ಮಂಗಳೂರು: ಕಾಯಿಲೆಯನ್ನು ಮೈಗಂಟಿಸಿಕೊಂಡು ವರ್ಷಗಳ ಕಾಲ ಹಾಸಿಗೆಯಲ್ಲಿಯೇ ಇದ್ದ ಯುವಕನೊಬ್ಬ ಯೆನಪೋಯ ಆಸ್ಪತ್ರೆಯ ವೈದ್ಯರಿಂದ ಎದ್ದು ನಿಲ್ಲುವಂತಾಗಿದೆ.
ಪುತ್ತೂರಿನ ಕಡಬದ ಕೃಷಿ ಕುಟುಂಬದವರಾದ ಜಯಂತ್ (28), ಪಿಯು ಓದುತ್ತಿದ್ದ ವೇಳೆ ವಿರಳಾತಿ ವಿರಳ ಮಂದಿಯನ್ನು ಕಾಡುವ ಆಂಕಿಲೂಸಿಂಗ್ ಸ್ಪಾಂಡಿಲಿಟಿಸ್ ಕಾಯಿಲೆಗೆ ಒಳಗಾದರು. ಅವರ ಬೆನ್ನುಹುರಿ ಮತ್ತು ಅದರ ಕೆಳಗಿನ ಮೂಳೆ ಸಂದಿಯ ಮೇಲೆ ಸರಿಪಡಿಸಲಾಗದ ಹಾನಿ ಉಂಟಾಗಿತ್ತು. ಹನ್ನೆರಡು ವರ್ಷಗಳಿಂದ ಈ ಕಾಯಿಲೆಯಿಂದ ತತ್ತರಿಸಿದ ಅವರು, ಕ್ರಮೇಣ ಸೊಂಟದ ಕೆಳಗೆ ಸಂಪೂರ್ಣ ಬಲಕಳೆದುಕೊಂಡರು.
ಕಳೆದ ಎಂಟು ವರ್ಷಗಳಿಂದ ಹಾಸಿಗೆ ಹಿಡಿದ ಜಯಂತ್ ಅವರನ್ನು ಮನೆಯವರು ಒಮ್ಮೆ ಯೆನಪೊಯ ಆಸ್ಪತ್ರೆಯ ಮೂಳೆತಜ್ಞ ಡಾ. ದೀಪಕ್ ರೈಯವರಲ್ಲಿ ಕರೆತಂದರು. ಅವರು ಅಲ್ಲಿಗೆ ಬರುವಾಗ ಅವರ ಸೊಂಟದ ಜಾಯಿಂಟ್‌ಗಳು ನಡೆದಾಡಲು ಸಾಧ್ಯವಾಗದೆ ಸೆಟೆದುಕೊಂಡಿದ್ದವು. ಪೃಷ್ಠದ ಎರಡೂ ಕಡೆಗಳಲ್ಲಿ ಅಸಾಧ್ಯವಾದ ನೋವಿತ್ತು. ತಮ್ಮೆಲ್ಲಾ ದೈನಂದಿನ ಕ್ರಿಯೆಗಳಿಗೆ ಮನೆಯವರನ್ನೇ ಅವಲಂಬಿಸಬೇಕಿತ್ತು. ಅವರು ಮತ್ತೆ ನಡೆದಾಡಬೇಕಾದರೆ ಅವರ ಎರಡೂ ಪೃಷ್ಠದ ಮೂಳೆಗಳ ಬದಲಾವಣೆ ಅನಿವಾರ್ಯವಾಗಿತ್ತು. ನಂತರ ಡಾ. ರೈ ತಡ ಮಾಡಲಿಲ್ಲ. ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಶಸ್ತ್ರಚಿಕಿತ್ಸೆ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಶಸ್ತ್ರಚಿಕಿತ್ಸೆಯ ಬಳಿಕ ದೇಹದ ತೂಕದ ಮೇಲೆ ನಿಯಂತ್ರಣ, ಅಧಿಕ ಕ್ಯಾಲರಿಯುಕ್ತ ಆಹಾರ ವರ್ಜ್ಯ, ಮೂಳೆಗಳನ್ನು ಸುಧಾರಿಸುವ ಲಘು ವ್ಯಾಯಾಮಗಳನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದರು.
ಜಯಂತ್ ಅವರಿಗೆ ಶಸ್ತ್ರಚಿಕಿತ್ಸೆಯ ಬಳಿಕ ಮೂರು ವಾರಗಳವರೆಗೆ ಲಘು ಚಲನೆಯ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಲಾಯಿತು. ಕುಳಿತು ಎದ್ದು ನಿಲ್ಲುವ, ಹಾಸಿಗೆಯಲ್ಲಿಯೇ ಮೊಣಕಾಲು, ಸೊಂಟ, ಪಾದ ಮತ್ತು ಹಿಮ್ಮಡಿ ವ್ಯಾಯಾಮ ಮಾಡಿಸಿ ಕೃತಕ ಭಾಗಗಳು ದೇಹದ ಮೂಳೆಗಳೊಂದಿಗೆ ಸಹಕರಿಸುವಂತೆ ಮಾಡಲಾಯಿತು. ನಾಲ್ಕೇ ವಾರದಲ್ಲಿ ಮೊದಲಿನಂತೆ ಎದ್ದು ನಿಂತ ಜಯಂತ್, ಅತ್ತಿಂದಿತ್ತ ಓಡಾಡುವ ಸ್ಥಿತಿಗೆ ತಲುಪಿದ್ದಾರೆ.
ಅತ್ಯಂತ ಕಡಿಮೆ ಜನರನ್ನು ಕಾಡುವ ಆಂಕಿಲೂಸಿಂಗ್ ಸ್ಪಾಂಡಿಲಿಟಿಸ್ ಶೇ. 0.1ರಿಂದ 0.5ರಷ್ಟು ಜನರಲ್ಲಿ ಮಾತ್ರ ಕಾಣ ಸಿಗುತ್ತದೆ. ಇದು ವರ್ಣತಂತುವಿಗೆ ಸಂಬಂಧಪಟ್ಟ ಸಮಸ್ಯೆಯಾಗಿದ್ದು, ಸುಮಾರು 20ರ ಆಸುಪಾಸಿನ ಯುವಕರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ರಕ್ತದಲ್ಲಿ ಹೆಚ್ಎಲ್‌ಬಿಎಬಿ 27 ವೈರಾಣು ಹೊಂದಿರುವ ರೋಗಿಗಳಲ್ಲಿಯೂ ಇದು ಕಂಡುಬರುತ್ತದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭ ಮಾತನಾಡಿದ ಜಯಂತ್, `ನನ್ನ ಸ್ನೇಹಿತರು ತಮ್ಮ ಬದುಕು ಕಟ್ಟಿಕೊಳ್ಳುವ ಸಂದರ್ಭ ನಾನು ಏಳಲಾರದೆ ಹಾಸಿಗೆಯಲ್ಲಿದ್ದೆ. ಹನ್ನೆರಡು ವರ್ಷಗಳ ಹಿಂದೆ ಕಾಡಿದ ಸಣ್ಣ ನೋವು ಕ್ರಮೇಣ ವಿಪರೀತವಾಗತೊಡಗಿತು. ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದ ನಾವು ಆರಂಭದಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರಾಕರಿಸಿದ್ದರಿಂದ ಸಮಸ್ಯೆ ಬಿಗಡಾಯಿಸಿತು. ಎಲ್ಲದ್ದಕ್ಕೂ ನನ್ನ ಹೆತ್ತವರನ್ನು ಆಶ್ರಯಿಸಬೇಕಾಗಿದ್ದ ನನಗೆ ಈ ಶಸ್ತ್ರಚಿಕಿತ್ಸೆಯಿಂದಾದ ಬದಲಾವಣೆ ಅತೀವ ಖುಷಿ ತಂದಿದೆ’ ಎಂದರು.
ಪುತ್ತೂರು ತಾಲೂಕಿನ ಸುತ್ತಮುತ್ತ ಎಂಡೋಸಲ್ಫಾನ್ ಸಂತ್ರಸ್ತರನ್ನೊಳಗೊಂಡ ಗ್ರಾಮಗಳಿವೆ. ಇದರಿಂದಲೇ ಜಯಂತ್ ಅವರಿಗೆ ಆಂಕಿಲೂಸಿಂಗ್ ಸ್ಪಾಂಡಿಲಿಟಿಸ್ ಬಂದಿರಬಹುದೆಂದು ಡಾ. ದೀಪಕ್ ರೈ ಅಂದಾಜಿಸಿದ್ದಾರೆ. ಸರಕಾರ ಕೂಡಾ ಜಯಂತ್ ಅವರನ್ನು ಎಂಡೋ ಸಂತ್ರಸ್ತರೆಂದು ಗುರುತಿನ ಚೀಟಿ ನೀಡಿದೆ. ತಿಂಗಳ ಮಾಸಾಶನ ಕೂಡಾ ನೀಡಿದೆ. ಇದೀಗ ಶಸ್ತ್ರಚಿಕಿತ್ಸೆಗೆ ಒಂದೂವರೆ ಲಕ್ಷ ರೂ. ವೆಚ್ಚ ತಗಲಿದೆ. ಸರಕಾರ ಈ ವೆಚ್ಚವನ್ನು ಭರಿಸಿದ್ದಲ್ಲಿ ಕುಟುಂಬಕ್ಕೆ ಆಧಾರವಾಗುತ್ತದೆ ಎಂದು ಅವರು ಹೇಳಿದ್ದಾರೆ.
Click this button or press Ctrl+G to toggle between Kannada and English