ಬೆಂಗಳೂರು: ಕನ್ನಡಪರ ಸಂಘಟನೆಗಳ ನಡುವಿನ ಸಮನ್ವಯತೆ ಕೊರತೆಯಿಂದ ಜ.25(ನಾಳೆ) ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವ ಆತಂಕ ಎದುರಾಗಿರುವ ಬೆನ್ನಲ್ಲೇ ಸಾರಿಗೆ ಬೆನ್ನೆಲುಬಾಗಿರುವ ಕೆಎಸ್‍ಆರ್‌ಟಿಸಿ ನೌಕರರ ಸಂಘದಲ್ಲಿಯೂ ಪರ-ವಿರೋಧಗಳು ವ್ಯಕ್ತವಾಗಿವೆ.
ಸಾರಿಗೆ ಸಂಸ್ಥೆಯ ನೌಕರರ ಸಂಘಟನೆಗಳು ನಾಲ್ಕೈದು ಇದ್ದು, ಇದರಲ್ಲಿ ಒಂದೆರಡು ಸಂಘಟನೆಗಳು ಬೆಂಬಲ ಸೂಚಿಸಿದ್ದರೆ, ಮತ್ತೆ ಕೆಲವು ವಿರೋಧ ವ್ಯಕ್ತಪಡಿಸಿವೆ. ಬಂದ್‌ಗೆ ಕನ್ನಡ ಪರ ಸಂಘಟನೆಗಳೇ ಸಹಮತ ವ್ಯಕ್ತಪಡಿಸುತ್ತಿಲ್ಲ, ನಗರದ ಸ್ಥಿತಿ ಸಹಜವಾಗಿರಲಿದೆ ಎಂದು ಸರ್ಕಾರ ಅಭಯ ನೀಡಿದೆ.
ಹೀಗಿರುವಾಗ ಸಂಚಾರ ನಿಲ್ಲಿಸಿ ಬಂದ್‍ಗೆ ತೆರಳುವುದು ಸರಿಯಲ್ಲ. ಜನರ ಸೇವೆಗೆ ಸಜ್ಜಾಗಿರಬೇಕಾದ ನಾವು ಬೇಜವಾಬ್ದಾರಿ ತೋರಿಸುವಂತಿಲ್ಲ ಎಂದು ಸರ್ಕಾರ ಸೂಚಿಸಿದ್ದು, ಅದಕ್ಕೆ ಕೆಲ ಸಂಘಟನೆಗಳು ಸಹಮತ ವ್ಯಕ್ತಪಡಿಸಿವೆ.
ಕೆಲವರು ಬಸ್ ಓಡಿಸಲು ಒಪ್ಪಿದ್ದರೆ, ಮತ್ತೆ ಕೆಲವರು ವಿರೋಧಿಸುತ್ತಿದ್ದಾರೆ. ಎಸ್ಮಾ ಸೇರಿದಂತೆ ಹಲವು ಮಾರ್ಗಗಳು ಸರ್ಕಾರದ ಕೈಲಿದ್ದು, ಇಂದು ಸಂಜೆಯ ಒಳಗೆ ಸರ್ಕಾರದ ಸ್ಪಷ್ಟ ನಿರ್ದೇಶನ ಹೊರಬೀಳಲಿದೆ. ಖುದ್ದು, ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಈ ಬಗ್ಗೆ ಇಂದು ಸ್ಪಷ್ಟ ಸೂಚನೆ ನೀಡಲಿದ್ದಾರೆ.
ಮಹದಾಯಿ ಕುರಿತು ಪ್ರಧಾನಿ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿ ಕಳಸಾ ಬಂಡೂರಿ ಹೋರಾಟಗಾರರು ಮತ್ತು ಕನ್ನಡಪರ ಸಂಘಟನೆಗಳು ಜ.25ಕ್ಕೆ ಬಂದ್‍ಗೆ ಕರೆ ಕೊಟ್ಟಿವೆ. ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಇದೀಗ ಕೆಎಸ್‌ಆರ್‌ಟಿಸಿ ನೌಕರರ ಸಂಘ ಕೂಡ ಬೆಂಬಲಿಸುವ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ. ಈ ಬೆಂಬಲ ಹಿನ್ನೆಲೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಮತ್ತು ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‌ಗಳು ಅಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ರಸ್ತೆಗಿಳಿಯುವುದಿಲ್ಲ ಎಂದು ಹೇಳಲಾಗಿದೆ.
ಆದರೆ ಸರ್ಕಾರದ ಭರವಸೆ ಹಾಗೂ ಆದೇಶದ ಮೇರೆಗೆ ಬಸ್ ಓಡಿದರೂ, ಎಲ್ಲಿಯಾದರೂ ಅಹಿತಕರ ಘಟನೆ ನಡೆದರೆ ತಕ್ಷಣ ಬಸ್ ಸಂಚಾರ ನಿಲ್ಲುವ ಸಾಧ್ಯತೆ ಹೆಚ್ಚಿದೆ.
ಓಲಾ ಮತ್ತು ಟ್ಯಾಕ್ಸಿ ಸಂಘಟನೆಗಳು, ಕೆಲ ಆಟೋ ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟಿವೆ. ಇದರಿಂದ ಬಂದ್ ದಿನ ಕೆಲ ಖಾಸಗಿ ಕ್ಯಾಬ್, ಆಟೋ ಸಂಚರಿಸುವ ಸಾಧ್ಯತೆ ಕಡಿಮೆ ಇದೆ. ಇದು ಕೂಡ ಸರ್ಕಾರ ನೀಡುವ ಭರವಸೆಯನ್ನು ಆಧರಿಸಿ ನಿರ್ಧಾರವಾಗಲಿದ್ದು, ಇಂದು ಸಂಜೆಯ ಹೊತ್ತಿಗೆ ಬಂದ್ ಬೆಂಬಲಿಸಿ ನಿಲ್ಲುವ ಹಾಗೂ ಬೆಂಬಲಿಸದೇ ಓಡುವ ವಾಹನಗಳ ಕುರಿತ ನಿಖರ ಮಾಹಿತಿ ಸಿಗಲಿದೆ.
Click this button or press Ctrl+G to toggle between Kannada and English