‘ಕಲ್ಲಡ್ಕ ಶಾಲೆಗೆ ಅನುದಾನ ನಿಲ್ಲಿಸಿದ್ದಕ್ಕೆ ಮೂಕಾಂಬಿಕೆ ಕೃಪೆಯಿದೆ’

4:46 PM, Wednesday, February 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

ramanath-raiಮಂಗಳೂರು: ಕಲ್ಲಡ್ಕದ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಬರುತ್ತಿದ್ದ ಬಿಸಿಯೂಟದ ಅನುದಾನ ಕಡಿತಗೊಳಿಸಿದ್ದು ನಾನೇ. ಆ ಕೆಲಸ ಮಾಡಿದ್ದಕ್ಕೆ ನನಗೆ ಕೊಲ್ಲೂರು ಮೂಕಾಂಬಿಕೆಯ ಕೃಪೆಯಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಮರ್ತನೆ ಮಾಡಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ. ರೋಡ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಕಲ್ಲಡ್ಕ ಶಾಲೆಗಳಿಗೆ ಅನುದಾನ ಕಡಿತಗೊಳಿಸಿದ ವಿಚಾರವನ್ನು ಸಮರ್ಥಿಸಿಕೊಂಡರು ರಮಾನಾಥ ರೈ. ದೇವಸ್ಥಾನದ ಹುಂಡಿಗೆ ಭಕ್ತರು ಹಾಕುತ್ತಿದ್ದ ಹಣ ಕೇವಲ ಎರಡು ಶಾಲೆಗೆ ಹೋಗುತ್ತಿತ್ತು ಎಂದಿದ್ದಾರೆ.

ತಾಲೂಕಿನಲ್ಲಿ 332 ಅನುದಾನಿತ ಶಾಲೆಗಳಿವೆ. ಆದರೆ ಈ ಎರಡು ಶಾಲೆಗಳಿಗೆ ಮಾತ್ರ ತಿಂಗಳಿಗೆ ನಾಲ್ಕು ಲಕ್ಷ ರುಪಾಯಿ ಸಂದಾಯ ಆಗುತ್ತಿತ್ತು. ಈ ತಾರತಮ್ಯ ಯಾಕೆ ಎಂಬ ಕಾರಣಕ್ಕೆ ಕಡಿತಗೊಳಿಸಿದ್ದೇನೆ ಎಂದು ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು. ಹೀಗೆ ನಾನು ಮಾಡಿದ್ದು ತಪ್ಪಾ ಎಂದು ಪ್ರಶ್ನಿಸಿದ ಅವರು, ಆ ಕೆಲಸ ಮಾಡಿದ್ದಕ್ಕೆ ನನಗೆ ಕೊಲ್ಲೂರು ಮೂಕಾಂಬಿಕೆಯ ಕೃಪೆಯಿದೆ ಎಂದು ಅವರು ಹೇಳಿದರು.

ಮುಂದಿನ ಚುನಾವಣೆ ರಾಮ ಮತ್ತು ಅಲ್ಲಾಹ್ ನಡುವೆ ಎಂದಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತಿಗೆ ಸಮಾವೇಶದಲ್ಲಿ ಸಚಿವ ರಮಾನಾಥ ರೈ ತಿರುಗೇಟು ನೀಡಿದ್ದು, ನನ್ನನ್ನು ತಂದೆ ರಾಮೇಶ್ವರಕ್ಕೆ ಕರೆದೊಯ್ದು ಹೆಸರಿಟ್ಟಿದ್ದರು. ಅಲ್ಲಿಯೇ ಸಮುದ್ರ ದಂಡೆಯಲ್ಲಿ ಅಕ್ಷರಾಭ್ಯಾಸ ಮಾಡಿಸಿದ್ದರು ಎಂದಿದ್ದಾರೆ.

ನಾವು ನಿಜವಾದ ರಾಮಭಕ್ತರು. ಈ ಬಿಜೆಪಿಯವರೆಲ್ಲ ತೋರಿಕೆಗಾಗಿ ಮತ್ತು ಓಟಿಗಾಗಿ ಇರುವ ರಾಮಭಕ್ತರು, ನಾಟಕದ ರಾಮಭಕ್ತರು ಎಂದು ಅವರು ವ್ಯಂಗ್ಯವಾಡಿದರು. ನಾನು ದಿನವೂ ಬೆಳಗ್ಗೆ ಎದ್ದು ರಾಮನ ಸ್ತುತಿ ಮಾಡುತ್ತೇನೆ ಎಂದು ರಾಮಾಯಣದ ಶ್ಲೋಕ ಹೇಳಿ ಸಭಿಕರನ್ನು ದಂಗು ಬಡಿಸಿದರು.

ಬಿಜೆಪಿಯವರು ಅನ್ಯಧರ್ಮವನ್ನು ದ್ವೇಷ ಮಾಡುವ ಭಾಷಣ ಮಾಡಿ ಸುಲಭವಾಗಿ ಹಿಂದೂ ಮುಖಂಡರಾಗುತ್ತಾರೆ. ಆದರೆ ಹಿಂದೂ ಧರ್ಮಕ್ಕಾಗಿ ನಯಾಪೈಸೆ ದೇಣಿಗೆ ಅವರು ನೀಡುವುದಿಲ್ಲ. ಇತರ ಧರ್ಮಕ್ಕೆ ಬಯ್ಯಲು ಮಾತ್ರ ಅವರಿಗೆ ಗೊತ್ತು. ಸುಲಭವಾಗಿ ನಾಯಕರಾಗಲು ದ್ವೇಷ ಭಾಷಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಲ್ಲಡ್ಕದಲ್ಲಿ ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ಅವರಿಗೆ ಸೇರಿದ ಶಾಲೆಗಳಿದ್ದು, ಅಲ್ಲಿಗೆ ಕೊಲ್ಲೂರು ಮೂಕಾಂಬಿಕೆ ದೇವಾಲಯದಿಂದ ಬಿಸಿಯೂಟದ ಅನುದಾನ ಹೋಗುತ್ತಿತ್ತು. ಅದು ನಿಂತ ಮೇಲೆ ರಾಜ್ಯ ಸರಕಾರದ ವಿರುದ್ಧ ಬಿಜೆಪಿಯ ಹಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಭಿಕ್ಷೆ ಬೇಡಿಯಾದರೂ ನಾನು ಶಾಲಾ ಮಕ್ಕಳಿಗೆ ಊಟ ಹಾಕುವುದಾಗಿ ಪ್ರಭಾಕರ್ ಭಟ್ ಆಗ ಸವಾಲು ಹಾಕಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English