ಮಂಗಳೂರು: ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಮೂಡುಬಿದಿರೆ, ಕೈಕಂಬ, ಗುರುಪುರ, ವಾಮಂಜೂರು ಹಾಗೂ ಸುತ್ತಮುತ್ತಲ ಪ್ರದೇಶದ ದೇವಸ್ಥಾನಗಳ ಮೂಲಕ ಗುರುವಾರ ದೇವಳಕ್ಕೆ ಹಸಿರುವಾಣಿ ಹೊರೆಕಾಣಿಕೆಯ ಹೊಳೆಯಂತೆಯೇ ಹರಿದು ಬಂತು.
ಮೂಡುಬಿದಿರಿ, ಗಂಜಿಮಠ, ಮಿಜಾರು, ಕೈಕಂಬ , ಮಣಿಪಾಲ್, ಬಜ್ಪೆ, ಕಿನ್ನಿಕಂಬಳ, ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಸಂಗ್ರಹವಾದ ಹೊರೆಕಾಣಿಕೆ ವಾಹನಗಳು ವಾಮಂಜೂರಿಗೆ ಸಾಗಿ, ಅಲ್ಲಿಂದ ಮುಂದಕ್ಕೆ ಭವ್ಯ ಮೆರವಣಿಗೆಯಿಂದ ಕುಡುಪಿನತ್ತ ಸಾಗಿದವು.
ವಾಮಂಜೂರಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಹೊರೆಕಾಣಿಕೆ ಮೆರವಣಿಗೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಚಾಲನೆ ನೀಡಿದರು. ಗುರುಪುರ ವೈದ್ಯನಾಥೇಶ್ವರ ದೈವಸ್ಥಾನದ ಆಡಳಿತ ಮೊಕ್ತೇಸರ ಪ್ರಮೋದ್ ರೈ, ಮಂಜುನಾಥ ಭಂಡಾರಿ ಮೂಡುಶೆಡ್ಡೆ , ಜಗದೀಶ ಶೇಣವ, ಶರಣ್ ಪಂಪ್‌ವೆಲ್, ಹೊರೆಕಾಣಿಕೆ ಸಮಿತಿಯ ಪ್ರಮುಖ ಮಹಾಬಲ ಪೂಜಾರಿ ಕಡಂಬೋಡಿ, ಡಾ.ರವಿರಾಜ ಶೆಟ್ಟಿ.
ವಿನೋದ ಮಾಡ, ಓಂ ಪ್ರಕಾಶ್, ಚಂದ್ರಹಾಸ ಶೆಟ್ಟಿ, ವಿಷ್ಣು ಕಾಮತ್, ಭಾಸ್ಕರ ಕೆ. ವಾಸುದೇವ ಭಟ್, ಸುದರ್ಶನ ಕುಡುಪು, ಗಣೇಶದಾಸ್ ಶರವು, ರಾಜೇಶ್ ಕೊಟ್ಟಾರಿ, ಹರಿ ಭಟ್ , ಪುಷ್ಪರಾಜ್ ಪೂಜಾರಿ, ರಾಮ್ ಭಟ್, ಗಣೇಶ್ ಭಟ್, ಹಾಗೂ ಹೊರೆಕಾಣಿಕೆ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಚೆಂಡೆ ನಾದ, ಭಜನೆ ನಿನಾದ ಹಾಗೂ ಭಕ್ತ ಸಮುದಾಯದ ಜೈಕಾರ ಮುಗಿಲು ಮುಟ್ಟುವಂತಿತ್ತು. ಎಲ್ಲೆಡೆ ಭಗವಾಧ್ವಜ ರಾರಾಜಿಸುತ್ತಿತ್ತು. ಕೇಸರಿ ಸೀರೆ ಉಟ್ಟ ನೂರಾರು ಮಹಿಳೆಯರು ಭಜನೆಯೊಂದಿಗೆ ಮುಂದೆ ಸಾಗಿದರೆ ಬೊಂಬೆ ಕುಣಿತ , ತಾಸೆ, ಡೋಲು, ಕೊಂಬು ವಾದ್ಯಗಳ ನಿನಾದ ಭಕ್ತರನ್ನು ಬಾವ ಪರವಶರಾಗುವಂತೆ ಮಾಡಿತು.
ಮಂಗಳೂರು , ಸುರತ್ಕಲ್ ಮೊದಲಾದ ಕಡೆಗಳ ಹೊರೆಕಾಣಿಕೆ ಈಗಾಗಲೇ ದೇವಸ್ಥಾನಕ್ಕೆ ಆಗಮಿಸಿದ್ದು, ಮೂಡುಬಿದಿರೆ ಮತ್ತು ವಾಮಂಜೂರು ಹಾಗೂ ಸುತ್ತಲ ಪ್ರದೇಶದಿಂದ ಗುರುವಾರ ಕೊನೆಯದಾಗ ಹೊರೆಕಾಣಿಕೆ ಕ್ಷೇತ್ರಕ್ಕೆ ಬಂತು. ಲಾರಿಗಳಲ್ಲಿ ಸೀಯಾಳ, ತೆಂಗಿನಕಾಯಿ, ತರಕಾರಿ, ಅಕ್ಕಿ ಮೊದಲಾದ ಧಾನ್ಯ, ಜಿನಸು ಪದಾರ್ಥಗಳು ತುಂಬಿದ್ದವು.
ಮೆರವಣಿಗೆ ಸಾಗಿ ಬಂದ ದಾರಿಯುದ್ದಕ್ಕೂ ಪೊಲೀಸರು ಇತರ ವಾಹನಗಳ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿದರು. ಸಾವಿರಾರು ಭಕ್ತರು ಪಾಲ್ಗೊಂಡಿದ್ದ ಈ ಮೆರವಣಿಗೆ ವಾಮಂಜೂರು ಸರ್ಕಲ್‌ನಿಂದ ಕುಡುಪು ತಲುಪುತ್ತಲೇ, ದೇವಸ್ಥಾನ ಆಡಳಿತ ಮಂಡಳಿಯಿಂದ ಭವ್ಯ ಸ್ವಾಗತ ನೀಡಲಾಯಿತು.
ದೇವಸ್ಥಾನದ ಹೊರೆಕಾಣಿಕೆ ಉಗ್ರಾಣದಲ್ಲಿ ಅಕ್ಕಿ ಮೂಟೆಗಳು, ಬೆಲ್ಲದ ಅಚ್ಚುಗಳು, ಪಾತ್ರೆ ಪರಡಿ, ತರಕಾರಿ, ಹಣ್ಣು… ನಾನಾ ರೀತಿಯ ಅಗತ್ಯ ಸೊತ್ತುಗಳು ತುಂಬಿ ತುಳುಕುತ್ತಿವೆ. ಕುಡುಪು ದೇವಾಲಯದ ಶತಮಾನದ ಬ್ರಹ್ಮಕಲಶೋತ್ಸವಕ್ಕೆ ಭಕ್ತ ಜನರು ಎಲ್ಲ ರೀತಿಯಿಂದಲೂ ಕಾಣಿಕೆ ನೀಡಿರುವುದು ಹೊರೆಕಾಣಿಕೆ ಉಗ್ರಾಣವನ್ನೊಮ್ಮೆ ವೀಕ್ಷಿಸಿದರೆ ವೇದ್ಯವಾಗುತ್ತದೆ.
Click this button or press Ctrl+G to toggle between Kannada and English