ಮಂಗಳೂರು: ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಆಕೆಯ ಸಹೋದರಿಯೇ ಕರೆದೊಯ್ಯುವ ಮೂಲಕ ಆಕೆಯನ್ನು ಬಿಡುಗಡೆ ಮಾಡಿದಂತಾಗಿದೆ.
ಬಂಟ್ವಾಳದ ಸಜೀಪಮೂಡ ಗ್ರಾಮದ ಬೇಂಕ್ಯ ನಿವಾಸಿ ವೆಂಕಪ್ಪ ಪೂಜಾರಿ ಹಾಗೂ ಸುಮತಿ ದಂಪತಿಯ ಪುತ್ರಿ ಮಲ್ಲಿಕಾ (35) ಗೃಹಬಂಧನದಲ್ಲಿದ್ದರು. ಹಲವು ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಮಲ್ಲಿಕಾಗೆ ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರ. ಮೂವರು ಸಹೋದರಿಯರಿಗೂ ಮದುವೆಯಾಗಿದೆ. ಕೆಲ ವರ್ಷಗಳ ಹಿಂದೆ ಈಕೆಯ ತಂದೆ ಹಾಗೂ ಸಹೋದರ ಮೃತಪಟ್ಟ ಮೇಲೆ ತಾಯಿ ಮತ್ತು ಮಲ್ಲಿಕಾ ಇಬ್ಬರೇ ಮನೆಯಲ್ಲಿರುತ್ತಿದ್ದರು.
ಎರಡು ದಿನಗಳ ಹಿಂದೆ ತಾಯಿ ಹಿರಿಯ ಸಹೋದರಿಯ ಮನೆಗೆ ತೆರಳಿದ್ದ ವೇಳೆ ಮಲ್ಲಿಕಾರನ್ನು ಮನೆಯೊಳಗೇ ಕೂಡಿಹಾಕಲಾಗಿತ್ತು. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಪೊಲೀಸರೊಂದಿಗೆ ಮನೆಗೆ ಬಂದರು. ಈಕೆಯ ಸಹೋದರಿಯನ್ನೂ ಕರೆಸಲಾಯಿತು. ಅವರೇ ಮಲ್ಲಿಕಾರನ್ನು ಮನೆಗೆ ಕರೆದುಕೊಂಡು ಹೋದರು.
ಯುವತಿಯನ್ನು ಗೃಹಬಂಧನದಲ್ಲಿಡಲಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಯುವತಿ ಸಹೋದರಿ ಮನೆಗೆ ಬಂದು ಆಕೆಯನ್ನು ತನ್ನ ಮನೆಗೆ ಕರೆದೊಯ್ಯುವುದಾಗಿ ಹೇಳಿದ್ದು, ಬಳಿಕ ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರಕ್ಕೆ ಸೇರಿಸಲಾಗಿದೆ. ಯುವತಿಯನ್ನು ಗೃಹಬಂಧನದಲ್ಲಿಟ್ಟಿಲ್ಲ, ಆಕೆಯನ್ನು ತಾಯಿ ನೋಡಿಕೊಳ್ಳುತ್ತಿದ್ದರು, ಎರಡು ದಿನದ ಹಿಂದೆಯಷ್ಟೇ ತಾಯಿ ಹಿರಿಯ ಸಹೋದರಿಯ ಮನೆಗೆ ಬಂದಿದ್ದಾರೆ ಎಂದು ತನಿಖೆ ನಡೆಸಿದ ಅಧಿಕಾರಿಗಳಿಗೆ ಮನೆಮಂದಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English