ಮಂಗಳೂರು: ಅಕ್ರಮವಾಗಿ ಮದ್ಯಸಾರ ಸಂಗ್ರಹಿಸಿ ಇಟ್ಟಿದ್ದ ಸ್ಥಳಕ್ಕೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳ ತಂಡ, ಸುಮಾರು 7805 ಲೀಟರ್ ಮದ್ಯಸಾರ ಹಾಗೂ 2 ವಾಹನಗಳನ್ನು ವಶಪಡಿಸಿಕೊಂಡಿದೆ.
ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತೆ ಶೈಲಜಾ ಎ. ಕೋಟೆಯವರ ತಂಡ ನಗರದ ಬಜಾಲ್ ಜೆ.ಎಂ. ರಸ್ತೆಯ ಮನೆಯೊಂದಕ್ಕೆ ದಾಳಿ ನಡೆಸಿದೆ. 35 ಲೀಟರ್ ಸಾಮರ್ಥ್ಯದ 113 ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ಸಂಗ್ರಹಿಸಿದ್ದ 3,955 ಲೀಟರ್ ಮದ್ಯಸಾರ, ಅಲ್ಲಿಯೇ ಇದ್ದ ಈಚರ್ ವಾಹನದಲ್ಲಿದ್ದ 35 ಲೀಟರ್ ಸಾಮರ್ಥ್ಯದ 110 ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ 3,850 ಲೀಟರ್ ಮದ್ಯಸಾರ ಸೇರಿದಂತೆ ಒಟ್ಟು 7,805 ಲೀಟರ್ ಮದ್ಯಸಾರ ಮತ್ತು ಸಾಗಾಣಿಕೆಗೆ ಬಳಸಿದ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಅಲ್ಲದೇ, ಸ್ಥಳದಲ್ಲಿ ಮೀನು ದಾಸ್ತಾನಿಡಲು ಬಳಸುವ 247 ಖಾಲಿ ಪ್ಲಾಸ್ಟಿಕ್ ಕ್ರೇಟ್ ಹಾಗೂ ಆರೋಪಿ ಜೋಸ್ ಸೆಬೆಸ್ಟಿನ್ ಎಂಬವರನ್ನು ಸ್ಥಳದಲ್ಲಿಯೇ ದಸ್ತಗಿರಿ ಮಾಡಲಾಗಿದೆ. ವಶಪಡಿಸಿಕೊಂಡ ಮದ್ಯಸಾರ ಹಾಗೂ ಸಾಗಾಟಕ್ಕೆ ಬಳಸಿದ ವಾಹನಗಳ ಅಂದಾಜು ಮೌಲ್ಯ 11 ಲಕ್ಷ ರೂ.ಗಳಾಗಿದೆ. ಈ ಮದ್ಯಸಾರವನ್ನು ಕೇರಳಕ್ಕೆ ಸಾಗಿಸುವುದಾಗಿ ಆರೋಪಿಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸಲಾಗುತ್ತಿದೆ.
Click this button or press Ctrl+G to toggle between Kannada and English