ಮಂಗಳೂರು ರಥಸಪ್ತಮಿ ಉತ್ಸವ: ಭಕ್ತಿಭಾವದಿಂದ ಮಿಂದೆದ್ದ ಭಕ್ತಕೋಟಿ

12:15 PM, Thursday, January 25th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Festivalಮಂಗಳೂರು: ರಥಸಪ್ತಮಿ ಶುಭಾವಸರದ ವೇಳೆ ಸಂಜೆ ಗೋಧೂಳಿಯ ಸಮಯದಲ್ಲಿ ನಗರದ ರಥಬೀದಿಯಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ‘ಕೊಡಿಯಾಲ್ ತೇರು’ ಬುಧವಾರ (ಜ 24) ಸಂಜೆ ಜರುಗಿತು.

ಸಂಜೆ 5.30ರ ವೇಳೆಗೆ ಚಿನ್ನದ ಪಲ್ಲಕ್ಕಿಯೇರಿ ದೇವಳದಿಂದ ರಥದೆಡೆಗೆ ವೀರ ವೆಂಕಟೇಶ ದೇವರ ಆಗಮನದ ಬಳಿಕ ಸಾಂಪ್ರದಾಯಿಕ ರಥ ಪ್ರದಕ್ಷಿಣೆ ನಡೆಯಿತು. ಪಲ್ಲಕ್ಕಿಯನ್ನು ಏಕ ಹಸ್ತದಿಂದ ಏರಿಸಿ ಸಂಭ್ರಮಿಸಲಾಯಿತು.

Festival-2ಬ್ಯಾಂಡ್ ವಾದ್ಯಗಳ ಅಬ್ಬರ, ಮಂಗಲ ವಾದ್ಯಗಳ ನಿನಾದ , ತಾಳ ಸಂಕೀರ್ತನೆಯ ಹಿನ್ನೆಲೆಯಲ್ಲಿ ಸೇರಿದ ಸಹಸ್ರಾರು ಭಜಕರ ಹರ್ಷೋದ್ಗಾರಗಳ ನಡುವೆ ಸಂಜೆ 6.05 ರ ವೇಳೆಗೆ ಶ್ರೀದೇವರ ರಥಾರೋಹಣ ನಡೆಯಿತು.

ಈ ಸಂದರ್ಭದಲ್ಲಿ ಭಾವಾವೇಶಕ್ಕೆ ಒಳಗಾದ ಭಕ್ತರು ವೀರವೆಂಕಟೇಶಾ ವೇದವ್ಯಾಸಾ ಗೋವಿಂದೋ’ ಎಂದು ಜಯಘೋಷಗೈದರು. ರಥಾರೂಢ ವೀರ ವೆಂಕಟೇಶನಿಗೆ ಮಹಾಮಂಗಳಾರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.

ಈ ಬಾರಿಯ ಕೊಡಿಯಾಲ್ ತೇರು ಸಂಭ್ರಮಕ್ಕೆ ಕಾಶೀಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿ ವಿಶೇಷ ರಂಗೇರಿಸಿತು. ರಥಾರೂಡ ಶ್ರೀವೀರ ವೆಂಕಟೇಶ ದೇವರಿಗೆ ನೂತನ ವಾಗಿ ನಿರ್ಮಿಸಲಾದ ಸ್ವರ್ಣ ಪ್ರಭಾವಳಿ ಹಾಗೂ ಸ್ವರ್ಣ ಯಾಲಕ್ಕಿ ಮಾಲೆಯನ್ನು ಶ್ರೀಗಳವರ ದಿವ್ಯ ಹಸ್ತಗಳಿಂದ ದೇವರಿಗೆ ಸಮರ್ಪಿಸಲಾಯಿತು.

Festival-3ಶ್ರೀ ವೆಂಕಟರಮಣ ದೇವಳವೂ ಶ್ರೀ ಸಂಸ್ಥಾನದ ಅಧೀನದಲ್ಲಿದ್ದು ಗುರುವರ್ಯರ ಅಮೃತ ಹಸ್ತಗಳಿಂದ ಮಹಾಪೂಜೆ, ಮಹಾಪ್ರಸಾದ ಪಡೆದ ಧನ್ಯತೆ ಮಂಗಳೂರು ದೇವಳದ ಭಜಕರದ್ದಾಗಿದೆ. ಬಳಿಕ ಸಹಸ್ರ ಅಬಾಲ ವೃದ್ಧ ಪುರುಷರು ರಥವನ್ನು ಎಳೆಯುವುದರಮೂಲಕ ಸೇವೆ ಸಲ್ಲಿಸಿದರು .

ಸಮಾಜದ ಪರವಾಗಿ ಶ್ರೀ ದೇವಳದ ಆಡಳಿತ ಮೊಕ್ತೇಸರ ಪದ್ಮನಾಭ ಪೈ ಸಹಿತ ಮೊಕ್ತೇಸರರು ಮಹಾಪ್ರಸಾದವನ್ನು ಸ್ವೀಕರಿಸಿದರು. ದಾನಿ ಮುಂಡ್ಕೂರು ರಾಮದಾಸ ಕಾಮತ್ ಸಹಿತ ಗಣ್ಯರಿಗೆ ಈ ಸಂದರ್ಭದಲ್ಲಿ ಪ್ರಸಾದ ನೀಡಲಾಯಿತು.

ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ವಿಧಾನಸಭಾ ಮಾಜಿ ಉಪಸಭಾಪತಿ ಎನ್.ಯೋಗೀಶ್ ಭಟ್ ಮತ್ತಿತರ ಗಣ್ಯರು ಈ ಸಂಧರ್ಭದಲ್ಲಿ ಹಾಜರಿದ್ದರು. ಮಹೋತ್ಸವದ ಅಂಗವಾಗಿ ಶ್ರೀದೇವರಿಗೆ ದೇವಳದಲ್ಲಿ ವಿಶೇಷ ಗಂಗಾಭಿಷೇಕ, ಪುಳಕಾಭಿಷೇಕ ಸಹಿತ ಸಹಸ್ರಧಾರಾ ಸೇವೆ ಸಹಿತ ಧಾರ್ಮಿಕ ವಿದಿವಿಧಾನಗಳು ನಡೆದವು. ಸಂಜೆ ಮಹಾಯಜ್ಞ ಮಂಟಪದಲ್ಲಿ ಪೂರ್ಣಾಹುತಿ ನಡೆಯಿತು.

Festival-4ಸಂಜೆ ರಥದಲ್ಲಿ ಸಮಾಜ ಬಾಂಧವರು ಮಹಾಪ್ರಸಾದ ಸ್ವೀಕರಿಸಿದರು. ಇದಕ್ಕೂ ಮೊದಲು ರಥದ ಚಕ್ರಕ್ಕೆ ಕಾಯಿಗಳನ್ನು ಒಡೆಯುವ, ಸೇರಿದವರು ರಥವನ್ನು ಕರ ಸೇವೆಯ ಮೂಲಕ ಒಂದಿಷ್ಟು ಮುಂದಿಡುವ ಕ್ರಿಯೆಗಳು ನಡೆದವು.

ದೇಶವಿದೇಶಗಳಿಂದ ರಥೋತ್ಸವ ಸಂಭ್ರಮಕ್ಕೆಂದೇ ಆಗಮಿಸಿದ್ದ ಜನತೆ ಕೊಡಿಯಾಲ್ ತೇರಿನ ವೈಭವವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಮಹಾ ಸಮಾರಾಧನೆಯಲ್ಲಿ 50 ಸಹಸ್ರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English