ನ ಹಾಗೂ ಸರಬರಾಜು ಮಾಡುವಾಗ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅನುಮೋದಿಸಿದ ಲ್ಯಾಬೋರೇಟರಿಗಳಲ್ಲಿ ಮರಳಿನ ಗುಣಮಟ್ಟವನ್ನು ಪರಿಕ್ಷೀಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ವಾರ್ಷಿಕವಾಗಿ ಅಂದಾಜು 30 ದಶಲಕ್ಷ ಮೆಟ್ರಿಕ್ ಟನ್ ಮರಳಿನ ಅವಶ್ಯಕತೆ ಇದೆ. ಇದರಲ್ಲಿ 4 ದಶಲಕ್ಷ ಮೆಟ್ರಿಕ್ ಟನ್ ಮರಳನ್ನು ನದಿ ಪಾತ್ರಗಳಿಂದ ತೆಗೆದು ಬಳಸಲಾಗುತ್ತಿದೆ. 20 ದಶಲಕ್ಷ ಮೆಟ್ರಿಕ್ ಟನ್ ಮರಳನ್ನು ಎಂ ಸ್ಯಾಂಡ್ ಘಟಕಗಳಿಂದ ಉತ್ಪಾದಿಸಿ ಬಳಸಲಾಗುತ್ತಿದೆ. 6 ದಶಲಕ್ಷ ಮೆಟ್ರಿಕ್ ಟನ್ ಮರಳಿನ ಕೊರತೆ ಇದ್ದು, ಈ ಕೊರತೆ ನೀಗಿಸಲು ಎಂಎಸ್‍ಐಎಲ್ ಸಂಸ್ಥೆಯು ಮರಳನ್ನು ವಿದೇಶದಿಂದ ಆಮದು ಮಾಡಿಕೊಂಡು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಎಂಎಸ್‍ಐಎಲ್ ಸಂಸ್ಥೆಯು ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಈ ಸಂಸ್ಥೆ 1966 ರಿಂದ ಗ್ರಾಹಕರಿಗೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಒಂದು ಬೃಹತ್ ಮಾರ್ಕೆಟಿಂಗ್ ಸಂಸ್ಥೆಯಾಗಿ ಬೆಳೆದಿದೆ. ವಾರ್ಷಿಕ ವಹಿವಾಟು ಸುಮಾರು 1700 ಕೋಟಿ ರೂ.ಆಗಿದ್ದು, ಪ್ರಸಕ್ತ ವರ್ಷದಲ್ಲಿ 2000 ಕೋಟಿ ರೂ. ಗುರಿಯನ್ನು ಹೊಂದಲಾಗಿದೆ ಎಂದರು.
Click this button or press Ctrl+G to toggle between Kannada and English