ಮರಳು ಮಾಫಿಯಾ ವಿರುದ್ಧ ಕ್ರಮಕ್ಕೆ ವರ್ಗಾವಣೆ ಭಾಗ್ಯವೇ?.. ದ.ಕ ಜಿಲ್ಲೆಯ ಪ್ರಜ್ಞಾವಂತರ ಆಕ್ರೋಶ!

6:02 PM, Monday, January 22nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

sp-belthangadyಮಂಗಳೂರು: ಜನವರಿ 12ರಂದು ಗೃಹಸಚಿವ ರಾಮಲಿಂಗಾರೆಡ್ಡಿ ಮಂಗಳೂರಿಗೆ ಭೇಟಿ ನೀಡಿದ್ದಾಗ ಪತ್ರಕರ್ತರು, `ಎಸ್ಪಿ ಸುಧೀರ್ ಕುಮಾರ್ ರೆಡ್ಡಿಯವರ ವರ್ಗಾವಣೆ ಇದೆಯೇ’ ಎಂದು ಕೇಳಿದ್ದರು. ಇಂತಹ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದಿದ್ದರು ಸಚಿವರು. ಆದರೆ ಒಂದು ವಾರದಲ್ಲೇ ಎಸ್ಪಿ ವರ್ಗಾವಣೆಗೊಂಡಿದ್ದಾರೆ.

ಈ ವರ್ಗಾವಣೆ ಹಿಂದೆ ಮರಳು ಮಾಫಿಯಾ ಕೈವಾಡವಿದೆ ಎಂಬ ಮಾತುಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಭೂಷಣ್ ಗುಲಾಬ್ ರಾವ್ ಬೊರಸೆ ಬಳಿಕ ಜಿಲ್ಲಾ ಎಸ್ಪಿಯಾಗಿ ಬಂದವರು ಸುಧೀರ್ ರೆಡ್ಡಿ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಅಹಿತಕರ ಘಟನೆಗಳು ನಡೆದಿದ್ದವು. ನಿಷೇಧಾಜ್ಞೆಯ ಕರಿ ನೆರಳಿನಲ್ಲೇ ಜನಸಾಮಾನ್ಯರು ಓಡಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಎಸ್ಪಿ ಸುಧೀರ್ ರೆಡ್ಡಿ ಜಿಲ್ಲೆಗೆ ವರ್ಗಾವಣೆಗೊಂಡು ಆಗಮಿಸಿದ್ದರು.

ಆಗ ಕಲಾಯಿ ಅಶ್ರಫ್ ಕೊಲೆ ಪ್ರಕರಣ ತನಿಖೆಯಲ್ಲಿರುವಾಗಲೇ ಶರತ್ ಮಡಿವಾಳ ಹತ್ಯೆಯೂ ನಡೆಯಿತು. ಇನ್ನು ಶರತ್ ಮಡಿವಾಳ ಶವ ಯಾತ್ರೆಯ ಸಂದರ್ಭ ಕಲ್ಲುತೂರಾಟ ನಡೆಸಲಾಯಿತು. ಆಗ ಪೊಲೀಸರ ನಿದ್ದೆಗೆಡಿಸುವ ಈ ಎಲ್ಲಾ ಪ್ರಕರಣಗಳನ್ನು ಹತೋಟಿಗೆ ತಂದವರು ಎಸ್ಪಿ ರೆಡ್ಡಿ. ಕೇವಲ ಆರೋಪಿಗಳು ಮಾತ್ರವಲ್ಲ, ಆರೋಪಿಗಳನ್ನು ಬೆಂಬಲಿಸಿದವರ ವಿರುದ್ಧವೂ ಕ್ರಮ ಕೈಗೊಂಡರು.

ವದಂತಿ ಹಬ್ಬಿಸುವವರ ಮೇಲೂ ಸುಧೀರ್ ರೆಡ್ಡಿಯವರ ತಂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ವಿಟ್ಲದಲ್ಲಿ ಪೊಲೀಸರು ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪತ್ರಕರ್ತರ ಮೇಲೂ ಪ್ರಕರಣ ದಾಖಲಿಸಿದ್ದರು. ಹೀಗೆ ಆರು ತಿಂಗಳಲ್ಲಿ ಅವರ ಕಾರ್ಯವೈಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂತಹ ಎಸ್ಪಿ ಇದ್ದರೆ ಸಾಕು, ಕಾನೂನು ಸುವ್ಯವಸ್ಥೆ ಕಾಪಾಡಲು ಕಷ್ಟವಿಲ್ಲ. ಪೊಲೀಸರಿಗೂ ಇವರು ಬಲ ತುಂಬುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದರು.

ಇನ್ನೊಂದೆಡೆ ಅಕ್ರಮ ಮರಳು ಸಾಗಾಟದ ವಿರುದ್ಧವೂ ಕಠಿಣ ಕ್ರಮ ಕೈಗೊಂಡ ಎಸ್ಪಿ, ಸಾಕಷ್ಟು ಸಂಖ್ಯೆಯ ವಾಹನ ಹಾಗೂ ಮರಳನ್ನು ವಶಪಡಿಸಿಕೊಂಡಿದ್ದರು. ಮರಳು ಧಕ್ಕೆಗಳನ್ನೂ ಮುಟ್ಟುಗೋಲು ಹಾಕಿದ್ದರು. ಇವರಿಗೆ ಬೆಂಬಲಿಸಿದ ಕೆಳವರ್ಗದ ಪೊಲೀಸ್ ಅಧಿಕಾರಿಗಳ ಮೇಲೂ ಕ್ರಮ ವಹಿಸಿದ್ದರು.

ಜೂನ್ 22ರಂದು ಮಂಡ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡ ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕಾರಕ್ಕೆ ತೆಗೆದುಕೊಂಡ ಅವಧಿ ಕೇವಲ ಒಂದು ನಿಮಿಷ. ಆಗಿನ ಎಸ್ಪಿ ಬೊರಸೆಯವರ ಕೊಠಡಿಗೆ ತೆರಳಿ ಸಾಂಕೇತಿಕ ಸಹಿ ಮಾಡಿ ಅಲ್ಲಿಂದ ನೇರವಾಗಿ ಕರ್ತವ್ಯಕ್ಕೆ ಇಳಿದಿದ್ದರು.

ಇಂತಹ ದಕ್ಷ ಅಧಿಕಾರಿಯ ವರ್ಗಾವಣೆಗೆ ಜಿಲ್ಲೆಯ ಪ್ರಜ್ಞಾವಂತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರ ಹಸ್ತಕ್ಷೇಪಕ್ಕೆ ಎಡೆಕೊಡದ ದಕ್ಷ ಅಧಿಕಾರಿಯ ವರ್ಗಾವಣೆಯ ಬಗ್ಗೆ ವಾಟ್ಸಪ್, ಫೇಸ್‌ಬುಕ್, ಟ್ವಿಟರ್‌‌ಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

`ವಿ ವಾಂಟ್ ಸುಧೀರ್ ಕುಮಾರ್ ರೆಡ್ಡಿ’ ಎಂಬ ಸ್ಲೋಗನ್‌‌ನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿಯವರಿಗೆ ಕಳುಹಿಸಿದ್ದಾರೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಆಗ್ರಹಿಸಿರುವ `ಜೈ ತುಳುನಾಡು’ ಶನಿವಾರದಿಂದಲೇ ಎಸ್‌‌ಪಿ ವರ್ಗಾವಣೆ ವಿರುದ್ಧವೂ ಟ್ವಿಟರ್ ಅಭಿಯಾನ ಆರಂಭಗೊಳಿಸಿದೆ.

ಸರ್ಕಾರದ ಮೌನಕ್ಕೂ ಆಕ್ರೋಶ ವ್ಯಕ್ತವಾಗಿದ್ದು, ಚುನಾವಣೆಯಲ್ಲಿ ನೋಟ ವೋಟಿನ ಬಳಕೆಯ ಎಚ್ಚರಿಕೆಯನ್ನು ಟ್ವಿಟರ್‌‌ನಲ್ಲಿ ನೀಡಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English