ಪಡುಬಿದ್ರಿ: ಕಾಪು ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮಾಲಿನಿ ಆಯ್ಕೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 15 ತಿಂಗಳ ಅವಧಿಗೆ ಅಧ್ಯಕ್ಷೆಯಾಗಿದ್ದ ಸೌಮ್ಯ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪುರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ. ಸಭೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಿದ ಚುನಾವಣಾಧಿಕಾರಿ, ಉಡುಪಿ ತಹಶೀಲ್ದಾರ್ ಪ್ರದೀಪ್ ಹುರ್ಡೆಕರ್ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು.
ಶನಿವಾರ ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ನಿಕಟಪೂರ್ವ ಅಧ್ಯಕ್ಷೆ ಸೌಮ್ಯ ಅವರಿಂದ ಸೂಚನೆ, ಸದಸ್ಯೆ ಅಶ್ವಿನಿ ಅವರ ಅನುಮೋದನೆಯೊಂದಿಗೆ ಮಾಲಿನಿ ಅವರ ಏಕೈಕ ನಾಮಪತ್ರ ಸಲ್ಲಿಕೆಯಾಗಿತ್ತು. ಈ ಮೂಲಕ ಅಧ್ಯಕ್ಷೆಯಾಗಿ ಅವಿರೋಧಯಾಗಿ ಆಯ್ಕೆಯಾದರು.
15ತಿಂಗಳ ಒಡಂಬಡಿಕೆ: ಒಂದೂವರೆ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕಾಪು ಪುರಸಭೆಗೆ 15ತಿಂಗಳ ಹಿಂದೆ 23 ವಾರ್ಡ್‌ಳಿಗಾಗಿ ನಡೆದ ಚುನಾವಣೆಯಲ್ಲಿ 12ಕಾಂಗ್ರೆಸ್ ಹಾಗೂ 11ಬಿಜೆಪಿ ಸದಸ್ಯರು ಅಯ್ಕೆಯಾಗಿದ್ದರು. ಕಾಪು ಪುರಸಭೆಗೆ ಅಧ್ಯಕ್ಷ ಹುದ್ದೆ ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿತ್ತು. ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷದಲ್ಲಿ ಎರಡು ಜನ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಾಗಿದ್ದರು. ಆದರೆ, ಪಕ್ಷದ ಒಡಂಬಡಿಕೆಯಂತೆ ಮೊದಲ 15 ತಿಂಗಳ ಅವಧಿಗೆ ಅಧ್ಯಕ್ಷೆಯಾಗಿ ಸೌಮ್ಯ ಆಯ್ಕೆಯಾಗಿದ್ದರು. ಅವರ ಅವಧಿ ಡಿಸೆಂಬರ್‌ನಲ್ಲಿ ಕೊನೆಗೊಂಡು, ಒಡಂಬಡಿಕೆಯಂತೆ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಇದೀಗ ಪುರಸಭೆಯ 19ನೇ ವಾರ್ಡ್‌ನ ಮಾಲಿನಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರ ಪರಿಚಯ: 29 ವರ್ಷದ ಮಾಲಿನಿ ಪ್ರಥಮ ಬಾರಿ ಚುನಾವಣೆಗೆ ಸ್ಪರ್ಧಿಸಿ ಪುರಸಭಾ ಸದಸ್ಯರಾಗಿದ್ದಾರೆ. ಅವಿವಾಹಿತರಾಗಿರುವ ಅವರು, ಪದವಿಪೂರ್ವ ಶಿಕ್ಷಣದೊಂದಿಗೆ ಡಿಇಡಿ ಶಿಕ್ಷಣ ಪಡೆದು ಕಳತ್ತೂರಿನ ಅಯ್ಯಣ್ಣ ಶೆಟ್ಟಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಾದರಿ ಪುರಸಭೆ ಮಾಡಲು ಪ್ರಯತ್ನ: ನೂತನ ಅಧ್ಯಕ್ಷೆ ಮಾಲಿನಿ ಮಾತನಾಡಿ, ’ಪುರಸಭೆಯಲ್ಲಿ ಜನರಿಗೆ ತ್ವರಿತ ಸೇವೆ ನೀಡಲು ಕ್ರಮ ವಹಿಸಲಾಗುವುದು. ಅಲ್ಲದೆ, ಪುರಸಭೆ ವ್ಯಾಪ್ತಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಾಪುವನ್ನು ಮಾದರಿ ಪುರಸಭೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಹಿಂದಿನ ಅಧ್ಯಕ್ಷರ ಅವಧಿಯಲ್ಲಾದಂತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದರು.
ಪ್ರಥಮ ಸ್ಥಾನದಲ್ಲಿ ಕಾಪು: ರಾಜ್ಯದ 274 ಪುರಸಭೆಗಳ ಪೈಕಿ ಕಾಪು ಪುರಸಭೆಯನ್ನು ಮುಂಚೂಣಿಗೆ ತರುವ ಅವಕಾಶಗಳಾಗಲಿದೆ. ರಾಜ್ಯದಲ್ಲಿ ಹೊಸದಾಗಿ ರಚನೆಯಾದ 54 ಪುರಸಭೆಗಳಲ್ಲಿ ಈ ಪುರಸಭೆ ಪ್ರಥಮ ಸ್ಥಾನ ಪಡೆದಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ತಿಳಿಸಿದರು.
ಪುರಸಭೆ ವ್ಯಾಪ್ತಿಯ ರಸ್ತೆಗಳ ಪಾದಚಾರಿ ಮಾರ್ಗಗಳಿಗೆ ಇಂಟರ್‌ಲಾಡ್ ಅಳವಡಿಕೆಗೆ 2.55 ಲಕ್ಷ ಹಾಗೂ 1 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗೆ ಅನುದಾನ ಮಂಜೂರಾಗಿದೆ. ಕಾಪು ತಾಲ್ಲೂಕು ರಚನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹುದ್ದೆಗಳ ನೇಮಕಾತಿ ಶೀಘ್ರದಲ್ಲಿ ಆರಂಭವಾಗಲಿದೆ. ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿಗೆ ಗ್ರಾಮೀಣಾಭಿವೃದ್ಧಿ ಸಚಿವರನ್ನು ಕರೆಯಿಸಿ ಚಾಲನೆ ನೀಡಲಾಗುವುದು ಎಂದರು.
ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ ಪಾದೂರು, ನಗರ ಯೋಜನಾಪ್ರಾಧಿಕಾರದ ಅಧ್ಯಕ್ಷ ದಿವಾಕರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಲೀಲಾಧರ ಶೆಟ್ಟಿ, ಮುಖ್ಯಾಧಿಕಾರಿ ರಾಯಪ್ಪ ಇದ್ದರು.
ವಾಜಪೇಯಿ ವಸತಿ ಯೋಜನೆಯಲ್ಲಿ ಈಗಾಗಲೇ ಕಾಪುವಿಗೆ 300 ಮನೆ ಮಂಜೂರಾಗಿದೆ. ಅಲ್ಲದೆ, ಕಾಪುವಿನಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಮಂಜೂರಾಗಿದೆ. ಇದಕ್ಕಾಗಿ ಸೂಕ್ತ ಸ್ಥಳವನ್ನು ಗುರುತಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ವಸತಿ ಸಮಚ್ಛಯದ ಮೂಲಕ ತಲಾ 4 ಲಕ್ಷದಲ್ಲಿ 500 ವಸತಿ ನಿರ್ಮಾಣವಾಗಲಿದೆ. ಪೌರಾಡಳಿತ ಸಚಿವರನ್ನು ಕರೆಯಿಸಿ ನಗರೋತ್ಥಾನದ ₹ 8.5 ಕೋಟಿಯ ಕಾಮಗಾರಿಗಳಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
Click this button or press Ctrl+G to toggle between Kannada and English