ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೂರನೇ ಹಂತದ ಜನಾಶೀರ್ವಾದ ಯಾತ್ರೆ ಕರಾವಳಿ ಭಾಗದಲ್ಲಿ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಲಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ‘ಕಲ್ಲಡ್ಕ ಕೆಟಿ’ಯಿಂದಲೇ ಶುರುವಾಗುವುದು ಬಹುತೇಕ ನಿಶ್ಚಿತವಾಗಿದೆ.
ಈಗಾಗಲೇ ಹೈದರಾಬಾದ್ ಕರ್ನಾ ಟಕದಲ್ಲಿ ಜನಾಶೀರ್ವಾದ ಯಾತ್ರೆಯ ಯಶಸ್ಸಿನಿಂದ ಬೀಗುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು, ಕರಾವಳಿ ಭಾಗದಲ್ಲಿಯೂ ಅದೇ ರೀತಿಯ ಯಾತ್ರೆ ಆಯೋಜಿಸಲು ಭರದ ಸಿದ್ಧತೆ ನಡೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಮನ ಸೆಳೆದಿದ್ದ ಕಲ್ಲಡ್ಕದಿಂದಲೇ ರಾಹುಲ್ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಾಯಕರು ಯೋಜನೆ ರೂಪಿಸುತ್ತಿದ್ದಾರೆ. ‘ಕಲ್ಲಡ್ಕ ಕೆಟಿ’ ರುಚಿ ನೋಡುವ ಮೂಲಕ ರಾಹುಲ್ ಅವರ ಯಾತ್ರೆ ಶುರುವಾಗುವ ಸಾಧ್ಯತೆ ಇದ್ದು, ಉಸ್ತುವಾರಿ ಸಚಿವ ರಮಾನಾಥ ರೈ ಅವರ ಕ್ಷೇತ್ರದಿಂದಲೇ ಜನಾಶೀರ್ವಾದ ಯಾತ್ರೆಗೆ ಚಾಲನೆ ದೊರೆಯಲಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಮಾರ್ಚ್ 7 ರಿಂದ 10ರವರೆಗೆ ಅಥವಾ ಮಾರ್ಚ್ 12 ರಿಂದ 15ರವರೆಗೆ ಯಾತ್ರೆ ನಡೆಯಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮೂಲಕ ಯಾತ್ರೆ ಹಾದು ಹೋಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜಿಲ್ಲೆಯ ಬಂಟ್ವಾಳ, ಮಂಗಳೂರು, ಮಂಗಳೂರು ದಕ್ಷಿಣ, ಮೂಡುಬಿದಿರೆ, ಮಂಗಳೂರು ಉತ್ತರ, ಪುತ್ತೂರು, ಬೆಳ್ತಂಗಡಿ, ಸುಳ್ಯ ವಿಧಾಸಭಾ ಕ್ಷೇತ್ರಗಳಲ್ಲಿ ರಾಹುಲ್ ಸಂಚರಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಭಾಗದ ಹಿರಿಯ ಕಾಂಗ್ರೆಸ್ಸಿಗರಾದ ಆಸ್ಕರ್ ಫರ್ನಾಂಡಿಸ್, ಉಭಯ ಜಿಲ್ಲೆಗಳ ಸಚಿವರು, ಶಾಸಕರು ರಾಹುಲ್ ಗಾಂಧಿ ಅವರಿಗೆ ಸಾಥ್ ನೀಡಲಿದ್ದಾರೆ.
ರಾಹುಲ್ ಗಾಂಧಿ ಪ್ರವಾಸದ ಹಿನ್ನೆಲೆಯಲ್ಲಿ ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸಲಾಗುತ್ತಿದೆ. ಇದೇ 28 ರವರೆಗೆ ಉಭಯ ಜಿಲ್ಲೆಗಳಲ್ಲಿ ಸಭೆ ನಡೆಯಲಿದ್ದು, ಜನಾಶೀರ್ವಾದ ಯಾತ್ರೆಯ ಕುರಿತು ಸಮಾಲೋಚನೆ ಮಾಡಲಾಗುತ್ತಿದೆ.
ರಾಯಚೂರು ಜಿಲ್ಲೆಯ ರಸ್ತೆ ಬದಿಯ ಹೋಟೆಲ್‌ನಲ್ಲಿ ಮಂಡಕ್ಕಿ, ಭಜ್ಜಿ ಸೇವಿಸುವ ಮೂಲಕ ಭಾರಿ ಸುದ್ದಿ ಮಾಡಿದ್ದ ರಾಹುಲ್ ಗಾಂಧಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿಯೂ ಅಂಥದ್ದೇ ಕಾರ್ಯಕ್ರಮ ನಡೆಸುವ ಸಾಧ್ಯತೆ ಇದೆ.
ಜಿಲ್ಲೆಯ ಪ್ರಮುಖ ತಿಂಡಿಗಳಾದ ಗೋಳಿ ಬಜೆ, ಪತ್ರೊಡೆ, ಕಲ್ಲಡ್ಕ ಕೆಟಿ ಮುಂತಾದ ಕರಾವಳಿಯ ತಿನಿಸುಗಳನ್ನು ರಾಹುಲ್ ಅವರಿಗೆ ಪರಿಚಯಿಸಲು ಜಿಲ್ಲೆಯ ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ. ಇದಕ್ಕಾಗಿ ಕೆಲವೊಂದು ಹೋಟೆಲ್‌ಗಳಲ್ಲಿ ಈಗಾಗಲೇ ಮಾಹಿತಿ ಪಡೆಯಲಾಗುತ್ತಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
ಕರಾವಳಿ ಭಾಗದಲ್ಲಿಯೂ ದೇವಾಲಯ, ಮಸೀದಿ, ಚರ್ಚ್‌ಗಳಿಗೆ ಭೇಟಿ ನೀಡುವ ಕಾರ್ಯಕ್ರಮದ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಪ್ರಮುಖವಾಗಿ ಧರ್ಮಸ್ಥಳ, ಸುಬ್ರ ಹ್ಮಣ್ಯ ದೇವಸ್ಥಾನ, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ, ಉಡುಪಿ ಶ್ರೀಕೃಷ್ಣ ಮಠ, ಉಳ್ಳಾಲದ ಸೈಯ್ಯದ ಮದನಿ ದರ್ಗಾ, ನಗರದ ಚರ್ಚ್‌ಗಳಿಗೆ ರಾಹುಲ್ ಭೇಟಿ ನೀಡಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
‘ರಾಹುಲ್ ಗಾಂಧಿ ಅವರು ಮಾರ್ಚ್ ಮೊದಲ ವಾರದಲ್ಲಿ ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ಜನಾಶೀರ್ವಾದ ಯಾತ್ರೆ ನಡೆಸಲಿದ್ದು, ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ರಾಹುಲ್ ಗಾಂಧಿ ಎಲ್ಲೆಲ್ಲೆ ಭೇಟಿ ನೀಡಲಿದ್ದಾರೆ ಎಂಬುದರ ಬಗ್ಗೆಯೂ ವಿಸ್ತೃತ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಪಕ್ಷದ ಜಿಲ್ಲಾ ಉಸ್ತುವಾರಿಯೂ ಆಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ. ವೆಂಕಟೇಶ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English