ಮಂಗಳೂರು: ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ ಅವರು ಉಪ ಲೋಕಾಯುಕ್ತರ ವಿಚಾರಣೆ ವೇಳೆ ಮಾಹಿತಿ ನೀಡುತ್ತಿದ್ದಾಗ ಹಠಾತ್ ಕುಸಿದು ಬಿದ್ದ ಘಟನೆ ನಡೆದಿದೆ.
ದ.ಕ. ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅವರು ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಸಾರ್ವಜನಿಕರ ಅಹವಾಲಿಗೆ ಸಂಬಂಧಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿಯವರು ಮಾಹಿತಿ ನೀಡುತ್ತಿದ್ದರು. ಆಗ ಹಠಾತ್ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ಹಿಂದೆಯೂ ಎರಡು ಬಾರಿ ಇದೇ ರೀತಿ ಕುಸಿದು ಬಿದ್ದಿದ್ದರು. ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಹಾಗೂ ಅತ್ಯಾಚಾರ ನಿಯಂತ್ರಣ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಅವರು ಮಂಗಳೂರಿನಲ್ಲಿ ಸಭೆ ನಡೆಸಿದ ವೇಳೆ ಈ ಘಟನೆ ನಡೆದಿದ್ದವು. ಎರಡೂ ಬಾರಿಯೂ ಉಗ್ರಪ್ಪ ಅವರು ಪ್ರಶ್ನಿಸಿದ ವೇಳೆ ಸುಂದರ ಪೂಜಾರಿ ಇದೇ ರೀತಿ ಕುಸಿದು ಆಸ್ಪತ್ರೆ ಸೇರಿದ್ದರು.
Click this button or press Ctrl+G to toggle between Kannada and English