ಮಂಗಳೂರು: ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಕೇರಳದ ಕಣ್ಣೂರಿನ 10 ಮಂದಿ ಮೀನುಗಾರರನ್ನು ಕರಾವಳಿ ತಟ ರಕ್ಷಣಾ ಪಡೆ ಭಾನುವಾರ ತಡರಾತ್ರಿ ರಕ್ಷಿಸಿದೆ. ಅರಬ್ಬಿ ಸಮುದ್ರದಲ್ಲಿ ಮಲ್ಪೆಯ ಪಶ್ಚಿಮಕ್ಕೆ 100 ನಾಟಿಕಲ್ ಮೈಲ್ಸ್ ದೂರದಲ್ಲಿ ಈ ಘಟನೆ ನಡೆದಿದೆ.
ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ದೋಣಿಯಲ್ಲಿ ಯಾಂತ್ರಿಕ ತೊಂದರೆ ಕಾಣಿಸಿಕೊಂಡು ದೋಣಿಯೊಳಕ್ಕೆ ನೀರು ನುಗ್ಗಲಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ದೋಣಿಯಲ್ಲಿದ್ದ 10 ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ಈ ಕುರಿತು ಭಾರತೀಯ ತಟ ರಕ್ಷಣಾ ಪಡೆಯ ಮಂಗಳೂರು ಕೇಂದ್ರಕ್ಕೆ ಸಂದೇಶ ರವಾನೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ತಟ ರಕ್ಷಣಾ ಪಡೆಯ ಐಸಿಜಿ ಸಮರ್ ಬೋಟ್ ತಕ್ಷಣ ನೆರವಿಗೆ ಧಾವಿಸಿದೆ. 21ರ ತಡ ರಾತ್ರಿ ವೇಳೆಗೆ ತಟ ರಕ್ಷಣಾ ಪಡೆ ಮೀನುಗಾರಿಕಾ ದೋಣಿಯನ್ನು ಪತ್ತೆ ಹಚ್ಚಿ ಯಾಂತ್ರಿಕ ತೊಂದರೆಯನ್ನು ಸರಿಪಡಿಸಿ ದೋಣಿಯೊಳಗಿದ್ದ ನೀರನ್ನು ತೆರವುಗೊಳಿಸಿದೆ.
ಜನವರಿ 22 ರ ಸಂಜೆ ವೇಳೆಗೆ ದೋಣಿ ಹಾಗೂ ಅದರಲ್ಲಿದ್ದ 10 ಮಂದಿ ಮೀನುಗಾರರನ್ನು ರಕ್ಷಿಸಿದ ಕರಾವಳಿ ತಟ ರಕ್ಷಣಾ ಪಡೆ, ಅವರನ್ನು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರ ವಶಕ್ಕೆ ಒಪ್ಪಿಸಿತು. ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಿಸುವಲ್ಲಿ ತಟ ರಕ್ಷಣಾ ಪಡೆ ಯಶಸ್ವಿಯಾಗಿದ್ದು ಶ್ಲಾಘನೆಗೆ ಪಾತ್ರವಾಗಿದೆ.
Click this button or press Ctrl+G to toggle between Kannada and English