ಪಡಿತರ ವ್ಯವಸ್ಥೆ ಸಮರ್ಪಕಗೊಳಿಸಲು ವಿಜಿಲೆನ್ಸ್‌ ಸಮಿತಿ ರಚಿಸಲು ಪ್ರಸ್ತಾವನೆ: ಖಾದರ್‌

10:27 AM, Saturday, February 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

U-T-Kaderಮಂಗಳೂರು: ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಪಕಗೊಳಿಸುವ ಸಲುವಾಗಿ ಪಂಚಾಯತ್‌‌ ರಾಜ್ ಇಲಾಖೆಯ ಸಹಯೋಗದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಜಿಲೆನ್ಸ್ ಸಮಿತಿ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಮೂರು ಮಂದಿಯ ವಿಜಿಲೆನ್ಸ್ ಸಮಿತಿ ಕಾರ್ಯಾಚರಿಸುತ್ತಿತ್ತು. ಆದರೆ ನಾಗರಿಕರಿಗೆ ಪಡಿತರ ವಿತರಣೆಯಲ್ಲಿ ತೊಂದರೆ ಆಗಬಾರದು ಎಂಬ ದಿಸೆಯಿಂದ ಈ ಬದಲಾವಣೆ ತರಲಾಗುತ್ತಿದೆ ಎಂದರು.

ಇನ್ನು ಮುಂದೆ ಪಡಿತರ ಅಂಗಡಿ ಹೊಂದಿರುವ ಆಯಾ ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು ಈ ವಿಜಿಲೆನ್ಸ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇವರಲ್ಲದೆ ನ್ಯಾಯಬೆಲೆ ಅಂಗಡಿಯ ಸದಸ್ಯರು, ಎಸ್ಸಿ-ಎಸ್ಟಿ ಅಥವಾ ಸಾಮಾನ್ಯ ವರ್ಗದಿಂದ ಸೇರಿ ಇಬ್ಬರು ಸದಸ್ಯರನ್ನು ಆಹಾರ ಇಲಾಖೆ ನೇಮಕ ಮಾಡುತ್ತದೆ. ಗ್ರಾ.ಪಂ. ಪಿಡಿಒ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಒಟ್ಟು ನಾಲ್ಕು ಮಂದಿ ಸದಸ್ಯರ ವಿಜಿಲೆನ್ಸ್ ಸಮಿತಿ ಇರಲಿದೆ ಎಂದರು.

ಸಮಿತಿಯ ಸದಸ್ಯರ ಅಧಿಕಾರ ಅವಧಿ ಮೂರು ವರ್ಷ. ಈ ಸಮಿತಿಯು ಪ್ರತಿ ತಿಂಗಳ ಏಳನೇ ತಾರೀಖಿಗೆ ಪಡಿತರ ಚೀಟಿದಾರರ ಸಭೆಯನ್ನು ನಡೆಸಬೇಕು. ನ್ಯಾಯಬೆಲೆ ಅಂಗಡಿಗೆ ಹೋದಾಗ ಬಯೋ ಮೆಟ್ರಿಕ್ ಸಾಧ್ಯವಾಗದಿದ್ದರೆ ಆಹಾರ ತನಿಖಾಧಿಕಾರಿ ಅಥವಾ ಅಧಿಕಾರಿಗಳ ಬದಲು ಈ ಸಮಿತಿಯ ಸದಸ್ಯರೊಬ್ಬರ ಬಳಿಗೆ ಭಾನುವಾರ ತೆರಳಿ ವಿಜಿಲೆನ್ಸ್ ಸಮಿತಿಯ ಮುಂದೆ ಬಯೋಮೆಟ್ರಿಕ್ ನೀಡಬೇಕು. ಇದಕ್ಕೆ ಸದಸ್ಯರಿಗೆ ಒಂದು ದಿನದ ಪ್ರೋತ್ಸಾಹಧನ ನೀಡಲಾಗುವುದು. ನಗರದಲ್ಲಿ ಈಗಾಗಲೇ ವಿಜಿಲೆನ್ಸ್ ಸಮಿತಿ ಇದೆ ಎಂದರು.

ನ್ಯಾಯಬೆಲೆ ಅಂಗಡಿಗೆ ಗೋಡೌನ್‌ನಿಂದ ಪಡಿತರ ಪೂರೈಕೆ ವೇಳೆ ಇನ್ನು ಮುಂದೆ ಚಲನ್‌ನಲ್ಲಿ ವಿಜಿಲೆನ್ಸ್ ಸಮಿತಿಯು ಸಹಿ ಹಾಕಬೇಕು. ಪ್ರತಿ ವರ್ಷ ಆಗಸ್ಟ್ ತಿಂಗಳನ್ನು ಆಹಾರ ತಿಂಗಳು ಎಂದು ಪರಿಗಣಿಸಲಾಗುವುದು. ಈ ತಿಂಗಳಲ್ಲಿ ವಿಶೇಷವಾಗಿ ಪಡಿತರ ಚೀಟಿಗೆ ಸೇರ್ಪಡೆ, 12 ತಿಂಗಳು ಕಾಲ ಪಡಿತರ ಸಾಮಗ್ರಿ ಪಡೆದುಕೊಳ್ಳದಿದ್ದರೆ ಅಂತಹವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದುಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಇದೇ ವೇಳೆ ಪಾಕಿಸ್ತಾನಕ್ಕೆ ತೆರಳಿ ಚಹಾ ಸೇವಿಸಿದ ಪ್ರಧಾನಿಗೆ ಪಾಕ್ ಕುಕೃತ್ಯದಿಂದ ಮಡಿದ ಭಾರತೀಯ ಯೋಧರ ಕುಟುಂಬಕ್ಕೆ ತೆರಳಿ ಸಾಂತ್ವನ ಹೇಳಲು ಯಾಕೆ ಸಾಧ್ಯವಾಗುವುದಿಲ್ಲ ಎಂದು ಆಹಾರ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English