ಮಂಗಳೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ವತಿಯಿಂದ ನಗರದ ಪುರಭವನದಲ್ಲಿ ಮಂಗಳವಾರ ದರ್ಜಿಗಳ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಹಾಗೂ ಟೈಲರ್ಗಳ ಪಿಂಚಣಿ ಕಾರ್ಡು ವಿತರಣೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅವರು ಸಮಾವೇಶವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹೊಸ ಪಿಂಚಣಿ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರವು ಈಗ ನೀಡುತ್ತಿರುವ ಸಹಾಯಧನವನ್ನು ಮುಂದಿನ 10 ವರ್ಷಗಳಿಗೆ ವಿಸ್ತರಿಸಬೇಕು ಎನ್ನುವ ಸಂಘಟನೆ ಬೇಡಿಕೆಗೆ ರಾಜ್ಯ ಸರಕಾರದಿಂದ ಈ ನೆರವು ಕೊಡಿಸಲು ಸಿದ್ಧವಿರುವುದಾಗಿ ಭರವಸೆ ನೀಡಿದರು.
ಟೈಲರ್ ಭವನ ನಿರ್ಮಾಣಕ್ಕೆ ಯೋಜನೆಯ ಪೂರಕ ದಾಖಲೆಗಳನ್ನು ಹಾಗೂ ಅಂದಾಜು ಪಟ್ಟಿ ಒದಗಿಸಿದರೆ 40 ಲಕ್ಷ ರೂ. ಸಹಾಯಧನ ಒದಗಿಸಬಹುದು. ಭವನದ ಅಗತ್ಯ ಸಿದ್ಧತೆಗಳನ್ನು ವರ್ಷದೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು.
ಅಸೋಸಿಯೇಶನ್ ಸದಸ್ಯರ ಇತರೆ ಕೆಲವು ಬೇಡಿಕೆಗಳಾದ ಹೆರಿಗೆ ಭತ್ಯೆ, ಗೃಹ ನಿರ್ಮಾಣ ನೆರವು, ವೃದ್ದಾಪ್ಯ ವೇತನ ಇವುಗಳನ್ನು ಜಾರಿಯಲ್ಲಿರುವ ಸರಕಾರದ ಯೋಜನೆಗಳಲ್ಲಿ ಪೂರೈಸಲು ಅವಕಾಶವಿದೆ.
ರಾಜ್ಯದಲ್ಲಿ ಒಟ್ಟು 2074 ದರ್ಜಿಗಳು ಪಿಂಚಣಿ ಕಾರ್ಡು ಪಡೆಯುತ್ತಿದ್ದು, ಈ ಪೈಕಿ 1203 ದರ್ಜಿಗಳು ಅವಿಭಜಿತ ದ. ಕನ್ನಡ ಜಿಲ್ಲೆಯವರು ಎನ್ನುವುದು ಗಮನಾರ್ಹ ಸಂಗತಿ. ದ. ಕನ್ನಡ ಜಿಲ್ಲೆಯ 610, ಉಡುಪಿಯ 593 ಮಂದಿ ಇದರಲ್ಲಿ ಸೇರಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಿಂಚಣಿ ಯೋಜನೆ ಕಾರ್ಡನ್ನು ವಿಧಾನಸಭೆ ಉಪಾಧ್ಯಕ್ಷ ಎನ್. ಯೋಗೀಶ್ ಭಟ್ ಅವರು ವಿತರಿಸಿದರು. ಬಳಿಕ ಮಾತನಾಡಿದ ಅವರು ಬಿಕ್ಕಟ್ಟಿನಲ್ಲಿರುವ ಬೀಡಿ ಉದ್ಯಮಕ್ಕೆ ಪರ್ಯಾಯವಾಗಿ ಟೈಲರಿಂಗ್ ವೃತ್ತಿ ವಿಸ್ತರಣೆಗೊಳ್ಳಲು ಇನ್ನಷ್ಟು ಅವಕಾಶವಿದೆ ಎಂದರು.
ಸಮಾವೇಶದ ಅಧ್ಯಕ್ಷತೆಯನ್ನು ಕೆಎಸ್‌ಟಿಎ ಜಿಲ್ಲಾ ಅಧ್ಯಕ್ಷ ರಮೇಶ್ ಮಾಡೂರು ವಹಿಸಿದ್ದರು.
ಶಾಸಕ ಬಿ. ರಮಾನಾಥ ರೈ, ಶಾಸಕ ಯು. ಟಿ. ಖಾದರ್ ,ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಸಿಂಧಿ ಹಟ್ಟಿ, ಬೆಂಗಳೂರಿನ ಅಧಿಕಾರಿ ಗಿರೀಶ್ ಅಗರ್‌ವಾಲ್ ಅವರು ಮುಖ್ಯ ಅತಿಥಿಗಳಾಗಿದ್ದರು.
ಕೆಎಸ್‌ಟಿಎ ರಾಜ್ಯಾಧ್ಯಕ್ಷ ಪ್ರವೀಣ್ ಸಾಲಿಯಾನ್ ಸ್ವಾಗತಿಸಿದರು. ಜಿಲ್ಲಾ ಪ್ರ. ಕಾರ್ಯದರ್ಶಿ ವಿಶ್ವನಾಥ ಶೆಟ್ಟಿಗಾರ್ ಪ್ರಸ್ತಾವನೆಗೈದರು. ಪ್ರಜ್ವಲ್ ಕುಮಾರ್ ವಂದಿಸಿದರು. ಮಲ್ಲಿಕಾ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English