ಮಂಗಳೂರು: ಜೈಲಿನಲ್ಲೇ ವಿಚಾರಣಾಧಿನ ಕೈದಿಗಳನ್ನು ಬೆದರಿಸಿ ಸಹ ಕೈದಿಗಳೇ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಘಟನೆ ಮಂಗಳೂರು ಕಾರಾಗೃಹ ದಲ್ಲಿ ಬೆಳಕಿಗೆ ಬಂದಿದೆ.ಕೆಆರ್‌ಐಡಿಎಲ್ ಸಂಸ್ಥೆಗೆ ವಂಚನೆ ಮಾಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಸಹ ಕೈದಿಗಳು ಜೀವ ಬೆದರಿಕೆ ಹಾಕಿ 15 ಲಕ್ಷ ವಸೂಲಿ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು ಈ ಸಂಬಂಧ ಎಂಟು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೆಆರ್‌ಐಡಿಎಲ್ ಸಂಸ್ಥೆಯಲ್ಲಿ ಕೆಲವು ತಿಂಗಳುಗಳ ಹಿಂದೆ 55 ಕೋಟಿ ರೂಪಾಯಿ ಅವ್ಯವಹಾರ ನಡೆದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆಯ 3 ಮಂದಿ ಅಧಿಕಾರಿಗಳಾದ ಸಿಜೋ ಕೆ.ಜೋಸ್, ಸುನಿಲ್ ಮತ್ತು ಜೆರಿ ಫೌಲ್ ಎಂಬವರನ್ನು ವಂಚನೆ ಆರೋಪದ ಮೇಲೆ ಬಂಧಿಸಲಾಗಿತ್ತು.
ಮಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ಸಿಜೋ ಕೆ.ಜೋಸ್, ಸುನಿಲ್ ಮತ್ತು ಜೆರಿ ಫೌಲ್ ರೋಪಿಗಳ ಮೇಲೆ ಇತರೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸಹ ಕೈದಿಗಳು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿ 15 ಲಕ್ಷ ಮೊತ್ತವನ್ನು ಸಹಚರರ ಮೂಲಕ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸುನಿಲ್ ಎಂಬುವರಿಗೆ ಸೇರಿದ ಐಷಾರಾಮಿ ಕಾರನ್ನು ತಮ್ಮ ಸಹಚರರ ಸಹಾಯದಿಂದ ಅನೂಪ್ ಕುಮಾರ್ ಎಂಬುವರ ಹೆಸರಿಗೆ ದಾಖಲೆಗಳನ್ನು ಸೃಷ್ಟಿಸಿ ವರ್ಗಾವಣೆ ಮಾಡಿದ್ದರು ಎಂದು ಹೇಳಲಾಗಿದೆ. ಈ ಕುರಿತು ಪೌಲ್ ಎಂಬುವರು ಮಂಗಳೂರು ಬರ್ಕೆ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಈಗಾಗಲೇ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಿಥುನ್ ಪೂಜಾರಿ ಕಲ್ಲಡ್ಕ, ತಿಲಕ್‌ರಾಜ್ ಆಕಾಶಭವನ, ಶಿವರಾಜ್ ಕೋಟೆಕಾರು, ರಾಜು ಪರಂಗಿಪೇಟೆ ಹಾಗೂ ನಿಖಿಲ್ ವೀರನಗರ ಎಂಬುವರ ವಿರುದ್ಧ ಕೇಸು ದಾಖಲಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚರಣ್, ಅನೂಪ್ ಕುಮಾರ್ , ಮನೋಜ್ ಕುಲಾಲ್ ಎಂಬವರನ್ನು ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Click this button or press Ctrl+G to toggle between Kannada and English