ಮಲ್ಪೆ: ಪಡುಕರೆ ಭಾಗದಲ್ಲಿ 4ನೇ ಹಂತದ ಮೀನುಗಾರಿಕೆ ಜೆಟ್ಟಿ ನಿರ್ಮಾಣಕ್ಕೆ ಈಗಾಗಲೇ 20 ಕೋ. ರೂ. ಪ್ರಸ್ತಾವನೆಯನ್ನು ನಬಾರ್ಡ್‌ಗೆ ಕಳುಹಿಸಲಾಗಿದ್ದು, ಇದರಲ್ಲಿ 10 ಕೋ. ರೂ. ಅತೀ ಶೀಘ್ರದಲ್ಲಿ ಮಂಜೂರಾಗುವ ಸಾಧ್ಯತೆ ಇದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ರವಿವಾರ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ವಾಂಗೀಣ ಅಭಿವೃದ್ಧಿ ರಾಜ್ಯ ಸರಕಾರವು ಬಂದರಿನ ಸರ್ವಾಂಗೀಣ ಅಭಿವೃದ್ಧಿಗೆ ಆರಂಭದಿಂದಲೂ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ.
ಕಳೆದ ಬಜೆಟ್‌ನಲ್ಲಿ ವಿಶೇಷವಾಗಿ ಮಲ್ಪೆ ಬಂದರಿನಲ್ಲಿ ಕಾಂಕ್ರೀಟ್ ರಸ್ತೆ, ಜೆಟ್ಟಿ ಮತ್ತು ಒಳಚರಂಡಿ ನಿರ್ಮಾಣಕ್ಕೆ 5 ಕೋ. ರೂ. ಮಂಜೂರುಗೊಳಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು 2 ತಿಂಗಳೊಳಗೆ ಪೂರ್ಣಗೊಳ್ಳಲಿದೆ.
ಮಲ್ಪೆ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮದಡಿ 98 ಸಾಧ್ಯತಾ ಪತ್ರ ಹಾಗೂ ಹೊಸದಾಗಿ ಅರ್ಜಿ ಹಾಕಿದ 1,000ಕ್ಕೂ ಅಧಿಕ ಸಾಧ್ಯತಾ ಪತ್ರಗಳನ್ನು ನೀಡಲಾಗಿದೆ. ಡೀಸೆಲ್ ಸಬ್ಸಿಡಿಗಾಗಿ 1,890 ಡೀಸೆಲ್ ಪಾಸ್‌ಬುಕ್ ನೀಡಲಾಗಿದೆ. ಬಂದರಿನ ಬೇಸಿನ್‌ನಿಂದ ಹೂಳೆತ್ತುವ ಕಾಮಗಾರಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ 2.5 ಕೋ. ರೂ. ಮಂಜೂರಾಗಿದ್ದು, ಕೆಲಸ ಪ್ರಗತಿಯಲ್ಲಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಯಶೋಧರ ಅಮೀನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯ ವಿಜಯ ಕುಂದರ್, ನಾರಾಯಣ ಪಿ. ಕುಂದರ್, ಮಲ್ಪೆ ಪಸೀìನ್ ಮೀನುಗಾರರ ಸಂಘದ ಗೌರವಾಧ್ಯಕ್ಷ ಗುರುದಾಸ್ ಬಂಗೇರ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ, ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಮಲ್ಪೆ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ಅಖೀಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಉಪಾಧ್ಯಕ್ಷ ನವೀನ್ ಬಂಗೇರ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮಾಜಿ ಅಧ್ಯಕ್ಷ ಶಿವಪ್ಪ ಟಿ. ಕಾಂಚನ್, ಮಲ್ಪೆ ಪರ್ಸಿನ್ ದೋಣಿ ಮೀನುಗಾರ ಮಾಲಕರ ಸಂಘದ ಅಧ್ಯಕ್ಷ ಶೇಖರ ತಿಂಗಳಾಯ ಬೀಚ್, ಗೌರವಾಧ್ಯಕ್ಷ ಅಚ್ಯುತ ಬಂಗೇರ, ಮೀನುಗಾರಿಕಾ ಸಹಾಯಕ ನಿರ್ದೇಶಕ ಶಿವಕುಮಾರ್, ಮೀನುಗಾರಿಕಾ ಉಪನಿರ್ದೇಶಕ ಪಾರ್ಶ್ವನಾಥ್, ಜಂಟಿ ನಿರ್ದೇಶಕ ದೊಡ್ಡಮನಿ, ಪರ್ಸಿನ್ ಮೀನುಗಾರ ಸಂಘದ ಚಂದ್ರ ಸಾಲ್ಯಾನ್, ನಾಗರಾಜ್ ಸುವರ್ಣ, ರಾಮ ಸುವರ್ಣ, ಬಂದರಿನ ವಿವಿಧ ಮೀನುಗಾರಿಕಾ ಸಂಘಟನೆಗಳ ಪದಾಧಿಕಾರಿಗಳಾದ ದಾಸ ಕುಂದರ್, ರಮೇಶ್ ಕೋಟ್ಯಾನ್, ಹರಿಶ್ಚಂದ್ರ ಕಾಂಚನ್, ರಾಘವ ಜಿ.ಕೆ., ಕಿಶೋರ್ ಪಡುಕರೆ, ಜಲಜಾ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಸ್ಥಾಪಕ ಸದಸ್ಯ ದಿ ವಿಕ್ರಮ್ ಮೆಂಡನ್ ಪರವಾಗಿ ಅವರ ಪತ್ನಿ, ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ಮಾಜಿ ಅಧ್ಯಕ್ಷರಾದ ಜಗನ್ನಾಥ ಮೈಂದನ್, ಗುರುದಾಸ ಬಂಗೇರ, ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸ್. ಸುವರ್ಣ ಅವರನ್ನು ಸಮ್ಮಾನಿಸಲಾಯಿತು. ಸ್ಪಂದನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಆರ್ಥಿಕ ನೆರವು, ಅಶಕ್ತರಿಗೆ ವೈದ್ಯಕೀಯ ನೆರವು, ಫಲಾನುಭವಿಗಳಿಗೆ ವಿಮಾ ಪರಿಹಾರ ವಿತರಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಸುವರ್ಣ ಸ್ವಾಗತಿಸಿದರು. ನವೀನ್ ಕೋಟ್ಯಾನ್ ವರದಿ ವಾಚಿಸಿದರು. ಕಾರ್ಯದರ್ಶಿ ಸಂತೋಷ್ ವಂದಿಸಿದರು. ಸತೀಶ್‌ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮೀನುಗಾರಿಕೆ ವಿಧಾನದ ಬಗ್ಗೆ ತಲೆದೋರಿದ ಸಂಘರ್ಷ ವನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಜ. 24ರಂದು ಸಂಧಾನ ಸಭೆ ನಡೆಯಲಿದೆ. ಆ ಸಭೆಯಲ್ಲಿ ಸ್ವತಃ ಮಧ್ಯಪ್ರವೇಶಿಸಿ ಸಂಧಾನದ ಮೂಲಕ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆಸುತ್ತೇನೆ ಎಂದು ಸಚಿವ ಪ್ರಮೋದ್ ಹೇಳಿದರು.
Click this button or press Ctrl+G to toggle between Kannada and English