ಮಂಗಳೂರು: 20 ಯುವತಿಯರಿಗೆ ಸೈನೆಡ್ ನೀಡಿ ಕೊಲೆ ಮಾಡಿರುವ ಆರೋಪ ಹೊತ್ತಿರುವ ಮೋಹನ್ ಕುಮಾರ್ ನಡೆಸಿದ ಅತ್ಯಾಚಾರ ಮತ್ತು ಕೊಲೆಯ ಐದನೇ ಪ್ರಕರಣ ಸಾಬೀತಾಗಿದ್ದು, ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟಿಸಲಿದೆ.
ಬೆಳ್ತಂಗಡಿಯ ಮೇಗಿನ ಮಾಲಾಡಿ ನಿವಾಸಿ ಯಶೋಧಾ(28)ಎಂಬಾಕೆಯ ಜೊತೆಗೆ ಸಲುಗೆ ಬೆಳೆಸಿಕೊಂಡ ಮೋಹನ್ ಕುಮಾರ್, ತನ್ನ ಹೆಸರನ್ನು ಶಶಿಧರ ಪೂಜಾರಿ ಎಂದು ಹೇಳಿಕೊಂಡಿದ್ದ.
ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಚಿನ್ನಾಭರಣದೊಂದಿಗೆ ತನ್ನ ಜೊತೆಗೆ ಬರುವಂತೆ ತಿಳಿಸಿದ್ದ. ಅದರಂತೆ ಆಕೆ 2009 ಸೆ. 24ರಂದು ಮನೆ ಮಂದಿಗೆ ಹೇಳದೆ ಮೋಹನ್ ಜೊತೆಗೆ ಹಾಸನಕ್ಕೆ ತೆರಳಿದ್ದಳು.
ಹಾಸನದ ವಸತಿ ಗೃಹದಲ್ಲಿ ಕೊಠಡಿ ಮಾಡಿ ಅಲ್ಲಿ ತನ್ನ ಹೆಸರನ್ನು ಶಶಿಧರ ಪೂಜಾರಿ ಎಂದು ಬರೆಸಿದ್ದ. ಅಲ್ಲದೆ, ಆಕೆಯ ಮನೆಗೆ ಫೋನಾಯಿಸಿದ ಮೋಹನ್ ಕುಮಾರ್, ತಾನು ಮತ್ತು ಯಶೋಧ ವಿವಾಹವಾಗಿದ್ದು, ಇನ್ನು ಎರಡು ದಿನ ಕಳೆದು ಬರುವುದಾಗಿ ಹೇಳಿದ್ದ.
ರಾತ್ರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಮೋಹನ್ ಕುಮಾರ್, ಮರುದಿನ ಬೆಳಗ್ಗೆ ಆಕೆಯನ್ನು ಹಾಸನ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದ. ಗರ್ಭ ಧರಿಸಿದರೆ ತೊಂದರೆಯಾಗುತ್ತದೆ ಎಂದು ಹೇಳಿ ಆಕೆಗೆ ಗರ್ಭನಿರೋಧಕ ಮಾತ್ರೆ ಎಂದು ಸೈನೆಡ್ ನೀಡಿದ್ದ. ಅದನ್ನು ಶೌಚಾಲಯದಲ್ಲಿ ಸೇವಿಸುವಂತೆ ಸೂಚಿಸಿದ್ದ. ಅದರಂತೆ ಆಕೆ ಶೌಚಾಲಯದಲ್ಲಿ ತಿಂದು ಅಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಳು.
ಆಕೆ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ಬಳಿಕ ಮೋಹನ್ ಅಲ್ಲಿಂದ ಪರಾರಿಯಾಗಿದ್ದ. ಆಕೆಯ ಕುತ್ತಿಗೆಗೆ ಮಾಂಗಲ್ಯ ಸರವನ್ನು ಧರಿಸುವಂತೆ ಮೋಹನ್ ಕುಮಾರ್ ಹೇಳುತ್ತಿದ್ದುದರಿಂದ ಇದೊಂದು ದಾಂಪತ್ಯ ವಿರಸದ ಪ್ರಕರಣ ಇರಬಹುದು ಎಂದು ಪೊಲೀಸರು ಹೆಚ್ಚಿನ ತನಿಖೆ ನಡೆಸುವ ಗೋಜಿಗೆ ಹೋಗಿರಲಿಲ್ಲ ಎನ್ನಲಾಗಿದೆ.
ಶುಕ್ರವಾರ ಈ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ನ್ಯಾಯಾಧೀಶ ಡಿ.ಜೆ.ಪುಟ್ಟರಂಗ ಸ್ವಾಮಿ, ಅಪರಾಧಕ್ಕೆ ಶಿಕ್ಷೆಯ ಪ್ರಮಾಣವನ್ನು ಶನಿವಾರ ಪ್ರಕಟಿಸುವುದಾಗಿ ತಿಳಿಸಿದರು. ಪಬ್ಲಿಕ್ ಪ್ರಾಸಿಕ್ಯೂಷನ್ ಪರವಾಗಿ ಜುಡಿತ್ ಕ್ರಾಸ್ತಾ ವಾದಿಸಿದ್ದರು.
ಈಗಾಗಲೇ ನಾಲ್ಕು ಪ್ರಕರಣಗಳಲ್ಲಿ ಮೋಹನ್ ಅಪರಾಧಿ ಎಂದು ಸಾಬೀತಾಗಿದೆ. ಈ ಪೈಕಿ ಸುನಂದಾ ಪ್ರಕರಣದಲ್ಲಿ ಆತನಿಗೆ ಮಂಗಳೂರು ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಈ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಲೀಲಾವತಿ ಪ್ರಕರಣದಲ್ಲಿ 5 ವರ್ಷ ಸಜೆ, ಅನಿತಾ ಬರಿಮಾರ್ ಹಾಗೂ ವಿನುತಾ ಕೇಸಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜೀವಾವಧಿ ಶಿಕ್ಷೆಯ ಪ್ರಕರಣಗಳಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ನಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.
ಈ ಮಧ್ಯೆ ತೀರ್ಪನ್ನು ಮರು ವಿಮರ್ಶಿಸುವಂತೆ ಮೋಹನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಇದು ವಿಚಾರಣೆಯಲ್ಲಿದೆ. ಉಳಿದ 15 ಪ್ರಕರಣಗಳ ವಿಚಾರಣೆಗೆ ಬಾಕಿ ಇದೆ.
Click this button or press Ctrl+G to toggle between Kannada and English