ಮಾಣಿಲ: ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬುಧವಾರ ರಾತ್ರಿ 12.30 ರಿಂದ ಶ್ರೀ ನಾಗ ಸಾನ್ನಿಧ್ಯದಲ್ಲಿ ಹಾಲಿಟ್ಟು ಸೇವೆಯಾದ , ಬಳಿಕ ನಾಗಪಾತ್ರಿ ಪೆರ್ಡೂರು ಶ್ರೀ ಕ್ಷೇತ್ರ ಕಲ್ಲಂಗಲದ ವೇದಮೂರ್ತಿ ರಾಮಚಂದ್ರ ಕುಂಜಿತ್ತಾಯರ ನೇತೃತ್ವದಲ್ಲಿ ಶ್ರೀ ಮುದ್ದೂರು ಕೃಷ್ಣಪ್ರಸಾದ ವೈದ್ಯ ಮತ್ತು ಶ್ರೀ ಬಾಲಕೃಷ್ಣ ವೈದ್ಯ, ಶ್ರೀ ನಟರಾಜ ವೈದ್ಯ ಬಳಗದವರಿಂದ ಸಕಲ ವೈಭವದಿಂದ ಅಷ್ಟ ಪವಿತ್ರ ನಾಗಮಂಡಲ ಸೇವೆ ನಡೆಯಿತು.
ಕ್ಷೇತ್ರದಲ್ಲಿ ಬೆಳಿಗ್ಗೆ 8 ಕ್ಕೆ ಆರಂಭವಾದ ವಿವಿಧ ವೈದಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಕಟೀಲು ಕ್ಷೇತ್ರದ ವೇದಮೂರ್ತಿ ಶ್ರೀ ಕಮಲಾದೇವಿಪ್ರಸಾದ ಆಸ್ರಣ್ಣರ ಪೌರೋಹಿತ್ವದಲ್ಲಿ ಪುಣ್ಯಾಹ, ನಾಗದೇವರಿಗೆ ಸಾನ್ನಿಧ್ಯ ಕಲಶಾಧಿವಾಸ, ಅಧಿವಾಸ ಹೋಮ ಮತ್ತು ವಿಠೋಭ ರುಕ್ಮಯಿ ದೇವರಿಗೆ ಸಾನ್ನಿಧ್ಯ ಕಲಶಾಭಿಷೇಕ, ಗಣಹೋಮ, ಪವಮಾನ, ಕೂಷ್ಮಾಂಡ, ತಿಲ ಹೋಮಗಳ ಬ್ರಹ್ಮಚಾರಿ ಆರಾಧನೆ ನಡೆಯಿತು. ಮಧ್ಯಾಹ್ನ ಪಲ್ಲಪೂಜೆ, ಶ್ರೀ ದೇವರಿಗೆ ಪ್ರಸನ್ನ ಮಹಾಪೂಜೆ, ಪ್ರಸಾದ ವಿತರಣೆ, ಬ್ರಾಹ್ಮಣ ಸುವಾಸಿನಿ ಸಂತರ್ಪಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು. ಶ್ರೀ ನಾಗ ಸಾನ್ನಿಧ್ಯದಿಂದ ನಾಗಮಂಡಲ ಮಂಟಪಕ್ಕೆ ಹೂ, ಹಿಂಗಾರ, ಫಲವಸ್ತುಗಳ ಶೋಭಾಯಾತ್ರೆ ನಡೆಯಿತು.
ಸಂಜೆ ಶ್ರೀ ನಿತ್ಯಾನಂದ ವೇದಿಕೆಯಲ್ಲಿ ಧಾರ್ಮಿಕ ಕಾರ್ಯಕ್ರಮವು ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ದೀಪ ಪ್ರಜ್ವಲನ ಮಾಡುವ ಮೂಲಕ ಆರಂಭ ಗೊಂಡಿತು.
ನಾಗದೇವರಿಗೆ ಪೃಕೃತಿ ಎಂದರೆ ಬಹಳ ಪ್ರಿಯವಾದುದು ಆದುದರಿಂದಲೇ ಜಿಲ್ಲೆಯಲ್ಲಿ ನಾಗಮಂಡಲಕ್ಕೆ ಬಹಳ ಮಹತ್ವವಿದೆ. ಸಂಪತ್ತು, ಸಂತತಿ ಜೊತೆಗೆ ನಾವು ಚೆನ್ನಾಗಿರಬೇಕಾದರೆ ನಾಗಾರಾಧನೆ ಅತಿ ಮುಖ್ಯ ಎಂದು ಅವರು ಹೇಳಿದರು.
ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿ ಮನುಷ್ಯನಲ್ಲಿರುವ ಉತ್ತಮ ಗುಣಗಳಲ್ಲಿ ದೇವನ್ನು ಕಾಣಬಹುದು . ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ದುರ್ಗುಣವನ್ನು ದೂರಮಾಡಿ ದೇವರನ್ನು ನಮ್ಮ ಹೃದಯದಲ್ಲಿಟ್ಟು ಪೂಜಿಸಬೇಕು ಆಗ ಭಗವಂತನ ಅನುಗ್ರಹ ನಮಗೆ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಭಾರತದಲ್ಲಿ ಗುರುಪರಂಪರೆಗೆ ಮಹತ್ವವಿದೆ. ಮನುಷ್ಯ ತಪ್ಪು ದಾರಿಯಲ್ಲಿ ನಡೆಯುದನ್ನು ಸರಿದಾರಿಗೆ ತರುವ ಶಕ್ತಿ ಗುರುವಿಗಿದೆ ಎಂದು ಹೇಳಿದರು.
ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ ಹಿಂದೂ ಧರ್ಮದ ಸಂಪ್ರದಾಯ, ಆಚಾರ, ವಿಚಾರವನ್ನು ಮಕ್ಕಳಿಗೆ ತಿಳಿಹೇಳುವ ಕಾರ್ಯ ತಾಯಂದಿರಿಂದ ಆಗಬೇಕಾಗಿದೆ. ಹಿರಿಯರು ನೀಡಿದ ಬಳವಳಿಯನ್ನು ಮುಂದುವರೆಸಿಕೊಂಡು ಹೋಗ ವ ಪರಿಪಾಠ ಹೊಸ ಪೀಳಿಗೆಯಲ್ಲಿ ಮೂಡಬೇಕು ಎಂದರು.
ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಪ್ರತಿ ಮನೆಯಲ್ಲಿಯೂ ಭಜನೆ ನಡೆಯಬೇಕು. ಭಜನೆಯ ಶಕ್ತಿ ಅಪಾರ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ಮಾತನಾಡಿ ಎಲ್ಲಾ ಧರ್ಮೀಯರು ಒಂದಾಗಿ ಬಾಳಿದರೆ ಉತ್ತಮ ಸಮಾಜ ನಿರ್ಮಾಣವಾಗಲು ಎಂದು ಹೇಳಿದರು.
ಕಟೀಲು ಕ್ಷೇತ್ರದ ವೇದಮೂರ್ತಿ ಶ್ರೀ ಕಮಲಾದೇವಿ ಆಸ್ರಣ್ಣ, ಮುಂಬಯಿ ಭವಾನಿ ಶಿಪ್ಪಿಂಗ್ ಕಂಪೆನಿ ಪ್ರೈ.ಲಿ. ಕುಸುಮೋಧರ ಡಿ. ಶೆಟ್ಟಿ ಚೆಲ್ಲಡ್ಕ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ರಾಷ್ಟ್ರೀಯ ಯೋಜನಾ ಆಯೋಗದ ಸ್ಥಾಯಿ ಸಮಿತಿ ಸದಸ್ಯ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ಶ್ರೀಧಾಮ ಸೇವಾ ಸಮಿತಿಯ ಬೆಂಗಳೂರು ಅಧ್ಯಕ್ಷ ಮಹೇಶ್ ಬೆಂಗಳೂರು, ತುಳುವರೆ ಚಾವಡಿ ಬೆಂಗಳೂರು ಅಧ್ಯಕ್ಷ ಉಮೇಶ್ ಐ ಬೊಮ್ಮಸಂದ್ರ, ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಪುಣೆ, ರಾಜೇಶ್ ಪಾಟೀಲ್ ಥಾಣೆ, ಎ. ಆರ್. ರೆಡ್ಡಿ, ಶಿವಚಂದ್ರ ಶೆಟ್ಟಿ, ಅಣ್ಣಿ ಸಿ.ಶೆಟ್ಟಿ, ರಮೇಶ್ ಜಾಲಹಳ್ಳಿ ಬೆಂಗಳೂರು, ಅರವಿಂದ ರೈ ಪುಣೆ, ಕಿಶೋರ್ ತಿರುಪತಿ, ತಿಮ್ಮಪ್ಪ ಗೌಡ ಬೆಂಗಳೂರು, ದೇವಪ್ಪ ಕುಲಾಲ್ ಪಂಚಿಕಲ್ಲು, ನಾಸಿಕ್‌ನ ರಮಾನಾಂದ ಬಂಗೇರ, ಗೋವಿಂದ ಶೆಟ್ಟಿ, ಎ. ಎನ್. ಕುಲಾಲ್ ಬೆಂಗಳೂರು, ಅತುಲ್ ಒಜಾ, ರಾವಲ್ಕರ್ ನವೋದಯ ಮೇಲ್ವಿಚಾರಕ ಉದಯ ಪೆರುವಾಯಿ, ಮಾಣಿಲ ಗ್ರಾ.ಪಂ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಅಳಕೆ ಶ್ರೀ ನಾಗಬೃಹ್ಮ ಸೇವಾಸಮಿತಿ ಅಧ್ಯಕ್ಷ ರವೀಂದ್ರನಾಥ ರೈ, ಮಾಣಿಲ ಶ್ರೀಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಟೀಲು ಶ್ರೀ ದೇವಿ ಚರಿತೆ ಧ್ವನಿಸುರುಳಿಯನ್ನು ಸ್ವಾಮೀಜಿಗಳು ಬಿಡುಗಡೆ ಮಾಡಿದರು.
ನಾಗಮಂಡಲ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚಿಲ್ಲಡ್ಕ ಸ್ವಾಗತಿಸಿದರು. ಗೌರವಸಲಹೆಗಾರ ತಾರಾನಾಥ ಕೊಟ್ಟಾರಿ ಫರಂಗಿಪೇಟೆ ಪ್ರಾಸ್ತಾವಿಕ ಮಾತಗಳನ್ನಾಡಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಮಂಜು ವಿಟ್ಲ ಸನ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಉಮೇಶ್ ಪಿ. ಕೆ. ನಾಗಲಚ್ಚಿಲು ವಂದಿಸಿದರು. ಸಾಂಸ್ಕೃತಿಕ ಸಮಿತಿಯ ಎಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು. ಹೊರೆಕಾಣಿಕೆ ಸಮಿತಿ ಸಂಚಾಲಕ ಮಚ್ಚೇಂದ್ರ ಸಾಲಿಯಾನ್, ಆರ್ಥಿಕ ಸಮಿತಿ ಸಂಚಾಲಕ ದಾಮೋದರ ಬಿ. ಎಂ. ಮಾರ್ನಬೈಲು ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಭವಾನಿ ಕ್ರಿಯೇಷನ್ಸ್‌ರವರ ಕಟೀಲು ಶ್ರೀ ದೇವಿ ಚರಿತೆ ಅರ್ಪಿಸುವ ರಶ್ಮೀ ಚಿದಾನಂದರವರ ನೃತ್ಯ ಭಾರತಿ ಕದ್ರಿ, ಮಂಗಳೂರು ಇವರಿಂದ ’ಕೃಷ್ಣಾಂತರಂಗ’ ನೃತ್ಯ ರೂಪಕ ಹಾಗೂ ನೃತ್ಯ ವೈವಿಧ್ಯ ನಡೆಯಿತು. ಗಾನಶ್ರೀ ಪುತ್ತೂರು ಕಿರಣ್ ಕುಮಾರ್ ಇವರ ಶಿಷ್ಯೆ ಕು| ದಿವ್ಯನಿಧಿ ರೈ ಇವರಿಂದ ಸಂಗೀತ ಸೌರಭ ನಡೆಯಿತು. ಬಳಿಕ ಶ್ರೀ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ವಿಶಿಷ್ಟ ವಿಭಿನ್ನ ಶೈಲಿಯ ಹಾಸ್ಯ, ಹಾಡುಗಳ ಅಪೂರ್ವ ಸಂಗಮದ ಕಾರ್ಯಕ್ರಮ ನಡೆಯಿತು. ಸಂಜೆ ಸನಾತನ ನಾಟ್ಯಾಲಯ ಮಂಗಳೂರು ಇವರು ಪ್ರಸ್ತುತಪಡಿಸುವ ಸನಾತನ ರಾಷ್ಟ್ರಾಂಜಲಿ ಕಾರ್ಯಕ್ರಮ ನಡೆಯಿತು.
Click this button or press Ctrl+G to toggle between Kannada and English