ಕರಾವಳಿಯಲ್ಲಿ ಪ್ರಪ್ರಥಮ ಲಿವರ್ ಕಸಿ.. ಎ ಜೆ ಆಸ್ಪತ್ರೆ ಸಾಧನೆ

11:55 AM, Tuesday, January 23rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

AJ-hospitalಮಂಗಳೂರು: ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‌ ಸಹಭಾಗಿತ್ವದಲ್ಲಿ ನಗರದ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮೃತ ದಾನಿಯಿಂದ (ಮೆದುಳು ನಿಷ್ಕ್ರಿಯಗೊಂಡ) ಪಡೆದ ಲಿವರ್‌ನ್ನು (ಯಕೃತ್ತು) ಬೆಂಗಳೂರಿನ ಸಾಫ್ಟ್‌‌ವೇರ್ ಉದ್ಯೋಗಿಯೊಬ್ಬರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ.

ಇದೇ ಮೊದಲ ಬಾರಿ ಮಂಗಳೂರಿನಲ್ಲಿ ಕೈಗೊಂಡ ಈ ಪ್ರಯತ್ನದಲ್ಲಿ ಎ. ಜೆ. ಆಸ್ಪತ್ರೆ ಯಶಸ್ವಿಯಾಗಿದೆ. ಎ. ಜೆ. ವೈದ್ಯರ ತಂಡ ಮತ್ತು ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‌ನ ಕನ್ಸಲ್ಟೆಂಟ್ ಹೆಪಟೋಬಿಲಿಯರಿ ಮತ್ತು ಮಲ್ಟಿ ಆರ್ಗನ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸಕರಾದ ಡಾ. ರಾಘವೇಂದ್ರ ಸಿ. ವಿ ಮತ್ತು ಡಾ. ಸುರೇಶ್ ರಾಘವಯ್ಯ, ಡಾ. ದೀಪ್ತಿ ರಾಮಚಂದ್ರ ಹಾಗೂ ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್‌ಗಳಾದ ಡಾ. ರೋಹನ್ ಶೆಟ್ಟಿ, ಡಾ. ಆಶ್ವಿನ್ ಆಳ್ವರನ್ನೊಳಗೊಂಡ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ.

ಸಾಫ್ಟ್‌ವೇರ್ ಉದ್ಯೋಗಿಯಾಗಿರುವ 41 ವರ್ಷದ ವಿಜಯ್ (ಹೆಸರು ಬದಲಾಯಿಸಿದೆ) ಅವರು ತೀವ್ರ ಸ್ವರೂಪದ ಜಾಂಡೀಸ್‌ನಿಂದ ಬಳಲುತ್ತಿದ್ದರು. ಇದರಿಂದ ಅವರ ಹೊಟ್ಟೆ ಮತ್ತು ಕಾಲು ಊದಿಕೊಂಡಿದ್ದವು. ಲಿವರ್‌ನ ಸಮಸ್ಯೆಯಿಂದಾಗಿ ಅವರ ಬಹು ಅಂಗಾಂಗಗಳು ಹಾನಿಗೊಳಗಾಗಿದ್ದವು.

ಹತ್ತು ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡರೂ ಅವರ ಈ ಸಮಸ್ಯೆಗೆ ಪರಿಹಾರ ದೊರೆತಿರಲಿಲ್ಲ. ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‌ನಲ್ಲಿ ತಪಾಸಣೆಗಾಗಿ ದಾಖಲಾದಾಗ ತಕ್ಷಣವೇ ಲಿವರ್ ಕಸಿಯೊಂದೇ ಇದಕ್ಕಿದ್ದ ಏಕೈಕ ಪರಿಹಾರ ಮಾರ್ಗವಾಗಿತ್ತು ಎಂದು ಕನ್ಸಲ್ಟೆಂಟ್ ಹೆಪಟೋಬಿಲಿಯರಿ ಮತ್ತು ಮಲ್ಟಿ ಆರ್ಗನ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸಕ ಡಾ. ರಾಘವೇಂದ್ರ ಸಿ. ವಿ. ಅಭಿಪ್ರಾಯಪಟ್ಟಿದ್ದರು.

ಬಹು ಅಂಗಾಂಗಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತಿದ್ದರಿಂದ ವಿಜಯ್ ಅವರು ಮೇಲಿಂದ ಮೇಲೆ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಇದು ಸಹಜವಾಗಿ ಅವರ ದೈನಂದಿನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಕುಟುಂಬದವರಿಂದ ಲಿವರ್‌ ಪಡೆದುಕೊಂಡು ಕಸಿ ನಡೆಸುವ ಆಯ್ಕೆಯೂ ಅವರ ಪಾಲಿಗೆ ಇಲ್ಲವಾಗಿತ್ತು.

‘ಮೆದುಳು ನಿಷ್ಕ್ರಿಯಗೊಂಡವರಿಂದ ಯಕೃತ್ತನ್ನು ಕಸಿ ಮಾಡಿಸಿಕೊಳ್ಳಲು ನಿರ್ಧರಿಸಿ ಎ. ಜೆ. ಆಸ್ಪತ್ರೆಯಲ್ಲಿ ಕರ್ನಾಟಕದ ಕಸಿ ಪ್ರಾಧಿಕಾರದ ‘ಜೀವ ಸಾರ್ಥಕತೆ’ ಯೋಜನೆಯಡಿ 2017ರ ಮೇ ತಿಂಗಳಲ್ಲಿ ಹೆಸರನ್ನು ನೋಂದಾಯಿಸಿದ್ದರು. `ಮೃತ ದಾನಿ’ಯ ಲಿವರ್ ಲಭ್ಯತೆ ಮತ್ತು ಅದು ಹೊಂದಾಣಿಕೆಯಾಗಿದ್ದರಿಂದ ವಿಜಯ್ ಅವರು ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಕಸಿ ಶಸ್ತ್ರಚಿಕಿತ್ಸೆಯಿಂದ ವಿಜಯ್ ಅವರು ಬಹುಬೇಗನೆ ಚೇತರಿಸಿಕೊಳ್ಳುವುದರ ಜೊತೆಗೆ, ಅವರ ಕಸಿಗೊಂಡ ಲಿವರ್ ಸಹ ಸೂಕ್ತವಾಗಿ ಸ್ಪಂದಿಸತೊಡಗಿತ್ತು. 15 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ವಿಜಯ್ ಅವರು ನಂತರ ಮನೆಗೆ ತೆರಳಿದ್ದರು. ನಿಯಮಿತವಾಗಿ ತಪಾಸಣೆಗೆ ಒಳಗಾಗುತ್ತಿರುವ ವಿಜಯ್ ಅವರ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಎ. ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಸುದ್ದಿಗಾರರಿಗೆ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English